ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿರೋಧ ಸಮಾವೇಶವು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಎಂದು ಮಾಜಿ ಸಚಿವರೂ ಆಗಿರುವ ರಾಜ್ಯ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಖಂಡಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿರೋಧ ಸಮಾವೇಶವು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಎಂದು ಮಾಜಿ ಸಚಿವರೂ ಆಗಿರುವ ರಾಜ್ಯ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದ್ದ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಯಾರೊಬ್ಬರು ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆಯನ್ನು ಪ್ರಸ್ತಾಪಿಸಲಿಲ್ಲ. ಅಲ್ಲದೇ, ಸರ್ಕಾರದ ಪರವಾಗಿ ಇಬ್ಬರು ಸಚಿವರು ಹೋಗಿ ಮನವಿ ಸ್ವೀಕರಿಸಿದ್ದಾರೆ.
ಸಮಾವೇಶದಲ್ಲಿ ಯಾವುದೇ ಟೀಕೆ ತಮ್ಮ ವಿರುದ್ಧ ಮಾಡಿಲ್ಲ ಎನ್ನುವ ಕಾರಣಕ್ಕೆ ಸಚಿವರು ಭಾಗವಹಿಸಿದ್ದರೆಂದು ಟೀಕಾ ಪ್ರಹಾರ ನಡೆಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್‌ಮಟ್ಟು ಅವರೇ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದು, ಸಮಾವೇಶಕ್ಕೆ ಮಾರ್ಗದರ್ಶನ ಮಾಡಿರುವುದು ಸಮಾವೇಶದಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದನ್ನು ದೃಢಪಡಿಸಿದೆ. ಯಾವುದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಮಾವೇಶದಲ್ಲಿ ಖಂಡಿಸಲಿಲ್ಲ. ಬದಲಿಗೆ ಕೇವಲ ಬಿಜೆಪಿ, ಸಂಘ ಪರಿವಾರ ಮತ್ತು ಹಿಂದುತ್ವ ವಿರುದ್ಧದ ವಾಗ್ದಾಳಿಗೆ ಸೀಮಿತವಾಗಿತ್ತು. ಗೌರಿ ಲಂಕೇಶ್ ಹತ್ಯೆಯ ಸಂದರ್ಭವನ್ನು ಬಳಸಿಕೊಂಡು ಮಾಡಿರುವ ಟೀಕೆಯನ್ನು ಗಮನಿಸಿದರೆ ಬಿಜೆಪಿಯನ್ನು ಟೀಕಿಸುವುದೊಂದೇ ಗುರಿಯಾಗಿದೆ ಎನ್ನುವುದು ಸ್ಪಷ್ಟ. ಇಂತಹ ಸಮಾವೇಶಗಳನ್ನು ದೆಹಲಿಯಲ್ಲಿ ಅಥವಾ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಘಟಿಸಿದರೂ ಸತ್ಯ ಮತ್ತು ಬುದ್ಧಿಜೀವಿಗಳ ಹುಳುಕು ಎರಡೂ ಹೊರಗೆ ಬಂದೇ ಬರುತ್ತದೆ ಎಂದು ಕಿಡಿಕಾರಿದರು.
ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ, ತೀಸ್ತಾ ಸೆಟಲ್‌ವಾಡ್ ಸೇರಿದಂತೆ ಇತರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತ್ಯಂತ ಕಟುವಾಗಿ ಟೀಕಿಸಿದರು. ಅಲ್ಲಿಯೇ ಇದ್ದ ಪ್ರಶಾಂತ್ ಭೂಷಣ್, ಡಾ.ಬರಗೂರು ರಾಮಚಂದ್ರಪ್ಪ, ಸ್ವಾಮಿ ಅಗ್ನಿವೇಶ ಮುಂತಾದವರು ಜಿಗ್ನೇಶ್ ಅವರ ಮಾತನ್ನು ತಡೆಯಲಿಲ್ಲ. ಇದನ್ನು ಗಮನಿಸಿದರೆ ಪರೋಕ್ಷವಾಗಿ ಅವರ ಮಾತುಗಳನ್ನು ಈ ಗಣ್ಯರು ಸಮರ್ಥಿಸಿದಂತಾಗಿದೆ. ಇದರ ಅರ್ಥ ಹತ್ಯೆಯಾದ ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ದೊರಕುವುದು ಅಲ್ಲಿ ನೆರೆದಿದ್ದ ಯಾರಿಗೂ ಬೇಕಾಗಿರಲಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಹರಾಜು ಹಾಕುವ ಮಟ್ಟಕ್ಕೆ ಅಲ್ಲಿದ್ದವರು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
