ನವದೆಹಲಿ[ಸೆ.16]: ಯಾವುದೇ ಕಟ್ಟಡಗಳನ್ನು ಗುರುತು ಸಿಗದಂತೆ ಧ್ವಂಸ ಮಾಡಬಲ್ಲ ಇಸ್ರೇಲಿ ನಿರ್ಮಿತ ಸ್ಪೈಸ್‌ 2000 ಬಾಂಬ್‌ಗಳನ್ನು ಭಾರತೀಯ ವಾಯುಪಡೆಗೆ ಪೂರೈಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದು ನೆರೆಯ ಚೀನಾ, ಪಾಕಿಸ್ತಾನದಿಂದ ಸದಾ ಬೆದರಿಕೆ ಎದುರಿಸುತ್ತಿರುವ ಭಾರತದ ದಾಳಿ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದೆ.

ಪಾಕಿಸ್ತಾನದ ಉಗ್ರರ ನೆಲೆಯಾದ ಬಾಲಾಕೋಟ್‌ ಮೇಲಿನ ವೈಮಾನಿಕ ದಾಳಿಯಲ್ಲಿ ಬಳಸಲಾದ ಬಿಲ್ಡಿಂಗ್‌ ಬ್ಲಾಸ್ಟರ್‌(ಕಟ್ಟಡವನ್ನೇ ಧ್ವಂಸಗೊಳಿಸುವ ಸಾಮರ್ಥ್ಯದ) ಮಾದರಿಯ ಸ್ಪೈಸ್‌-2000 ಎಂಬ ಬಿಲ್ಡಿಂಗ್‌ ಬ್ಲಾಸ್ಟರ್‌ ಬಾಂಬ್‌ಗಳನ್ನು ಇಸ್ರೇಲ್‌ ಶಸ್ತ್ರಾಸ್ತ್ರ ಕಂಪನಿಯೊಂದು ಮೊದಲ ಹಂತದಲ್ಲಿ ಗ್ವಾಲಿಯರ್‌ನಲ್ಲಿರುವ ಭಾರತೀಯ ವಾಯುಪಡೆಗೆ ರವಾನಿಸಿದೆ ಎಂದು ಐಎಎಫ್‌ ಮೂಲಗಳು ತಿಳಿಸಿವೆ. ಇಸ್ರೇಲ್‌ನ ಈ ಬಾಂಬ್‌ಗಳನ್ನು ಭಾರತೀಯ ವಾಯುಪಡೆಯ ಮಿರಾಜ್‌-2000 ಯುದ್ಧ ವಿಮಾನದಿಂದ ಮಾತ್ರ ಬಳಕೆ ಮಾಡಬಹುದಾಗಿದೆ. ಹೀಗಾಗಿ, ಮಿರಾಜ್‌-2000 ಯುದ್ಧ ವಿಮಾನದ ಕೇಂದ್ರ ಸ್ಥಾನವಾದ ಗ್ವಾಲಿಯರ್‌ ವಾಯುನೆಲೆಗೆ ಇಸ್ರೇಲ್‌ನ ಈ ಬಾಂಬ್‌ಗಳನ್ನು ತರಿಸಲಾಗಿದೆ ಎನ್ನಲಾಗಿದೆ.

ಬಾಲಾಕೋಟ್ ವಾಯದಾಳಿ ಬಳಿಕ ಒಳನುಸುಳುವಿಕೆ ಕಡಿಮೆ: ಕೇಂದ್ರ

ಪಾಕಿಸ್ತಾನದ ಬಾಲಾಕೋಟ್‌ ಮೇಲಿನ ಯಶಸ್ವಿ ದಾಳಿ ಬಳಿಕ ಜೂನ್‌ ತಿಂಗಳಲ್ಲಿ ಕಟ್ಟಡಗಳನ್ನೇ ಸಂಪೂರ್ಣವಾಗಿ ಧ್ವಂಸ ಮಾಡುವ ಸಾಮರ್ಥ್ಯದ 100ಕ್ಕೂ ಹೆಚ್ಚು ಸ್ಪೈಸ್‌-2000 ಬಾಂಬ್‌ಗಳು ಮತ್ತು 84 ಸಿಡಿತಲೆಗಳನ್ನು ಪೂರೈಸುವ 250 ಕೋಟಿ ರು. ಮೌಲ್ಯದ ಒಪ್ಪಂದಕ್ಕೆ ಇಸ್ರೇಲ್‌ ಶಸ್ತ್ರಾಸ್ತ್ರ ಉತ್ಪಾದನೆ ಕಂಪನಿ ಜೊತೆ ಭಾರತೀಯ ವಾಯುಪಡೆ ಸಹಿ ಹಾಕಿತ್ತು.