ಪಾಟ್ನಾ(ಡಿ. 16)  'ಅತ್ತೆ ತನ್ನ ಜುಟ್ಟು ಹಿಡಿದು ಮನೆಯಿಂದ ಹೊರಹಾಕಿದ್ದಾರೆ' ಇದು ಸಾಮಾನ್ಯ ಕುಟುಂಬದ ಮಹಿಳೆಯೊಬ್ಬರು ಮಾಡಿರುವ ಆರೋಪ ಅಲ್ಲ.  ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಮತ್ತು ರಾಬ್ರಿ ದೇವಿ ಅವರ ಸೊಸೆ ಐಶ್ವರ್ಯಾ ರೈ ಮಾಡಿರುವ ಗಂಭೀರ ಆರೋಪ.

ಅತ್ತೆ ರಾಬ್ರಿ ದೇವಿ ತಮ್ಮನ್ನು ಥಳಿಸಿ, ತಲೆಗೂದಲು ಹಿಡಿದು ಎಳೆದು ಮನೆಯಿಂದ ಹೊರಹಾಕಿದ್ದಾರೆ. ಲಾಲೂ ಅವರ ಮೊದಲ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಮದುವೆಯಾಗಿದ್ದ ಐಶ್ವರ್ಯಾ ರಾಯ್, ಪತಿಯಿಂದ ದೂರವಾಗಿದ್ದರೂ, ಅತ್ತೆ ಮನೆಯಲ್ಲಿಯೇ ವಾಸವಾಗಿದ್ದರು. ಭಾನುವಾರ ರಾಬ್ರಿ ದೇವಿ ಇದ್ದಕ್ಕಿದ್ದಂತೆ ನನ್ನ ಮೇಲೆ ಹಲ್ಲೆ ಮಾಡಿದ್ದು ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾನುವಾರ ಸಂಜೆ ಪಟ್ನಾದ ಸರ್ಕ್ಯುಲರ್ ರಸ್ತೆಯಲ್ಲಿರುವ ಕುಟುಂಬದ ನಿವಾಸ ಎದುರು ಹೈಡ್ರಾಮಾ ನಡೆದಿದೆ. ಐಶ್ವರ್ಯಾ ರಾಯ್ ಕಣ್ಣೀರಿಡುತ್ತಾ ಕುಳಿತಿದ್ದರು. ಲಾಲು ನಿವಾಸದಿಂದ ಕೆಲವೇ ದೂರದಲ್ಲಿ ವಾಸಿಸುತ್ತಿರುವ ಐಶ್ವರ್ಯಾ ಅವರ ತಂದೆ, ಆರ್‌ಜೆಡಿ ಶಾಸಕ ಚಂದ್ರಿಕ ರೈ, ತಾಯಿ ಪೂರ್ಣಿಮಾ ರೈ, ಸಹೋದರರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅರಿತುಕೊಳ್ಳುವ ಯತ್ನ ಮಾಡಿದ್ದಾರೆ.

ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ..ಯಾಕೆ?

ಲಾಲು ಪ್ರಸಾದ್ ಯಾದವ್ ಅವರ ಮಗನಾಗಿರುವ ತೇಜ್ ಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯಾ ರೈ ಅವರು ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ತಮ್ಮ ವಿಚ್ಛೇದನ ವಿಚಾರದಲ್ಲಿ ತನ್ನ ತಂದೆ, ತಾಯಿಯರ ಹೆಸರನ್ನು ಎಳೆದು ತರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಇದೇ ವಿಚಾರದ ಕುರಿತಾಗಿ ತನ್ನ ಅತ್ತೆಯ ಬಳಿ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಅತ್ತೆ ರಾಬ್ರಿ ದೇವಿ ಅವರು ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬುದು ಸೊಸೆ ಐಶ್ವರ್ಯಾ ಆರೋಪ.

ಈ ಘಟನೆಗೆ ಸಂಬಂಧಿಸಿದಂತೆ ಸಚಿವಾಲಯ ಪೊಲೀಸ್ ಠಾಣೆಯಲ್ಲಿ ರಾಬ್ರಿ ದೇವಿ ವಿರುದ್ಧ  ದೂರು ದಾಖಲಾಗಿದೆ. ಮತ್ತು ಹಲ್ಲೆಯಿಂದ ಗಾಯಗೊಂಡಿದ್ದ ಐಶ್ವರ್ಯಾ ರೈ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಹಿರಿಯ ಜೋಡಿಯ ವಿಚ್ಛೇದನದ ಕತೆ ಬಹಳ ಮಜವಾಗಿದೆ!

ಘಟನೆಗೆ ಏನು ಕಾರಣ?  ನಾನು ಮಹಡಿ ಮೇಲಿನ ನನ್ನ ಕೊಠಡಿಯಲ್ಲಿ ಟಿ.ವಿ ನೋಡುತ್ತಿದ್ದೆ. ತೇಜ್ ಪ್ರತಾಪ್ ಯಾದವ್‌ನ ಬೆಂಬಲಿಗರು ನನ್ನ ಮತ್ತು ನನ್ನ ಪೋಷಕರ ಕುರಿತು ಆಕ್ಷೇಪಾರ್ಹ ಬರಹಗಳನ್ನು ಬರೆದ ಪೋಸ್ಟರ್‌ಗಳನ್ನು ಪಾಟ್ನಾ ವಿಶ್ವವಿದ್ಯಾಲಯದ ಆವರಣದ ತುಂಬಾ ಅಂಟಿಸುತ್ತಿದ್ದಾರೆ ಎಂಬ ಮಾಹಿತಿ ಬಂತು. ನನ್ನ ಪ್ರತಿಷ್ಠೆಗೆ ಸಾರ್ವಜನಿಕವಾಗಿ ಹಾಳುಮಾಡುತ್ತಿರುವುದು ಸಹಿಸಲಾಗುವುದಿಲ್ಲ ಮತ್ತು ಇದರಲ್ಲಿ ವಿನಾಕಾರಣ ನನ್ನ ತಂದೆ ತಾಯಿಯನ್ನು ಎಳೆದು ತರುವುದನ್ನು ಒಪ್ಪುವುದಿಲ್ಲ ಎಂದು ಮನೆಯಲ್ಲಿ ಕೆಳಗಿದ್ದ ಅತ್ತೆಯ ಬಳಿ ಹೇಳಿಕೊಂಡಾಗ ನನ್ನ ಮೇಲೆ ಹಲ್ಲೆ ಮಾಡಲಾಯಿತು ಎಂದು ಐಶ್ವರ್ಯಾ  ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ನ್ಯಾಯಾಲಯದಲ್ಲಿದ್ದ ವಿಚ್ಛೇದನ ಪ್ರಕರಣ ಇದೀಗ ಬೀದಿಗೆ ಬಂದಿದೆ. ಕುಟುಂಬದ ನಡುವೆ ಇದ್ದ ಗೊಂದಲ ಮತ್ತಷ್ಟು ತಾರಕಕ್ಕೆ ಏರಿದ್ದು ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.