ನವದೆಹಲಿ, (ಆ.10):  ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ್ದು, ಹೊಸ ಅಧ್ಯಕ್ಷ ಆಯ್ಕೆ ಸಂಬಂಧ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಇಂದು (ಶನಿವಾರ) ಬೆಳಗ್ಗೆ ಸಭೆ ಕರೆದಿತ್ತು. ಆದ್ರೆ ಕಾರಣಾಂತರಗಳಿಂದ ಬೆಳಗ್ಗಿನ ಸಭೆಯನ್ನು ಶನಿವಾರ ರಾತ್ರಿ 8ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಆದ್ರೆ, ರಾತ್ರಿ 8ಕ್ಕೆ ನಡೆಯುವ  ಸಿಡಬ್ಲ್ಯುಸಿಯ ಮಹತ್ವದ ಸಭೆಯಿಂದ ಸಿದ್ದರಾಮಯ್ಯ ದೂರ ಉಳಿಯಲಿದ್ದಾರೆ.

ನೆರೆ ಪೀಡಿತ ಪ್ರದೇಶಗಳಿಗೆ ತೆರಳದ ಸಿದ್ದರಾಮಯ್ಯ ದಿಢೀರ್ ದೆಹಲಿಗೆ

ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ನವದೆಹಲಿ ಹೋಗಿದ್ದೇನು ನಿಜ. ಆದ್ರೆ ಅವರು ತಮ್ಮ ಕಣ್ಣಿನ ತಪಾಸಣೆಗಾಗಿ ವೈದ್ಯರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ  ಸಿಡಬ್ಲ್ಯುಸಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದನ್ನು ಸ್ವತಃ ಸಿದ್ದರಾಮಯ್ಯ ಅವರೇ ಖಚಿತಪಡಿಸಿದ್ದಾರೆ.

ನವದೆಹಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದು, ಸಿಡಬ್ಲುಸಿ ಸಭೆ ರಾತ್ರಿ 8ಕ್ಕೆ ಮುಂದೂಡಿಕೆಯಾಗಿದ್ದು,  ನಾನು ರಾತ್ರಿಯ ಸಭೆಯಲ್ಲಿ ಭಾಗಿಯಾಗುವುದಿಲ್ಲ. ನಾಳೆ ಬೆಳಗ್ಗೆ ವೈದ್ಯರನ್ನು ಭೇಟಿಯಾಗಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ಸಿಗೆ ಇಂದು ಹೊಸ ಅಧ್ಯಕ್ಷ: ಕನ್ನಡಿಗನಿಗೆ ಸಿಗುತ್ತಾ ಅವಕಾಶ?

 ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಎಲ್ಲರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಚರ್ಚೆ ಮಾಡಲು 5 ತಂಡ ರಚಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾದ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ರಾಜಕೀಯಕ್ಕೆ ಬಂದ ಮೇಲೆ ಯಾವತ್ತೂ ಇಂತಹ ಪ್ರವಾಹ ಬಂದಿಲ್ಲ.

ರಾಜ್ಯದ 16 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಯಾವ ಕಾಲದಲ್ಲೂ ಇಷ್ಟೊಂದು ಪ್ರವಾಹ ಬಂದಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. NDRF ಹೊರತು ಪಡಿಸಿ 5 ಸಾವಿರ ಕೋಟಿ ರು. ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ರಾಜ್ಯದ ಬೇರೆ ಭಾಗಗಳಿಗೂ ಹೋಗಬೇಕಿತ್ತು. ಆದ್ರೆ ನನ್ನ ಕಣ್ಣಿನ ಅಪರೇಷನ್ ಆದ ಮೇಲೆ ಪ್ರವಾಹ ಬಂತು.‌ ಇಲ್ಲದಿದ್ದರೆ ಅಪರೇಷನ್ ಅನ್ನು ಮುಂದೂಡುತ್ತಿದ್ದೆ ಎಂದರು.