ಕಾಂಗ್ರೆಸ್ಸಿಗೆ ಇಂದು ಹೊಸ ಅಧ್ಯಕ್ಷ| ಬೆಳಗ್ಗೆ 11ಕ್ಕೆ ಸಿಡಬ್ಲ್ಯುಸಿ ಸಭೆ| ಕನ್ನಡಿಗನಿಗೆ ಸಿಗುತ್ತಾ ಅವಕಾಶ?| ರಾಹುಲ್‌ ರಾಜೀನಾಮೆಯಿಂದ 2.5 ತಿಂಗಳಿಂದ ಹುದ್ದೆ ಖಾಲಿ

ನವದೆಹಲಿ[ಆ.10]: ರಾಹುಲ್‌ ಗಾಂಧಿ ರಾಜೀನಾಮೆಯಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಖಾಲಿ ಇರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯುವ ನಿರೀಕ್ಷೆ ಇದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ ಕುಮಾರ್‌ ಶಿಂಧೆ, ಮುಕುಲ್‌ ವಾಸ್ನಿಕ್‌ ಹಾಗೂ ಕಿರಿಯ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್‌ ಪೈಲಟ್‌ ಪೈಕಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಇವರಲ್ಲದೆ ಅಚ್ಚರಿಯ ನಾಯಕನನ್ನೇನಾದರೂ ಕಾಂಗ್ರೆಸ್‌ ಆಯ್ಕೆ ಮಾಡುತ್ತಾ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಬೆಳಗ್ಗೆ 11ಕ್ಕೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ಸಿನ ಪರಮೋಚ್ಚ ನೀತಿ ನಿರೂಪಣಾ ಸಮಿತಿಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ನೂತನ ನಾಯಕನ ಆಯ್ಕೆಯೇ ಈ ಸಭೆಯ ಅಜೆಂಡಾ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್‌ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೋ ಅಥವಾ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡುತ್ತದೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಮೇ 25ರಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಲೋಕಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ರಾಹುಲ್‌ ಗಾಂಧಿ ಅವರು ರಾಜೀನಾಮೆ ಪ್ರಕಟಿಸಿದ್ದರು. ಪಕ್ಷದ ನಾಯಕರು ರಾಹುಲ್‌ ಅವರನ್ನು ಮನವೊಲಿಸುವ ಪ್ರಯತ್ನಗಳು ವಿಫಲವಾಗಿದ್ದವು. ಕೆಲವು ದಿನಗಳ ಬಳಿಕ ರಾಹುಲ್‌ ಅವರು 4 ಪುಟಗಳ ರಾಜೀನಾಮೆ ಪತ್ರವನ್ನು ಟ್ವೀಟ್‌ ಮಾಡಿದ್ದರು. ರಾಹುಲ್‌ ರಾಜೀನಾಮೆ ನಂತರ ಖರ್ಗೆ ಸೇರಿ ಹಲವು ನಾಯಕರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಈ ನಡುವೆ ಯುವ ನಾಯಕರಿಗೆ ಮಣೆ ಹಾಕಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು. ಹೀಗಾಗಿ ಹಿರಿಯ ಹಾಗೂ ಕಿರಿಯ ನಾಯಕರ ಪೈಕಿ ಯಾರಿಗೆ ಕಾಂಗ್ರೆಸ್‌ ಅವಕಾಶ ನೀಡಲಿದೆ ಎಂದು ನೋಡಬೇಕಾಗಿದೆ.

ಈ ಮಧ್ಯೆ, ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಯಲ್ಲಿ ಇನ್ನು ಅಲ್ಪ ವಿಳಂಬವೂ ಆಗಬಾರದು ಎಂದು ಪಕ್ಷದ ನಾಯಕ ಅಭಿಷೇಕ್‌ ಮನು ಸಿಂಘ್ವಿ ಟ್ವೀಟ್‌ ಮಾಡಿದ್ದಾರೆ.