ಬೆಂಗಳೂರು [ಆ.10] :   ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ತಪ್ಪಿಸಿಕೊಂಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ದೆಹಲಿಗೆ ತೆರಳಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ರಾತ್ರಿ ದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ರಾತ್ರಿಯೇ ನಗರಕ್ಕೆ ವಾಪಸ್ಸಾಗಲಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ದೆಹಲಿಯಲ್ಲೇ ಇದ್ದು, ಅವರೊಂದಿಗೆ ಸಿದ್ದರಾಮಯ್ಯ ಕೂಡ ಹೈಕಮಾಂಡ್ ಸೂಚನೆಯಂತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಎಲ್ಲ ಮುಗಿತಲ್ಲಾ, ಇನ್ನಾದ್ರೂ ಇತ್ತ ಗಮನ ಕೊಡಿ’ ಮೋದಿಗೆ ಸಿದ್ದು ಸಲಹೆ

ಪ್ರವಾಹ ಸ್ಥಿತಿ ಎದುರಿಸುತ್ತಿರುವ ಸ್ವಕ್ಷೇತ್ರ ಬಾದಾಮಿ ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಕಾರಣ ನೀಡಿದ್ದ ಸಿದ್ದರಾಮಯ್ಯ ಅವರು, ಕಣ್ಣಿನ ಚಿಕಿತ್ಸೆಗೆ ಒಳಗಾಗಿರುವುದರಿಂದ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಲಾಗಿಲ್ಲ, ಬದಲಿಗೆ ಪುತ್ರ ಯತೀಂದ್ರ ಅವರಿಗೆ ಭೇಟಿ ನೀಡಲು ತಿಳಿಸಿರುವುದಾಗಿ ಟ್ವೀಟ್ ಮಾಡಿದ್ದರು. ಆದರೆ, ಇದೀಗ
ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ