ರಕ್ತದ ಬಣ್ಣ ಒಂದೇ: ಹಿಂದೂ ಗೆಳೆಯನಿಗಾಗಿ ರಕ್ತ ನೀಡಲು ಉಪವಾಸ ಕೈಬಿಟ್ಟ ಅಹ್ಮದ್!
ಧರ್ಮಕ್ಕಿಂತ ಮಾನವೀಯತೆಯೇ ಮೇಲು| ರೋಗಿಯ ಪ್ರಾಣ ಕಾಪಾಡಲು ಉಪವಾಸ ಕೈಬಿಟ್ಟ ಅಹ್ಮದ್| ರಕ್ತದಾನ ಮಾಡಿ ಹಿಂದೂ ಗೆಳೆಯನ ಪ್ರಾಣ ಕಾಪಾಡಿದ ಮುಸ್ಲಿಂ ಮಿತ್ರ!
ಅಸ್ಸಾ[ಮೇ.19]: ವಿಶ್ವದಾದ್ಯಂತ ರಂಜಾನ್ ಪವಿತ್ರ ತಿಂಗಳು ಆರಂಭವಾಗಿದೆ. ಮುಸ್ಲಿಂ ಭಾಂದವರು ಉಪವಾಸ ಆರಂಭಿಸಿದ್ದಾರೆ. ಹೀಗಿರುವಾಗ ಅಸ್ಸಾಂನ ಮುಸ್ಲಿಂ ಯುವಕನೊಬ್ಬ ತನ್ನ ಹಿಂದೂ ಗೆಳೆಯನ ಪ್ರಾಣ ಕಾಪಾಡಲು ಉಪವಾಸವನ್ನು ಮುರಿದು ರಕ್ತದಾನ ಮಾಡಿದ್ದಾನೆ. ಈ ಮೂಲಕ ಧರ್ಮಕ್ಕಿಂತ ಮಾನವೀಯತೆ ಮೇಲೆ ಎಂಬುವುದನ್ನು ಸಾರಿದ್ದಾನೆ.
ಮಂಗಲ್ದೋಯಿ ಜಿಲ್ಲೆಯ 26 ವರ್ಷದ ಪಾನುಲ್ಲಾ ಅಹ್ಮದ್ ಎಂಬಾತನೇ ಹಿಂದೂ ಯುವಕನ ಪ್ರಾಣ ಕಾಪಾಡಲು ಉಪವಾಸ ಮುರಿದ ಯುವಕ. ರಕ್ತದಾನ ಮಾಡಿದ ಅಹ್ಮದ್ ಈ ಕುರಿತಾಗಿ ವಿವರಿಸುತ್ತಾ 'ನಾನು ನನ್ನ ಕೆಲಸ ಮುಗಿಸಿ ಬಂದು ಕುಳಿತಿದ್ದೆ. ಈ ವೇಳೆ ನನ್ನ ರೂಂ ಮೇಟ್ ತಪಶ್ ಭಗವತಿ ಬೇಸರದಿಂದಿರುವುದನ್ನು ಗಮನಿಸಿದೆ. ಆತನ ಬಳಿ ಏನಾಯ್ತು ಎಂದು ಕೇಳಿದಾಗ ಆತ ಎಲ್ಲವನ್ನೂ ವಿವರಿಸಿದ' ಎಂದಿದ್ದಾನೆ.
9 ಅಡಿ ಗೋಡೆಯಲ್ಲಿ ದೇಶದ ಸಾಮರಸ್ಯ: ಮಂದಿರ, ಮಸೀದಿಯ ಕತೆಯೇ ಸ್ವಾರಸ್ಯ!
ಅಹ್ಮದ್ ಗೆಳೆಯ ತಪಶ್ ಟೀಂ ಹ್ಯುಮಾನಿಟಿ ಎಂಬ ಬ್ಲಡ್ ಡೊನೇಷನ್ ಗ್ರೂಪ್ ಸದಸ್ಯನಾಗಿದ್ದ. ಅಲ್ಲದೆ ಹಿಂದಿನ ರಾತ್ರಿ ಓರ್ವನಿಗೆ o+ ರಕ್ತದ ಅವಶ್ಯಕತೆ ಇದೆ ಎಂದು ಆತನಿಗೆ ಕರೆ ಬಂದಿತ್ತು. ಇದರಿಂದ ಆತ ತಲೆಕೆಡಿಸಿಕೊಂಡಿದ್ದ. ಈ ವೇಳೆ ತನ್ನ ಗೆಳೆಯನಿಗೆ ಸಹಾಯ ಮಾಡಲು ಮುಂದಾದ ಅಹ್ಮದ್ ಆತನಿಗೆ ಸಮಾಧಾನ ಹೇಳಿ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾನೆ.
ಆಸ್ಪತ್ರೆ ತಲುಪುತ್ತಿದ್ದಂತೆಯೇ ವೈದ್ಯರ ಬಳಿ ಮಾತನಾಡಿದ ಅಹ್ಮದ್ ತನ್ನ ಪರಿಸ್ಥಿತಿ ವಿವರಿಸಿದ್ದಾನೆ ಹಾಗೂ ಉಪವಾಸವಿದ್ದುಕೊಂಡೇ ರಕ್ತದಾನ ಮಾಡಬಹುದೇ ಎಂದು ವಿಚಾರಿಸಿದ್ದಾನೆ. ಇದಕ್ಕೆ ವೈದ್ಯರು ನಿರಾಕರಿಸಿದಾಗ, ಧರ್ಮವನ್ನು ಬದಿಗಿಟ್ಟು ಯೋಚಿಸಿದ ಅಹ್ಮದ್, ಆ ಕೂಡಲೇ ಅಲ್ಲೇ ತನ್ನ ಉಪವಾಸ ಮುರಿದು ರಕ್ತದ ಅವಶ್ಯಕತೆ ಇದ್ದ ವ್ಯಕ್ತಿಗೆ ರಕ್ತದಾನ ಮಾಡಿದ್ದಾನೆ.
ಇದನ್ನು ಕಂಡ ಅಹ್ಮದ್ ಗೆಳೆಯ ತಪಶ್ 'ಆತನನ್ನು ನನ್ನ ಗೆಳೆಯನೆನ್ನಲು ನನಗೆ ಹೆಮ್ಮೆಯಾಗುತ್ತದೆ. ಆತ ತನ್ನ ಧರ್ಮಕ್ಕಿಂತ ಮೊದಲು ಮಾನವೀಯತೆಗೆ ಮಹತ್ವ ನೀಡಿದ್ದಾನೆ' ಎಂದಿದ್ದಾರೆ. ಈ ಇಬ್ಬರು ಗೆಳೆಯರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗೆ ಸಿಖ್ ವ್ಯಾಪಾರಿಯಿಂದ ವಿಶೇಷ ಆಫರ್!