ನವದೆಹಲಿ[ಮೇ.18]: ಆಸ್ಕಾ ಮಸೀದಿ ಆವರಣದಲ್ಲಿರುವ ಬಿಲ್ವಿ ಪತ್ರೆಯ ಎಲೆಗಳೇ, ಆವರಣದಾಚೆ ಇರುವ ಲಕ್ಷ್ಮೀ ನಾರಾಯಣ ಮಂದಿರದಲ್ಲಿರುವ ಶಿವಲಿಂಗಕ್ಕೆ ಶೃಂಗಾರ. ಬಾಗಿಲಿನಾಚೆ ಇರುವ ಮಂದಿರದಲ್ಲಿ ಮಹಾ ಆರತಿಯ ಭಜನೆ ಹಾಗೂ ಗಂಟೆ ಜಾಗಟೆ ಧ್ವನಿ ನಿಂತ ಬಳಿಕವೇ ಈ ಬದಿಯ ಮಸೀದಿಯಲ್ಲಿ ಆಜಾನ್ ಸದ್ದು ಮೊಳಗುತ್ತದೆ. ಇತ್ತ ಮಸೀದಿ ಮೌಲ್ವಿ, ದೇವಸ್ಥಾನದ ಅರ್ಚಕರು ಸಿಕ್ಕರೆ 'ರಾಮ್ ರಾಮ್' ಎಂದು ನಗು ಮೊಗದಿಂದ ಮಾತನಾಡಿದರೆ, ಇತ್ತ ಮಂದಿರದ ಅರ್ಚಕರು ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗೆ ಆಗಮಿಸುವ ಮುಸ್ಲಿಂ ಭಕ್ತರಿಗೆ ಯಾವ ತೊಂದರೆಯೂ ಆಗಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುತ್ತಾರೆ. 

ಈದ್ ಹಾಗೂ ದೀಪಾವಳಿ ವೇಳೆ ಸಿಹಿ ತಿಂಡಿ ಅದಲು ಬದಲಾಗುತ್ತಿರುತ್ತದೆ. ಪಂಜಾಬ್ ನಲ್ಲಿರುವ ಸಾಮ್ಸನ್ಸ್ ಕಾಲನಿಯಲ್ಲಿರುವ ಈ ಮಂದಿರ- ಮಸೀದಿಗಳ ನಡುವೆ 9 ಇಂಚಿನ ದಪ್ಪಗಿನ ಏಕಾಂಗಿ ಗೋಡೆಯಿದ್ದರೂ ಅದನ್ನು ಮೀರಿಸುವ ಸಾಮರಸ್ಯವಿದೆ. ನೆರೆ ಹೊರೆಯವರ ಈ ಪ್ರೀತಿ ಸಹಬಾಳ್ವೆ ಎದುರು ಇತರರಂತೆ ಚುನಾವಣೆಗಳು, ರಾಜಕಾರಣಿಗಳೆಲ್ಲರೂ ಮಂಡಿಯೂರಿದ್ದಾರೆ.

ಈ ಮಂದಿರ, ಮಸೀದಿ ನಡುವಿನ ಬಾಂಧವ್ಯದ ಕುರಿತು ವರ್ಣಿಸಿರುವ ಮಂದಿರದ ಅರ್ಚಕ ಚೇತನ್ ಶರ್ಮಾ[26] 'ಇಲ್ಲೂ ಅಯೋಧ್ಯೆಯಲ್ಲಿರುವಂತಹ ಚಿತ್ರಣವೇ ಇದೆ. ಆದರೆ ಇದು ಪ್ರೀತಿ ಹಾಗೂ ಶಾಂತಿಯಿಂದ ಕೂಡಿದ ಅಯೋಧ್ಯೆ. ಇಲ್ಲಿನ ಶಾಂತಿ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಚುನಾವಣೆ ಹಾಗೂ ರಾಜಕಾರಣಿಗಳೂ ವಿಫಲರಾಗಿದ್ದಾರೆ. ಚುನಾವಣೆಗಳು ಇಂದು ಬಂದು ನಾಳೆ ಹೋಗುತ್ತವೆ. ಆದರೆ ನಮ್ಮ ಕಷ್ಟಕ್ಕೆ ನೆರವಾಗುವವರು ನೆರೆ ಹೊರೆಯವರಷ್ಟೇ. ಪ್ರತಿ ದಿನ ಒಂದಿಲ್ಲೊಂದು ಕಾರ್ಯದಲ್ಲಿ ಅವರ ಅಗತ್ಯ ನಮಗೆ ಬೇಕಾಗುತ್ತದೆ' ಎಂದಿದ್ದಾರೆ.

ಇದೇ ವೇಳೆ ಮಂದಿರದಲ್ಲಿ ಅರ್ಚಕರ ಬದಿಯಲ್ಲೇ ಕುಳಿತ ಮಸೀದಿ ಮೌಲ್ವಿ ಮೊಹಮ್ಮದ್ ಹಸೀಂ[26] ಮಾತನಾಡುತ್ತಾ 'ನಾವಿಲ್ಲಿ ಮಂದಿರ ಮಸೀದಿಗಳ ಬಗ್ಗೆ ಮಾತನಾಡುವುದಿಲ್ಲ. ಯಾರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ನಾವು ಪರಸ್ಪರ ಗೌರವಿಸುತ್ತೇವೆ, ಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತೇವೆ. ಏಣಿಯಿಂದ ಹಿಡಿದು ನೀರಿನವರೆಗೆ ನಾವು ಎಲ್ಲವನ್ನೂ ಹಂಚಿಕೊಂಡು ಬದುಕುತ್ತೇವೆ' ಎಂದಿದ್ದಾರೆ.

ಈ ಮಂದಿರ ಮಸೀದಿ ಕೇವಲ 9 ಇಂಚಿನ ಗೋಡೆಯಿಂದ ಬೇರ್ಪಟ್ಟರೂ, ಇಲ್ಲಿನ ಜನರು ಮಾತ್ರ ಅದೆಷ್ಟೇ ಜಾತಿ, ಧರ್ಮದ ಜಗಳವಾದರೂ ಒಂದಾಗಿ ಎದುರಿಸಿದ್ದಾರೆ. ಮಸೀದಿ ಮುಖ್ಯಸ್ಥ ಮೊಹಮ್ಮದ್ ಶಬೀರ್ 2016ರ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾ 'ಅಂದು ೇರ್ಪಟ್ಟಿದ್ದ ಆತಂಕದ ವಾತಾವರಣದ ವೇಳೆ ಆಸುಪಾಸಿನ ಹಿಂದೂ ಹಾಗೂ ಸಿಖ್ ಸಮುದಾಯದವರೇ ಮಸೀದಿಗೆ ಹಾನಿಯಾಗದಂತೆ ಕಾವಲು ನಿಂತಿದ್ದರು' ಎಂದಿದ್ದಾರೆ.

ಜನರ ಮಧ್ಯೆ ಜಗಳ ತಂದು ಹಾಕುವುದೇ ರಾಜಕಾರಣಿಗಳ ಕೆಲಸ, ಅವರು ಅಧಿಕಾರ ಪಡೆಯಲು ಏನು ಬೇಕಾದರೂ ಮಾಡಲು ಸಿದ್ದ. ನಿಮಗೆ ಯಾರಿಗಿಷ್ಟವೋ ಅವರಿಗೇ ಮತ ನೀಡಿ. ಆದರೆ ನಿಮ್ಮ ರಾಜಕೀಯವನ್ನು ಮಂದಿರ, ಮಸೀದಿ ಆವರಣಕ್ಕೆ ತರಬೇಡಿ ಎನ್ನುವುದು ಇಲ್ಲಿನ ಧರ್ಮಪಾಲಕರ ಮಾತಾಗಿದೆ. 

ಇಲ್ಲಿ ದಸರಾ, ದೀಪಾವಳಿ ಹಾಗೂ ಇನ್ನಿತರ  ಹಿಂದೂ ಧರ್ಮದ ಹಬ್ಬ ಆಚರಣೆಗಳು ನಡೆಯುವಾಗ ಮುಸ್ಲಿಂ ಸಮುದಾಯದವರೇ ಭಕ್ತರನ್ನು ಚಹಾ ನೀಡಿ ಸ್ವಾಗತಿಸುತ್ತಾರೆ. ಒಂದೆಡೆ ಮೌಲ್ವಿ 'ಪಂಡಿತ್ ಜೀ ರಾಮ್ ರಾಮ್' ಎಂದು ಸ್ವಾಗತಿಸಿದರೆ, ಇತ್ತ ಅರ್ಚಕರು ರಾಮನಂತೆ ಅಲ್ಲಾಹು ಕೂಡಾ ದೇವರೇ ಅಲ್ವೇ ಎನ್ನುತ್ತಾರೆ.

ಅದೇನೇ ಇದ್ದರೂ ಧರ್ಮ ವಿಚಾರದಲ್ಲಿ ಹಿಂಸಾಚಾರ ನಡೆಯುವ ಇಂದಿನ ದಿನಗಳಲ್ಲಿ ಪಂಜಾಬ್ ನ ಈ ಮಂದಿರ, ಮಸೀದಿ... ಇಲ್ಲಿನ ಮೌಲ್ವಿ ಹಾಗೂ ಅರ್ಚಕರು ಸೇರಿದಂತೆ ಇಲ್ಲಿನ ಜನತೆ ಸಹಬಾಳ್ವೆಯ ಬದುಕು ನಡೆಸಲು ಎಲ್ಲರಿಗೂ ಪ್ರೇರಣೆ. ವೈಯುಕ್ತಿಕ ರಾಜಕೀಯ ಅಭಿಪ್ರಾಯ ಏನೇ ಇರಬಹುದು ಆದರೆ ಇದು ನಮ್ಮ ನಡುವಿನ ಸಾಮರಸ್ಯಕ್ಕೆ ಯಾವತ್ತೂ ಧಕ್ಕೆಯುಂಟು ಮಾಡಬಾರದು

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.