ಕರುಣಾನಿಧಿ ನಿಧನಕ್ಕೆ ಕರ್ನಾಟಕ ಪ್ರತಿಕ್ರಿಯಿಸಿದ್ದು ಹೀಗೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 9:55 PM IST
How Karnataka reacted on DMK Chief M. Karunanidhi death
Highlights

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿಧನಕ್ಕೆ ರಾಜ್ಯದ ನಾಯಕರು ಕಂಬನಿ ಮಿಡಿದಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲೂ ಸ್ವಯಂಪ್ರೇರಿತ ಶೋಕಾಚರಣೆ ವ್ಯಕ್ತವಾಗಿದೆ.

 

ಬೆಂಗಳೂರು[ಆ.7] ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ. ಇಡೀ ದೇಶವು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ನಾನು ಕರುಣಾನಿಧಿ ಅವರನ್ನು ಸುಮಾರು 5 ದಶಕಗಳಿಂದ ಬಹಳ ಹತ್ತಿರದಿಂದ ಬಲ್ಲೆ. ಈ ದಿನ ನಾನು ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೀನಿ. ನಾನು ಪ್ರಧಾನಮಂತ್ರಿ ಆಗಬೇಕಾದರೆ ಕರುಣಾನಿಧಿ ಅವರ ಪಾತ್ರ ಬಹಳ ದೊಡ್ಡದು ಎಂದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ
ಬದುಕಿದ್ದಾಗಲೇ ದಂತಕತೆಯಾಗಿದ್ದ ಕರುಣಾನಿಧಿ ನಿಧನ ದಕ್ಷಿಣ ಭಾರತದ ಬಹುದೊಡ್ಡ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ‘ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ. ಹಲವು ಬಾರಿ ಶ್ರೀ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು ಎಂದಿದ್ದಾರೆ.

ತಮಿಳರ ದ್ರಾವಿಡ ಕಣ್ಮಣಿ ಇನ್ನಿಲ್ಲ

ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳು ಅನುಕರಿಸುತ್ತಿವೆ.ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿ ಅವರ ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ. ಅವರ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಕರುಣಾನಿಧಿ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಾ ಸಂತಾಪ ಸೂಚಿಸಿದ್ದಾರೆ. ಹಿರಿಯ ರಾಜಕಾರಣಿ ಕರುಣಾನಿಧಿ ನಿಧನವು ಮನಸ್ಸಿಗೆ ಅತೀವ ನೋವು ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಪೇಜಾವರ ಸ್ವಾಮೀಜಿ ಸಂತಾಪ
ತಮಿಳುನಾಡಿನ ಜನತೆಯಲ್ಲಿ ಸ್ವಾಭಿಮಾನ ಬೆಳೆಸಿ,ಯಾವುದೇ ಏಳು ಬೀಳಿಗೆ ಕುಗ್ಗದ ವ್ಯಕ್ತಿ ಕರುಣಾನಿಧಿ. ಹಲವು ಕಾಲ ಜನಸೇವೆ ಮಾಡಿ ಜನಮನ್ನಣೆಗಳಿಸಿದ ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ
ಅವರ ಆತ್ಮಕ್ಕೆ ಶಾಂತಿ ಸಿಗಲು ಆ‌ ದೇವರಲ್ಲಿ ಸ್ಮರಿಸುತ್ತೇನೆ ಎಂದು ಉಡುಪಿ ಪೇಜಾವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಕಲೈನಾರ್ ಬಗ್ಗೆ ನೀವು ತಿಳಿದಿರಬೇಕಾದ 7 ವಿಷಯಗಳು!

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್
ಜನರನ್ನು ಒಂದು ಕನಸಿನ‌ಲೋಕಕ್ಕೆ ಕರೆದುಕೊಂಡು ಹೋಗ ಶಕ್ತಿ ಇದ್ದ ವ್ಯಕ್ತಿ ಬಡ ಜನರ ಒಂದು ಹೊತ್ತಿನ ಊಟಕ್ಕಾಗಿ ಹಾಡನ್ನ ಬರೆದ ವ್ಯಕ್ತಿ. ತಮಿಳುನಾಡಿನಲ್ಲಿ‌ 5 ಬಾರಿ ಮುಖ್ಯಮಂತ್ರಿಯಾಗಿದ್ದವರು..
ಅಂಬೇಡ್ಕರ್ ವಾದವನ್ನ ಮೆಚ್ಚಿ ಆ ರೀತಿಯಲ್ಲಿ ಆಡಳಿತ ಮಾಡುತ್ತಿದ್ದರು. ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯೋ ಹೆಸರು‌ ಕರುಣಾ‌ನಿಧಿ ಎಂದು ವಿಶ್ವನಾಥ್ ಕೊಂಡಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಜ್ಯದಿಂದ ಬಸ್ ಸಂಚಾರ ಇಲ್ಲ:
ತಮಿಳುನಾಡಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ಸೇವೆ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ತಮಿಳುನಾಡಿಗೆ ಹೋಗಿರುವ ಬಸ್ ಗಳನ್ನು ಅಲ್ಲೇ ಸ್ಟಾಪ್ ಮಾಡಲಾಗಿದೆ.  ಕೆಎಸ್ ಆರ್ ಟಿಸಿ ಬಸ್ ಗಳಿಗೆ ಪೊಲೀಸರಿಂದ ಸೂಕ್ತ ಭದ್ರತೆ ಒದಗಿಸಲಾಗಿದ್ದು ಯಾವಿದೇ ಆತಂಕ ಇಲ್ಲ ಎಂದು  ಕೆಎಸ್ ಆರ್ ಟಿಸಿ ತಿಳಿಸಿದೆ.

ಹೊಸೂರಲ್ಲಿ ಸ್ವಯಂ ಪ್ರೇರಿತ ಬಂದ್
ರಾಜ್ಯದ ಗಡಿಭಾಗ ಹೊಸೂರಿನಲ್ಲಿ‌ ಬಸ್ ಸಂಚಾರ ಬಂದ್ ಆಗಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡಲಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆನೇಕಲ್ ನಲ್ಲಿಯೂ ಸಹ ಅಂಗಡಿ ಮುಗ್ಗಟ್ಟುಗಳನ್ನು‌ ಮುಚ್ಚಿ‌ ಗೌರವ ಸೂಚಿಸಲಾಗಿದೆ.

ಚಾಮರಾಜನಗರ ಸ್ಥಬ್ಧ
ಚಾಮರಾಜನಗರ ಸ್ಥಬ್ಧವಾಗಿದ್ದು ತಮಿಳುನಾಡು ಕಡೆ ತೆರಳುವ ಬಸ್ ಸಂಚಾರ ಬಂದ್ ಆಗಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ತಮಿಳುನಾಡಿಗೆ ಹೋಗುತ್ತಿದ್ದ 36  ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತ.ವಾಗಿದ್ದು ತಮಿಳುನಾಡಿನಲ್ಲಿ ಇರುವ ಬಸ್ ಗಳು ಅಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್  ಸುವರ್ಣ ನ್ಯೂಸ್.ಕಾಂ ಗೆ ತಿಳಿಸಿದ್ದಾರೆ.

loader