Asianet Suvarna News Asianet Suvarna News

ತಮಿಳರ ದ್ರಾವಿಡ ಕಣ್ಮಣಿ ಇನ್ನಿಲ್ಲ

  • ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ
  • ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ; ತಮಿಳುನಾಡಿದಾದ್ಯಂತ ಬಿಗಿ ಭದ್ರತೆ
Former Chief Minister of Tamilnadu  DMK Chief  M Karunanidhi is No More

ಚೆನ್ನೈ[ಆ.07]: ದ್ರಾವಿಡ ಚಳವಳಿಯ ಹೋರಾಟಗಾರ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮುತ್ತವೇಲು ಕರುಣಾನಿಧಿ[94] ಇಹಲೋಕ ತ್ಯಜಿಸಿದ್ದಾರೆ. ಕಳೆದ 11 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ  ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಸಂಜೆ 6-10ಕ್ಕೆ ಮಾಜಿ ಮುಖ್ಯಮಂತ್ರಿ ಮೃತಪಟ್ಟ ಬಗ್ಗೆ ಕಾವೇರಿ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. 

3 ಜೂನ್ 1924 ರಂದು ನಾಗಪಟ್ಟಣಂ ಜಿಲ್ಲೆಯ ತಿರುಕುವಲೈಯಲ್ಲಿ ಮುತ್ತುವೇಲು ಮತ್ತು ಅಂಜು ದಂಪತಿಯ ಪುತ್ರನಾಗಿ ಜನಿಸಿದ ಕರುಣಾನಿಧಿ ಚಿತ್ರಕಥೆ, ಸಂಭಾಷಣೆಕಾರನಾಗಿ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಹಿಂದಿ ಭಾಷೆ ವಿರೋಧಿ, ದ್ರಾವಿಡ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದರು.   

ಕಳ್ಳಕುಡಿ ಇಂಡಸ್ಟ್ರೀಯಲ್ ಪಟ್ಟಣವನ್ನು, ದಾಲ್ಮಿಯನಗರವೆಂದು ನಾಮಕರಣ ಮಾಡುವುದರ ವಿರುದ್ಧ ಉಗ್ರ ಹೋರಾಟ ನಡೆಸಿ ತಮಿಳರ ಮನೆ ಮಾತಾದರು.  ದ್ರಾವಿಡ ಚಳವಳಿ 1957ರಲ್ಲಿ ಕುಳಿತಾಯಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿತು . ಆಗ ಅವರ ವಯಸ್ಸು 33.  

Former Chief Minister of Tamilnadu  DMK Chief  M Karunanidhi is No More

5 ಬಾರಿ ಮುಖ್ಯಮಂತ್ರಿ:

ದ್ರಾವಿಡರ ಅಪ್ರತಿಮ ಹೋರಾಟಗಾರ ತಮ್ಮ ಗುರು ಸಿ.ಎನ್.ಅಣ್ಣದೊರೈ ನಿಧನದ ನಂತರ ಫೆಬ್ರವರಿ 10, 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಪದವಿ ಅಲಂಕರಿಸಿದರು. ಸತತ 7 ವರ್ಷಗಳ ಕಾಲ ಅಧಿಕಾರ ನಡೆಸಿದರು. ರಾಜಕೀಯ ಕಾರಣಗಳಿಂದ  1976, ಜನವರಿ 31 ರಂದು ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೂ ಅಧಿಕಾರಿದಲ್ಲಿದ್ದರು. 

ಗುರುವನ್ನು ಮೀರಿಸಿದ ಶಿಷ್ಯ:

ನಂತರದ ಒಂದು ವರ್ಷದಲ್ಲೇ ತಮ್ಮಿಂದಲೇ ಬೆಳೆದ ಶಿಷ್ಯ ಖ್ಯಾತ ಚಿತ್ರನಟ ಎಂ.ಜಿ.ರಾಮಚಂದ್ರನ್ ಕರುಣಾ ಅವರ ವಿರುದ್ಧ ಸಿಡಿದೆದ್ದು ಅಣ್ಣ ಡಿಎಂಕೆ ಪಕ್ಷ ಸ್ಥಾಪಿಸುವ ಮೂಲಕ 1977ರಲ್ಲಿ ಸಿಎಂ ಹುದ್ದೆಗೇರಿದರು. ಎಂಜಿಆರ್ ಮೃತಪಡುವವರೆಗೂ ಕರುಣಾ ಅವರಿಗೆ ಅಧಿಕಾರ ದೊರೆಯಲಿಲ್ಲ. 12 ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾಯಿತು.

1989 ರಲ್ಲಿ ಮತ್ತೆ ಅಧಿಕಾರಕ್ಕೆ:

ಡಿಎಂಕೆ ಪಕ್ಷ 1989ರಲ್ಲಿ ಬಹುಮತ ಪಡೆದು ಮೂರನೇ ಬಾರಿಗೆ ಕರುಣಾನಿಧಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡರು. 1991ರಲ್ಲಿ ಕುಮಾರಿ ಜಯಲಲಿತಾ ಅವರು ಅಧಿಕಾರ ಕಸಿದುಕೊಂಡರು. 2011ರ ವರೆಗೂ ಇವರಿಬ್ಬರ ನಡುವೆ ಹಗ್ಗ ಜಗ್ಗಾಟ ನಡೆದು ಒಬ್ಬರ ನಂತರ ಮತ್ತೊಬ್ಬರು ಅಧಿಕಾರ ಅನುಭವಿಸಿದರು.

ಮೂವರು ಪತ್ನಿಯರು, 6 ಮಕ್ಕಳು:
ಸುದೀರ್ಘ ರಾಜಕೀಯ ಜೀವನ ಅನುಭವಿಸಿದ ಕರುಣಾನಿಧಿ ಅವರಿಗೆ ಕುಟುಂಬವು ಸಹ ದೊಡ್ಡದು. ಮೂರು ಬಾರಿ ವಿವಾಹವಾಗಿದ್ದ ಅವರಿಗೆ ಪದ್ಮಾವತಿ ಅಮ್ಮಾಳ್[ಮೃತ],ದಯಾಳು ಅಮ್ಮಾಳ್, ರಜತಿ ಅಮ್ಮಾಳ್ ಪತ್ನಿಯರಿದ್ದಾರೆ. ಎಂ.ಕೆ.ಮುತ್ತು, ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ, ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎಂ.ಕೆ.ತಮಿಳರಸಿ, ಎಂ.ಕೆ.ಸೆಲ್ವಿ, ರಾಜ್ಯಸಭಾ ಸದಸ್ಯೆ ಎಂ.ಕೆ. ಕನಿಮೋಳಿ ಸೇರಿದಂತೆ ಐವರು ಮಕ್ಕಳನ್ನು ಅಗಲಿದ್ದಾರೆ.

Follow Us:
Download App:
  • android
  • ios