ಹುಬ್ಬಳ್ಳಿ :  ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಕೆ. ಪಾಟೀಲ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಎಚ್‌.ಕೆ. ಪಾಟೀಲ, ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದರು. ಜತೆಗೆ, ತಮ್ಮ ರಾಜಿನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ರವಾನಿಸಿದ್ದಾಗಿ ಹೇಳಿದರು.

ಮೈತ್ರಿಯಿಂದ ನಷ್ಟಆಗಿಲ್ಲ:

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್ಸಿಗೆ ನಷ್ಟವಾಗಿದೆ ಎಂಬ ಮಾತನ್ನು ಒಪ್ಪುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನತೆಯ ತೀರ್ಪೇ ಅಂತಿಮ. ರಾಜ್ಯ ಕಾಂಗ್ರೆಸ್ಸಿಗರು ಈ ಪ್ರಮಾಣದ ಸೋಲಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇದು ಒಂದು ರೀತಿಯಲ್ಲಿ ಬಿಜೆಪಿ ಕೂಡ ಅಂದಾಜು ಮಾಡಿರದ ಫಲಿತಾಂಶ. ಅವರು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡೇ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರು.

ಚುನಾವಣೆಯಲ್ಲಿ ನಾವು ಯಾವ ಕಾರಣಕ್ಕಾಗಿ ಸೋತಿದ್ದೇವೆ ಎಂಬ ಕುರಿತೆಲ್ಲ ಪಕ್ಷದೊಂದಿಗೆ ಚರ್ಚಿಸುತ್ತೇವೆ. ಹಿಂದೆಲ್ಲ ನಾವು 22, 27 ಸ್ಥಾನಗಳನ್ನು ಪಡೆಯುತ್ತಿದ್ದೆವು. ಆದರೆ ಈ ಬಾರಿ ರಾಜ್ಯದಲ್ಲಿ ಕೇವಲ ಒಂದೇ ಒಂದು ಸ್ಥಾನ ಪಡೆದಿದ್ದೇವೆ. ಈ ಪರಿ ಸೋಲು ಹೇಗಾಯಿತು? ಏಕಾಯಿತು? ಎಂಬ ಆತ್ಮಾವಲೋಕನ ಅಗತ್ಯವಿದೆ ಎಂದರು. ಈ ಸೋಲಿನಿಂದ ನಾವು ಕುಗ್ಗುವ ಬದಲು ಆತ್ಮಾವಲೋಕನ ಮಾಡಿಕೊಂಡು ಬೇರುಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟುಸಂಘಟನೆ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತೇವೆ ಎಂದರು.

ಸರ್ಕಾರದ ಮೇಲೆ ಪರಿಣಾಮ: ಲೋಕಸಭಾ ಚುನಾವಣಾ ಫಲಿತಾಂಶ ರಾಜ್ಯದಲ್ಲಿನ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಒಪ್ಪಿಕೊಂಡ ಎಚ್‌.ಕೆ.ಪಾಟೀಲ್‌ ಆದರೆ, ಎರಡೂ ಪಕ್ಷಗಳ ನಾಯಕರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮುಖ್ಯ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತೆ. ಸರ್ಕಾರಕ್ಕೆ ಏನು ಆಗದಂತೆ ನೋಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.