ಬೆಂಗಳೂರು[ಸೆ.26]: ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಒಂದೆಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿದು ಏಕಾಂಗಿಯಾಗಿ ಕಣಕ್ಕಿಳಿಯಲು ಸಜ್ಜಾದರೆ, ಅತ್ತ ಬಿಜೆಪಿಯೂ ಚುನಾವಣೆಗೆ ಭರ್ಜರಿಯಾಗೇ ತಯಾರಿ ನಡೆಸಿದೆ. ಹೀಗಿರುವಾಗ ಅನರ್ಹ ಶಾಸಕರು ಮಾತ್ರ ತಮ್ಮ ರಾಜಕೀಯ ಭವಿಷ್ಯ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಇಷ್ಟೆಲ್ಲಾ ನಡೆದರೂ ರಾಜಕೀಯ ನಾಯಕರ ವಾಕ್ಸಮರ ಮಾತ್ರ ಕೊಂಚವೂ ಕುಂದಿಲ್ಲ.

ರಾಜೀನಾಮೆ ಹಕ್ಕು ಶಾಸಕರಿಗಿದೆ: ಸ್ಪೀಕರ್ ಪರ ವಕೀಲರ ವಾದ

ಒಂದೆಡೆ ಅನರ್ಹ ಶಾಸಕರು ಅಬ್ಬರಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರೂ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಅನರ್ಹ ಶಾಸಕರಲ್ಲೊಬ್ಬರಾದ ಹಿರೇಕೆರೂರು ಮಾಜಿ ಶಾಸಕ ಬಿ. ಸಿ. ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಎಚ್ಡಿ ಕೆ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿ. ಸಿ. ಪಾಟೀಲ್ ನಾವು ರಾಜೀನಾಮೆ ಕೊಟ್ಟಾಗ ಎಚ್ಡಿಕೆ ಆಮಿಷ ನೀಡಿದ್ರು ನನ್ನ ಮಗಳಿಗೆ ಕರೆ ಮಾಡಿ, ಬಿಜೆಪಿ ಕೊಟ್ಟ ಹಣಕ್ಕಿಂತ ಡಬಲ್ ಕೊಡ್ತೀವೆ ಅಂದ್ರು. ನಿಮಗೆ ಬೇಕಾದ ಸಚಿವ ಸ್ಥಾನ ಕೊಡ್ತಿವಿ, ನಿಮ್ಮ ತಂದೆಗೆ ಹೇಳು ಅಂದಿದ್ರು. ಆದ್ರೆ ನಾವು ಯಾವ ಹಣಕ್ಕಾಗಿ, ಅಧಿಕಾರಕ್ಕಾಗಿ ಮಾರಿಕೊಂಡಿಲ್ಲ' ಎಂದು ಕಿಡಿ ಕಾರಿದ್ದಾರೆ.

ರಂಗೇರಿದ ಉಪಚುನಾವಣೆ: ನಾಮಪತ್ರ ಸಲ್ಲಿಸಲು ಅರ್ಹರು, ಕ್ಷೇತ್ರದತ್ತ ಅನರ್ಹರು

ಇಷ್ಟೇ ಅಲ್ಲದೇ 'ಕುಮಾರಸ್ವಾಮಿ ಉತ್ತರ ಕರ್ನಾಟಕದ ಮಂದಿಯನ್ನು ಕುರಿಗಳಂತೆ ಕಂಡರು. ಕೆಟ್ಟ ಮುಖ್ಯಮಂತ್ರಿಯನ್ನ, ಕೆಟ್ಟ ಸರ್ಕಾರವನ್ನು ಕಿತ್ತು ಹಾಕಿದ್ವಿ. ನಮ್ಮ ಹಿರೇಕೆರೂರಿಗೆ ಒಬ್ಬ ಕೆಟ್ಟ ಮುಖ್ಯಮಂತ್ರಿಯನ್ನು ಕೆಳಗಿಳಿಸೋ ತಾಕತ್ತಿದೆ. ಯಡಿಯೂರಪ್ಪರಂತ ಒಬ್ಬ ಒಳ್ಳೆಯ ಸಿಎಂ ಕೊಡುವ ತಾಕತ್ತೂ ಇದೆ' ಎಂದೂ ಗುಡುಗಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ಮಾಜಿ ಸ್ಪೀಕರ್ ರಮೆಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಬಿ. ಸಿ. ಪಾಟೀಲ್ 'ಹರಿಶ್ಚಂದ್ರ ಮುಖವಾಡ ತೊಟ್ಟ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್ ರಮೇಶ್ ಕುಮಾರ್ ಕರ್ಮಕಾಂಡ ಎಲ್ಲರಿಗೂ ಗೊತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.