ರಾಜೀನಾಮೆ ಹಕ್ಕು ಶಾಸಕರಿಗಿದೆ: ಸ್ಪೀಕರ್ ಪರ ವಕೀಲರ ವಾದ

ರಾಜೀನಾಮೆ ಹಕ್ಕು ಶಾಸಕರಿಗಿದೆ: ಸ್ಪೀಕರ್ ಪರ ವಕೀಲರ ವಾದ| ವಿಪ್‌ಗೆ ಶಾಸಕರು ಹೆದರುವ ಅಗತ್ಯವಿಲ್ಲ ಹಿಂದಿನ ಸ್ಪೀಕರ್ಗೆ ತದ್ವಿರುದ್ಧ ನಿಲುವು ಅನರ್ಹರಿಗೆ ಕಾಗೇರಿ ಕಚೇರಿ ಟಾನಿಕ್

MLAs Have The Right to Submit resignation speaker Says Advocate for the speaker kageri

ರಾಕೇಶ್.ಎನ್.ಎಸ್

ನವದೆಹಲಿ[ಸೆ.26]:  ಅನರ್ಹ ಶಾಸಕರ ಪರ ವಿಚಾರಣೆಯ ಸಂದರ್ಭದಲ್ಲಿ ಅತ್ಯಂತ ಮಹತ್ವದ ಅಭಿಪ್ರಾಯ ಹೊರಬಂದಿದ್ದು ಸ್ಪೀಕರ್ ಕಚೇರಿಯಿಂದ. ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ನ್ಯಾಯಾಲಯಕ್ಕೆ ಹಾಜರಾದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಸಕರ ರಾಜೀನಾಮೆ ನೀಡುವ ಹಕ್ಕನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ಮೂಲಕ ಅನರ್ಹ ಶಾಸಕರ ಪರ ಹಾಲಿ ಸ್ಪೀಕರ್ ಕಚೇರಿ ನಿಂತಂತೆ ಆಗಿದೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವಿದ್ದ ಸಂದರ್ಭ ಈ 15 ಶಾಸಕರು ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಶಾಸಕರ ರಾಜೀನಾಮೆ ನೀಡುವ ಹಕ್ಕನ್ನು ಪ್ರಶ್ನಿಸಿದ್ದ ಸ್ಪೀಕರ್ ಕಚೇರಿ ಇದೀಗ ರಾಜೀನಾಮೆ ನೀಡುವ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಹೇಳಿರುವುದು ಪ್ರಕರಣದಲ್ಲಿ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಬೆಳವಣಿಗೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಅನರ್ಹ ಪರ ಮುಕುಲ್ ರೋಹಟಗಿ ವಾದ ಅಂತ್ಯ: ಒಂದುವರೆ ತಾಸು ವಾದದ ಹೈಲೆಟ್ಸ್

ಈಗ ಅನರ್ಹರಾಗಿರುವ ಶಾಸಕರು ಜುಲೈ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಆಗಿನ ಸ್ಪೀಕರ್ ರಮೇಶ್ ಕುಮಾರ್ ಪರ ವಾದಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಶಾಸಕರ ಮೇಲಿರುವ ಅನರ್ಹತೆಯ ದೂರು ಮೊದಲು ಇತ್ಯರ್ಥವಾಗಬೇಕು.

ಆ ಬಳಿಕ ರಾಜೀನಾಮೆಯನ್ನು ಪರಿಶೀಲಿಸಬಹುದು ಎಂದು ಹೇಳಿತ್ತು. ಅಷ್ಟೇ ಅಲ್ಲದೇ ರಾಜೀನಾಮೆ ಸ್ವ-ಇಚ್ಛೆಯಿಂದ ಕೂಡಿದ್ದೇ, ನೈಜವೇ ಎಂಬುದರ ಜೊತೆಗೆ ರಾಜೀನಾಮೆಯ ಉದ್ದೇಶವನ್ನೂ ಪರಿಶೀಲಿಸುವ ಅಧಿಕಾರ ಸ್ಪೀಕರ್ ಕಚೇರಿಗಿದೆ ಎಂದು ವಾದಿಸಿದ್ದರು. ಜತೆಗೆ ಸ್ಪೀಕರ್ ಕಚೇರಿ ಸಾಂವಿಧಾನಿಕ ಸಂಸ್ಥೆಯಾಗಿದ್ದು ಅಲ್ಲಿ ತೀರ್ಮಾನ ಪ್ರಕಟಗೊಳ್ಳುವವರೆಗೆ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವಂತಿಲ್ಲ ಎಂದು ವಾದಿಸಿದ್ದರು. ಹಕ್ಕನ್ನು ಮೊಟಕುಗೊಳಿಸಲಾಗದು:

ಆದರೆ, ಬುಧವಾರ ಹಾಲಿ ಸ್ಪೀಕರ್ ಕಾಗೇರಿ ಪರ ನ್ಯಾಯಾಲಯಕ್ಕೆ ಹಾಜರಾದ ತುಷಾರ್ ಮೆಹ್ತಾ, ರಾಜೀನಾಮೆ ನೀಡುವ ಹಕ್ಕನ್ನು ಯಾವ ಕಾರಣಕ್ಕೂ ಮೊಟಕುಗೊಳಿಸಲಾಗದು ಎಂದರು. ತಮ್ಮ ವಾದ ಮಂಡನೆಯ ಆರಂಭದಲ್ಲೇ ನಾನು ಯಾವುದೇ ಪಕ್ಷದ ಪರ ವಾದಿಸುತ್ತಿಲ್ಲ. ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಮಾತ್ರ ನ್ಯಾಯಪೀಠದ ಮುಂದೆ ಮಂಡಿಸುತ್ತಿದ್ದೇನೆ ಎಂದರು.

ಮಧ್ಯಾಹ್ನ ನಂತರ ತಮ್ಮ 15 ನಿಮಿಷಗಳ ವಾದದಲ್ಲಿ ತುಷಾರ್ ಮೆಹ್ತಾ ಅನರ್ಹರ ಶಾಸಕರ ಪರ ನೇರವಾಗಿ ಬ್ಯಾಟಿಂಗ್ ಮಾಡಲಿಲ್ಲ. ಆದರೆ ಪರೋಕ್ಷವಾಗಿ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸದೇ ತಪ್ಪು ಮಾಡಿದ್ದಾರೆ ಎಂಬುದನ್ನು ಸೂಚ್ಯವಾಗ ತಿಳಿಸುತ್ತ ಹೋದರು.

ರಾಜಕೀಯ ಪಕ್ಷವೊಂದು ರಾಜ್ಯವನ್ನು ವಿಭಜನೆ ಮಾಡಲು ಮುಂದಾಗುತ್ತದೆ. ಆದರೆ ನನ್ನ ಕ್ಷೇತ್ರದ ಮತದಾರರು ಈ ವಿಭಜನೆಯನ್ನು ಒಪ್ಪುವುದಿಲ್ಲ. ನನಗೆ ಮತದಾರರೇ ಸಾರ್ವಭೌಮರು. ಈ ಸಂದರ್ಭದಲ್ಲಿ ನನ್ನ ಪಕ್ಷದ ವಿಪ್ ಇದೆಯೆಂದು ನನ್ನ ಪಕ್ಷದ ನಡೆಯನ್ನು ವಿರೋಧಿಸದೇ ಇರಲಾಗದು. ಒಂದು ವೇಳೆ ವಿರೋಧಿಸದೇ ಇದ್ದರೇ ನನ್ನ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಕಥೆಯೇನು? ನಾನು ನನ್ನ ಆತ್ಮಸಾಕ್ಷಿಯ ಆಧಾರದಲ್ಲೇ ತೀರ್ಮಾನ ಕೈಗೊಳ್ಳಬೇಕು ಎಂದು ವಾದಿಸಿದರು.

ನಾನು ರಾಜೀನಾಮೆ ನೀಡಿ ನನ್ನ ಮತದಾರರ ಬಳಿ ಹೋಗಬೇಕು. ರಾಜೀನಾಮೆ ನೀಡುವ ಹಕ್ಕನ್ನು ಸಂವಿಧಾನ ಗುರುತಿಸಿದೆ. ರಾಜೀನಾಮೆ ನೀಡುವ ನನ್ನ ಹಕ್ಕನ್ನು ಚಲಾಯಿಸುವುದು ಅನರ್ಹಗೊಳ್ಳಲು ಕಾರಣವಾಗುವು ದಿಲ್ಲ. ವಿಪ್ ಶಾಸಕರ ಹಕ್ಕನ್ನು ಮೊಟಕುಗೊಳಿಸದು. ಅನರ್ಹ ಶಾಸಕರು ಚುನಾವಣೆಗೆ ಹೋಗಬೇಕು ಎಂದು ಮೆಹ್ತಾ ವಾದಿಸಿದರು.

ಅನರ್ಹ ಶಾಸಕರಿಗೆ ಈಗ ಹೊಸ ಆತಂಕ..!

ಮಾರ್ಗದರ್ಶಿ ರಚಿಸಲು ಸೂಕ್ತ ಸಮಯ: ಸ್ಪೀಕರ್ ಮುಂದೆ ರಾಜೀನಾಮೆ ಮತ್ತು ಅನರ್ಹತೆಯ ಅರ್ಜಿಗಳಿದ್ದಾಗ ಯಾವುದರ ಬಗ್ಗೆ ಮೊದಲು ತೀರ್ಮಾನ ಕೈಗೊಳ್ಳಬೇಕು ಎಂದು ಸಾಲಿಸಿಟರ್ ಜನರಲ್ ಅವರನ್ನು ಸುಪ್ರೀಂಕೋರ್ಟ್ ಕೇಳಿತು.

ಆದರೆ, ಈ ಪ್ರಶ್ನೆಗೆ ಸಾಲಿಸಿಟರ್ ಜನರಲ್ ನೇರವಾಗಿ ಉತ್ತರ ನೀಡಲಿಲ್ಲ. ಆದರೆ, ತಮ್ಮ ವಾದ ಮಂಡನೆಯ ಮುಂದುವರಿದ ಭಾಗದಲ್ಲಿ ಸ್ವ-ಇಚ್ಛೆಯಿಂದ ಮತ್ತು ನೈಜವಾಗಿ ನೀಡಿದ ರಾಜೀನಾಮೆ ಬಗ್ಗೆ ತೀರ್ಮಾನಕ್ಕೆ ಬರಬೇಕು ಎಂದು ಮೆಹ್ತಾ ಹೇಳಿದರು. ಅಷ್ಟೇ ಅಲ್ಲದೇ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಪ್ರಸಂಗ ಗಳನ್ನು ನಿಭಾಯಿಸಲು ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರವನ್ನು ರಚಿಸಲು ಇದು ಸೂಕ್ತ ಸಮಯ ಎಂದು ಸಾಲಿಸಿಟರ್ ಜನರಲ್ ಪ್ರತಿಪಾದಿಸಿದರು.

ಕಾಂಗ್ರೆಸ್ ವಿಪ್ ಅನ್ವಯಿಸುವುದಿಲ್ಲ: ಅನರ್ಹಗೊಂಡಿ ರುವ ಶಾಸಕ ಆರ್.ಶಂಕರ್ ರಕ್ಷಣೆಗೂ ಸ್ಪೀಕರ್ ಕಚೇರಿ ಬಂದಿದೆ. ಶಂಕರ್ ಅವರ ಕೆಪಿಜೆಪಿ ಪಕ್ಷವು ಕಾಂಗ್ರೆಸ್ ಜೊತೆ ಅಧಿಕೃತವಾಗಿ ವಿಲೀನಗೊಂಡಿರಲಿಲ್ಲ. ಆದ್ದರಿಂದ ಅವರಿಗೆ ಕಾಂಗ್ರೆಸ್ ಪಕ್ಷದ ವಿಪ್ ಅನ್ವಯಿಸುವುದಿಲ್ಲ. ಆದ್ದರಿಂದ ಶಂಕರ್ ಅನರ್ಹತೆಯನ್ನು ರದ್ದು ಪಡಿಸಿ ಎಂದು ಅವರ ಪರ ಹಿರಿಯ ವಕೀಲ ವಿ.ಗಿರಿ ವಾದಿಸಿದರು

ಈ ಸಂದರ್ಭದಲ್ಲಿ ಸ್ಪೀಕರ್ ಪರ ವಕೀಲರು ಎಲ್ಲಿ ಎಂದು ನ್ಯಾಯಪೀಠ ಕೇಳಿತು. ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಸ್ಪೀಕರ್ ಕಚೇರಿ ಪರ ಕಿರಿಯ ವಕೀಲರ ಬಳಿ, ಶಂಕರ್ ಅವರ ಕೆಪಿಜೆಪಿ ಪಕ್ಷವು ಕಾಂಗ್ರೆಸ್ ಜೊತೆ ಅಧಿಕೃತವಾಗಿ ವಿಲೀನಗೊಂಡಿತ್ತೇ ಎಂದು ನ್ಯಾಯಪೀಠ ಕೇಳಿತ್ತು. ಆಗ ಸ್ಪೀಕರ್ ಕಚೇರಿ ಪರ ಹಾಜರಾದ ವಕೀಲರು, ಕೆಪಿಜೆಪಿ ಪಕ್ಷವು ಕಾಂಗ್ರೆಸ್ ಜೊತೆ ವಿಲೀನಗೊಂಡಿರುವ ಅಧಿಕೃತ ಆದೇಶವನ್ನು ಸ್ಪೀಕರ್ ಕಚೇರಿ ಹೊರಡಿಸಿರಲಿಲ್ಲ ಎಂದು ಹೇಳಿ ಶಂಕರ್ ರಕ್ಷಣೆಗೆ ಧಾವಿಸಿತು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

Latest Videos
Follow Us:
Download App:
  • android
  • ios