ಹಾರ್ಲಿಕ್ಸ್, ಬೂಸ್ಟ್ ಹಿಂದೂಸ್ತಾನ್ ಯುನಿಲಿವರ್ ತೆಕ್ಕೆಗೆ
ಹಾರ್ಲಿಕ್ಸ್, ಬೂಸ್ಟ್ ಮಾರಾಟ: ಹಿಂದುಸ್ತಾನ್ ಯುನಿಲಿವರ್ ತೆಕ್ಕೆಗೆ ಎರಡೂ ಬ್ರ್ಯಾಂಡ್ | ಭಾರತ, ಬಾಂಗ್ಲಾದೇಶ ಹಾಗೂ ಏಷ್ಯಾದ 20 ಮಾರುಕಟ್ಟೆಗಳಲ್ಲಿ ಹಾರ್ಲಿಕ್ಸ್, ಬೂಸ್ಟ್‌ನಂತಹ ಪಾನೀಯಗಳನ್ನು ಇನ್ನು ಮುಂದೆ ಹಿಂದುಸ್ತಾನ್ ಯುನಿಲಿವರ್ ಹೊರತರಲಿದೆ.
ನವದೆಹಲಿ (ಡಿ. 04): ಭಾರತೀಯರ ನೆಚ್ಚಿನ ಪೇಯಗಳಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಹಾರ್ಲಿಕ್ಸ್, ಬೂಸ್ಟ್ ಬ್ರ್ಯಾಂಡ್‌ಗಳು ಮಾರಾಟವಾಗಿವೆ. ಇವುಗಳ ಒಡೆತನ ಹೊಂದಿದ್ದ ಗ್ಲಾಕ್ಸೋಸ್ಮಿತ್‌ಕ್ಲೈನ್ ಕನ್ಸೂಮರ್ ಕಂಪನಿ ತನ್ನ ಪೌಷ್ಟಿಕ ಪೇಯಗಳ ವಿಭಾಗವನ್ನು ಬರೋಬ್ಬರಿ 31,700 ಕೋಟಿ ರು.ಗೆ ಹಿಂದುಸ್ತಾನ್ ಯುನಿಲಿವರ್ ಕಂಪನಿಗೆ ಮಾರಾಟ ಮಾಡಿದೆ.
ಭಾರತ, ಬಾಂಗ್ಲಾದೇಶ ಹಾಗೂ ಏಷ್ಯಾದ 20 ಮಾರುಕಟ್ಟೆಗಳಲ್ಲಿ ಹಾರ್ಲಿಕ್ಸ್, ಬೂಸ್ಟ್‌ನಂತಹ ಪಾನೀಯಗಳನ್ನು ಇನ್ನು ಮುಂದೆ ಹಿಂದುಸ್ತಾನ್ ಯುನಿಲಿವರ್ ಹೊರತರಲಿದೆ. ಹಾರ್ಲಿಕ್ಸ್ ಬ್ರ್ಯಾಂಡ್ ಏಷ್ಯಾದಲ್ಲಿ ಎಷ್ಟುಜನಪ್ರಿಯವಾಗಿದೆಯೆಂದರೆ, ಗ್ಲಾಕ್ಸೋಸ್ಮಿತ್‌ಕ್ಲೈನ್ ಕಂಪನಿಯ ಒಟ್ಟಾರೆ ಆದಾಯದಲ್ಲಿ ಶೇ.90 ಪಾಲು ಇದರಿಂದಲೇ ಬರುತ್ತಿತ್ತು.
ಹಾರ್ಲಿಕ್ಸ್ 140 ವರ್ಷಗಳಷ್ಟುಹಳೆಯ ಬ್ರ್ಯಾಂಡ್. ಮೊದಲ ಮಹಾಯುದ್ಧ ಮುಗಿಸಿ ಭಾರತಕ್ಕೆ ಮರಳಿದ ಬ್ರಿಟಿಷ್ ಸೇನೆಯಲ್ಲಿನ ಭಾರತೀಯ ಯೋಧರು ಪೌಷ್ಟಿಕಾಂಶಕ್ಕಾಗಿ ಹಾರ್ಲಿಕ್ಸ್ ತಂದಿದ್ದರು. ನಂತರ ಇದು ಶ್ರೀಮಂತರ ನೆಚ್ಚಿನ ಪಾನೀಯವಾಗಿತ್ತು. ಬಳಿಕ ಇದು ಜನಪ್ರಿಯವಾಯಿತು.