ಈ ಫೋಟೋದಲ್ಲಿರುವ ಪೊಲೀಸ್ ಅಧಿಕಾರಿಯ ಹೆಸರು ಅಮರೇಶ್ ಹೂಗಾರ್. ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿ, ದೇವದುರ್ಗದಲ್ಲಿ ನಡೆಯುತ್ತಿದ್ದ ಅಕ್ರಮದ ವಿರುದ್ಧ ಸಮರ ಸಾರಿ, ಅನೇಕರ ಹೆಡೆಮುರಿ ಕಟ್ಟಿದ್ದರು. ಆದರೆ, ಇದೀಗ ಅವರ ಪ್ರಾಮಾಣಿಕ ಪ್ರಯತ್ನವೇ ಮುಳ್ಳಾಗಿದೆ.
ರಾಯಚೂರು(ಡಿ.21): ಅವರೊಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿ, ತನ್ನ ವ್ಯಾಪ್ತಿಯಲ್ಲಿ ಎಲ್ಲೇ ಅಕ್ರಮ ನಡೆದರೂ ಕ್ಷಣಾರ್ಧದಲ್ಲಿ ಅಲ್ಲಿ ಪ್ರತ್ಯಕ್ಷ ರಾಗಿ ಆರೋಪಿಗಳ ಹೆಡೆ ಮುರಿಕಟ್ಟಿ ಜೈಲಿಗಟ್ಟುತ್ತಿದ್ದರು. ಅಲ್ಪಾವಧಿಯಲ್ಲೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 50 ಕ್ಕೂ ಹೆಚ್ಚು ಜನರನ್ನ ಬಂಧಿಸಿ ಜೈಲಿಗಟ್ಟಿದ್ರು. ಆದರೆ, ಇದೀಗ, ಇಲಾಖೆಯ ಕೆಲ ಅಧಿಕಾರಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಫೋಟೋದಲ್ಲಿರುವ ಪೊಲೀಸ್ ಅಧಿಕಾರಿಯ ಹೆಸರು ಅಮರೇಶ್ ಹೂಗಾರ್. ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿ, ದೇವದುರ್ಗದಲ್ಲಿ ನಡೆಯುತ್ತಿದ್ದ ಅಕ್ರಮದ ವಿರುದ್ಧ ಸಮರ ಸಾರಿ, ಅನೇಕರ ಹೆಡೆಮುರಿ ಕಟ್ಟಿದ್ದರು. ಆದರೆ, ಇದೀಗ ಅವರ ಪ್ರಾಮಾಣಿಕ ಪ್ರಯತ್ನವೇ ಮುಳ್ಳಾಗಿದೆ.
ಪಿಎಸ್'ಐ ಅಮರೇಶ್ ಹೂಗಾರ್ ವಿರುದ್ಧ ನಡೆದಿತ್ತು ಷಡ್ಯಂತ್ರ!
ಇವರ ಕಾರ್ಯಾಚರಣೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಒಳಗೊಳಗೆ ಕುದಿಯುತ್ತಿದ್ದರು. ಯಾಕೆಂದರೆ ಈ ಎಲ್ಲ ಅಕ್ರಮ ಧಂಧೆಕೋರರಿಂದ ಹೋಗುತ್ತಿದ್ದ ಹಫ್ತಾ ನಿಂತು ಹೋಗಿತ್ತು. ಹಾಗಾಗಿ ಹಿರಿಯ ಅಧಿಕಾರಿಗಳು ಷಡ್ಯಂತ್ರ ನಡೆಸಿ, ಅಮಾನತು ಆಗುವಂತೆ ಮಾಡಿದ್ದಾರೆ. ಅಷ್ಟಕ್ಕೂ ಇವರ ವಿರುದ್ಧ ಷಡ್ಯಂತ್ರ ಹೇಗೆ ನಡೀತು ಅಂದ್ರೆ, ಪಿಎಸ್ಐ ಅಮರೇಶ್ ಕೆಲಸದ ನಿಮಿತ್ತ ಕಲಬುರಗಿಗೆ ಹೋಗಿದ್ದಾಗ, ಮಲ್ಲಮ್ಮ ಎಂಬಾಕೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು, ದೂರು ನೀಡಲು ಬಂದಿದ್ದಳು. ಈ ವೇಳೆ, ಅಲ್ಲಿನ ಸಿಬ್ಬಂದಿ, ಕುಟುಂಬ ಕಲಹವನ್ನ ಕುಳಿತು ಬಗೆಹರಿಸಿಕೊಳ್ಳಿ ಎಂದು ಬುದ್ಧಿವಾದ ಹೇಳಿ ಕಳಿಸಿರ್ತಾರೆ. ಠಾಣೆಯಲ್ಲಿ ಮಹಿಳೆಯ ದೂರು ದಾಖಲಿಸಿಕೊಳ್ಳದ ವಿಷಯವನ್ನೇ ಇಟ್ಟುಕೊಂಡ ಸಿಪಿಐ ದೌಲತ್ ಕುರಿ, ದೂರುದಾರರನ್ನ ಎತ್ತಿಕಟ್ಟಿ, ಮಹಿಳಾ ಆಯೋಗಕ್ಕೆ ಪಿಎಸ್ಐ ಅಮರೇಶ್ ವಿರುದ್ಧ ದೂರು ನೀಡಲು ಪ್ರಚೋದಿಸಿದ್ದರು. ಇನ್ನು, ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಕುರಿತು ಸುವರ್ಣ ನ್ಯೂಸ್ ಜೊತೆ ಅಮರೇಶ್ ಮಾತನಾಡಿದ್ದಾರೆ.
ಸುವರ್ಣ ನ್ಯೂಸ್ : ನಿಮ್ಮನ್ನ ಯಾವ ಕಾರಣಕ್ಕಾಗಿ ಅಂದ್ರೆ ಯಾವ ವಿಷಯಕ್ಕಾಗಿ ನೀವು ನಿಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬೇಡವಾದ್ರಿ..? ಮತ್ತು ಯಾರ ಮೇಲೆ ರೈಡ್ ಮಾಡಿದ್ದಕ್ಕಾಗಿ..?
ಅಮರೇಶ್ ಹೂಗಾರ್ : ಮೊದಲಿನಿಂದಲೂ ಠಾಣೆಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ, ಮಟ್ಕಾ ಅಡ್ಡೆಗಳ ಮೇಲೆ ದಾಳಿ ಮಾಡುವಾಗ ಸಿಪಿಐ ದೌಲತ್ ಕುರಿಯವ್ರು ಅಡ್ಡಿ ಪಡಿಸ್ತಾ ಇದ್ರು. ಸ್ವಲ್ಪ ಶಾಸಕ ಶಿವನಗೌಡ ನಾಯಕರ ರಾಜಕೀಯ ಹಸ್ತಕ್ಷೇಪವೂ ಹೆಚ್ಚಾಗಿತ್ತು. ನಾನು ಹೋದಾಗಿನಿಂದ 24 ಮಟ್ಕಾ ಕೇಸು, ಸುಮಾರು 38 ಆರೋಪಿಗಳ ಬಂಧಿಸಿದೀನಿ, 5 ಲಕ್ಷ 72,000 ಹಣ ವಶ ಪಡಿಸಿಕೊಂಡಿದಿನಿ. ಇಲ್ಲಿಯವರೆಗೆ ಉಸುಕಿನ ಪ್ರಕರಣ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ 78 ಟ್ರಾಕ್ಟರ್ 4 ಲಾರಿ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದೆ. ಇದರಲ್ಲಿ ಸಿಪಿಐ ಇನ್ವಾಲ್ವು ಇದಾರ ಸರ.. ಪ್ರತೀ ಮಟ್ಕಾ ಬುಕ್ಕಿಯಿಂದ ತಿಂಗಳಿಗೆ 40 ರಿಂದ 45 ಸಾವಿರ ಹಣ ನಮ್ಮ ಸಿಪಿಐ ದೌಲತ್ ಕುರಿಗೆ ಹಫ್ತಾ ಬರುತ್ತಾ ಇತ್ತು ಸರ.. 9 ಜನ ಮಟ್ಕಾ ಬುಕ್ಕಿಗಳು ಈ ಥರ ಪ್ರತಿ ತಿಂಗಳು ಕೊಡ್ತಿದ್ರು ಸರ. ಬಸವರಾಜ್ ಸ್ವಾಮಿ, ಮರಿಸ್ವಾಮಿ, ಕ್ಯಾತೆಸ್ವಾಮಿ, ಪರಮಣ್ಣ ನಾಯಕ, ದೇವಪ್ಪ, ರಾಚಯ್ಯ ಸ್ವಾಮಿ,
ಸುವರ್ಣ ನ್ಯೂಸ್ : ಇವ್ರೆಲ್ಲ ಯಾರಿಗೆ ಸಿಪಿಐ ಗೆ ಲಂಚ ಕೊಡ್ತಿದ್ರು..?
ಅಮರೇಶ್ ಹೂಗಾರ್ : ಹೌದು ಸರ ಸಿಪಿಐ ಗೆ ಸರ..
ಸುವರ್ಣ ನ್ಯೂಸ್ :- ಆಯ್ತು ಈ ಲಂಚದ ಪ್ರಕರಣದಾಗ ಮತ್ತ ನಿಮ್ ಡಿಪಾರ್ಟ್ ಮೆಂಟ್ ನೋರು ಯಾರ್ಯಾರಿದಾರ..?
ಅಮರೇಶ್ ಹೂಗಾರ್ :- ಅಡಿಷನಲ್ ಎಸ್ಪಿ, ಡಿವೈಎಸ್ಪಿ, ಹರೀಶ್, ಸಿಪಿಐ ದೌಲತ್ ಸರ..
ಅಮಾನತು ಕುರಿತು ಜಿಲ್ಲಾ ಎಸ್ಪಿ ಚೇತನ್ ಸಿಂಗ್ ರಾಥೋಡ್ ಮಾತನಾಡಿದ್ದು, ಸಿಪಿಐ ನೀಡಿದ ಮಾಹಿತಿ ಆಧಾರದ ಮೇಲೆ ಪಿಎಸ್ಐ ಅವರನ್ನ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. ಕಲ್ಲಪ್ಪ ಹಂಡೀಬಾಗ್, ಅನುಪಮಾ ಶೆಣೈ, ರಂಥ ಅಧಿಕಾರಿಗಳ ಸಾಲಿಗೆ ಇದೀಗ ಅಮರೇಶ್ ಹೂಗಾರ್ ಕೂಡ ಸೇರಿದ್ದಾರೆ. ಆದ್ರೆ ಇನ್ನೆಷ್ಟು ಅಧಿಕಾರಿಗಳು ಹೀಗೆ ಬಲಿಯಾಗಬೇಕು ಎನ್ನುವುದು ನಮ್ಮ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
