ಸೌಜನ್ಯ ಕೊಲೆ ಪ್ರಕರಣ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ನಿರ್ದೇಶಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಬೆಂಗಳೂರು (ಏ.11): ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ನಿರ್ದೇಶಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಸಿಬಿಐಯ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಪ್ರಕರಣದಲ್ಲಿ ಸಾಕ್ಷಿಗಳಾದ ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿತು. ಅಲ್ಲದೆ, ಸಿಬಿಐ ತನಿಖಾ ಸಂಸ್ಥೆ ಮತ್ತು ದೂರುದಾರರಾದ ಸೌಜನ್ಯ ತಂದೆ ಚಂದಪ್ಪಗೌಡಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಸೌಜನ್ಯ ಕೊಲೆ ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ತದನಂತರ ಸಿಐಡಿ ತನಿಖೆ ನಡೆಸಿತ್ತು. ಸರ್ಕಾರದ ಆದೇಶದ ಮೇರೆಗೆ ಸಿಬಿಐ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ (ಸಿಬಿಐ ವಿಶೇಷ ನ್ಯಾಯಾಲಯ) ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಂತೋಷ್‌ರಾವ್ ಒಬ್ಬನೇ ಆರೋಪಿಯಾಗಿದ್ದು, ಆತನೇ ಸೌಜನ್ಯಳನ್ನು ಕೊಲೆ ಮಾಡಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ ಎಂದು ತಿಳಿಸಿದರು.
ಆದರೆ, ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ ಎಂದು ತನಿಖೆಯಲ್ಲಿ ಸಾಬೀತಾಗಿದೆ. ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಇನ್ನು ಸಿಬಿಐ ನ್ಯಾಯಾಲಯ ಈಗಾಗಲೇ ೧೭ ಸಾಕ್ಷ್ಯಗಳ ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಹೀಗಿದ್ದರೂ ಸಂತೋಷ್ ರಾವ್ ಅವರನ್ನು ಪ್ರಕರಣದಿಂದ ಬಜಾವ್ ಮಾಡಲು ಮತ್ತು ಪ್ರಕರಣದ ಕೊರ್ಟ್ ವಿಚಾರಣೆ ವಿಳಂಬ ಮಾಡುವ ಉದ್ದೇಶದಿಂದ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿದೆ ಎಂದು ಸಂಶಯ ವ್ಯಕ್ತಪಡಿಸಿ ಹೆಚ್ಚಿನ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ವಿವರಿಸಿದರು.
ಸೌಜನ್ಯ ಅವರ ತಂದೆ ಚಂದಪ್ಪ ಗೌಡರ ಅರ್ಜಿ ಮಾನ್ಯ ಮಾಡಿದ ಸಿಬಿಐ ನ್ಯಾಯಾಲಯ ಪ್ರಕರಣದ ಹೆಚ್ಚಿನ ತನಿಖೆಗೆ ಆದೇಶಿಸಿದೆ. ಒಂದ ಬಾರೀ ಸಮಗ್ರವಾದ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಹೆಚ್ಚಿನ ತನಿಖೆಗೆ ಆದೇಶಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಸಿಬಿಐ ನ್ಯಾಯಾಲಯ ಸೌಜನ್ಯ ಕೊಲೆ ಪ್ರಕರಣವನ್ನು ತನಿಖೆಗೆ ಆದೇಶಿಸಿದ ಕ್ರಮ ಕಾನೂನು ಬಾಹಿರವಾಗಿದ್ದು, ಆ ಆದೇಶ ರದ್ದುಪಡಿಸಬೇಕು ಎಂದು ಕೋರಿದರು. ಅಲ್ಲದೆ, ಪ್ರಕರಣದ ಹೆಚ್ಚಿನ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿದರು. ಈ ವಾದ ಪರಿಗಣಿಸಿದ ನ್ಯಾಯಪೀಠ ಸಿಬಿಐ ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ಶ್ರೀಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯ 2012 ರ ಅಕ್ಟೋಬರ್ 9 ರಂದು ಕಾಣೆಯಾಗಿದ್ದಳು. ಆ ಕುರಿತು ಆಕೆಯ ತಂದೆ ಚಂದ್ರಪ್ಪಗೌಡ ಅದೇ ದಿನ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದರು. ಅ.10 ರಂದು ಆಕೆಯ ಶವ ಪತ್ತೆಯಾಗಿತ್ತು. ಸೌಜನ್ಯಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದ ಕಾರಣ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ಸಿಬಿಐ ತನಿಖಾಧಿಕಾರಿಗಳು ಸುಧೀರ್ಘ ತನಿಖೆ ನಡೆಸಿ 2016 ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ದೋಷಾರೋಪ ಪಟ್ಟಿ ಸೂಕ್ತವಾಗಿಲ್ಲ ಎಂದು ಆರೋಪಿಸಿದ್ದ ಸೌಜನ್ಯ ತಂದೆ ಪ್ರಕರಣದ ಹೆಚ್ಚಿನ ತನಿಖೆಗೆ ಕೋರಿದ್ದರು. ಇದರಿಂದ ಸಿಬಿಐ ನ್ಯಾಯಾಲಯವು ಹೆಚ್ಚಿನ ತನಿಖೆ ನಡೆಸಿ 2017 ರ ಏ.24 ರೊಳಗೆ ವರದಿ ನೀಡುವಂತೆ ಸಿಬಿಐಗೆ ಆದೇಶಿಸಿತ್ತು. ಈ ಕ್ರಮವನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.