ಬೆಂಗಳೂರು (ಸೆ.19):  ಕರ್ನಾಟಕ ಅಬಕಾರಿ ಕಾಯ್ದೆ-1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಆನ್‌ಲೈನ್‌ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ಪತ್ರ ಹಿಂಪಡೆದ ಅಬಕಾರಿ ಇಲಾಖೆಯ ಆಯುಕ್ತರ ಕ್ರಮ ಪ್ರಶ್ನಿಸಿ ನಗರದಲ್ಲಿರುವ ಚೆನ್ನೈ ಮೂಲದ ಎಚ್‌ಐಪಿ ಬಾರ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್‌.ಸುಜಾತಾ ಅವರಿದ್ದ ಪೀಠ, ಆನ್‌ಲೈನ್‌ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ನಿರಾಕರಿಸಿದೆ.

ಮದ್ಯವು ಮಾನವನ ಆರೋಗ್ಯಕ್ಕೆ ಹಾನಿಕರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕುಟುಂಬಗಳು ಹಾಗೂ ಸಮಾಜಕ್ಕೆ ಕಳಂಕವಾಗಿದೆ. ಆನ್‌ಲೈನ್‌ ಮಾರಾಟದಿಂದ ಅಪ್ರಾಪ್ತರು ಸೇರಿ ಮದ್ಯಪಾನದ ಚಟಕ್ಕೆ ದಾಸರಾಗುವ ಯುವಪೀಳಿಗೆಯ ನಿಯಂತ್ರಣ ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಮದ್ಯ ಖರೀದಿಸುವವರ ವಯಸ್ಸು ಗುರುತಿಸುವುದು ಹಾಗೂ ವಹಿವಾಟಿನ ಮೇಲ್ವಿಚಾರಣೆ ನಡೆಸುವುದು ಕಷ್ಟವಾಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನ್‌ಲೈನ್‌ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಶೋಕಾಸ್‌ ನೋಟಿಸ್‌ ನೀಡದೆ ಏಕಾಏಕಿ ಅನುಮತಿ ಪತ್ರ ವಾಪಸ್‌ ಪಡೆದಿರುವ ಅಬಕಾರಿ ಇಲಾಖೆ ಆಯುಕ್ತರ ಕ್ರಮ ಕಾನೂನು ಬಾಹಿರವಾಗಿದೆ. ನಮ್ಮ ವಹಿವಾಟಿನಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿರುವುದು ಸಂವಿಧಾನದ ಕಲಂ 14 ಮತ್ತು 19 (1) (ಜಿ) ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು.

ಅರ್ಜಿದಾರರ ಪರ ಹಿರಿಯ ವಕೀಲರಾದ ಪಿ. ಚಿದಂಬರಂ ಮತ್ತು ಧ್ಯಾನ್‌ ಚಿನ್ನಪ್ಪ ಹಾಗೂ ಸರ್ಕಾರದ ಪರ ಹಿಂದಿನ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ವಾದ ಮಂಡಿಸಿದ್ದರು.

ಅನುಮತಿ ನೀಡಿದ್ದ ಇಲಾಖೆ : ಎಚ್‌ಐಪಿ ಬಾರ್‌ ಪ್ರೈವೇಟ್‌ ಲಿಮಿಟೆಡ್‌ಗೆ ಡೈರಿ ಉತ್ಪನ್ನಗಳನ್ನು ಹೊರತುಪಡಿಸಿ ಆನ್‌ಲೈನ್‌ ಮೂಲಕ ಸಿದ್ಧ ಆಹಾರ ಪದಾರ್ಥಗಳು ಮತ್ತು ಪಾನೀಯಗಳನ್ನು ಮಾರಾಟ ಮಾಡಲು ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕಾಯ್ದೆಯ ಅನುಸಾರ ಅನುಮತಿ ನೀಡಿತ್ತು. ಈ ಮಧ್ಯೆ 2017ರ ಆ.1ರಂದು ಅಬಕಾರಿ ಇಲಾಖೆ ಆಯುಕ್ತರು ಅರ್ಜಿದಾರ ಸಂಸ್ಥೆಗೆ ಬಿಯರ್‌, ವೈನ್‌ ಸೇರಿ ಭಾರತ ಮತ್ತು ವಿದೇಶಗಳ ಮದ್ಯ ಮಾರಾಟ ನಡೆಸಲು ಅನುಮತಿ ಪತ್ರ ನೀಡಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಏಕಾಏಕಿ ಅನುಮತಿಯನ್ನು ಹಿಂಪಡೆದಿದ್ದ ಇಲಾಖೆ, ಆನ್‌ಲೈನ್‌ ಮದ್ಯ ಮಾರಾಟ ಸ್ಥಗಿತಗೊಳಿಸಿರುವ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.