Asianet Suvarna News Asianet Suvarna News

ಟೆಕ್ಕಿ ನಾಪತ್ತೆ; ಸಿಐಡಿಗೆ ಹೈಕೋರ್ಟ್ ತಪರಾಕಿ

ಕಳೆದ ವರ್ಷ ಬೆಂಗಳೂರಿನಿಂದ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ. ಒಂದು ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ಕಾಣುತ್ತಿಲ್ಲ. ಈವರೆಗಿನ ವಿದ್ಯಮಾನ ಗಮನಿಸಿದರೆ ತನಿಖೆಯು ಕೇವಲ ಕಣ್ಣೊರೆಸುವ ತಂತ್ರದಂತಿದೆ. ಈವರೆಗೂ ಅಜಿತಾಬ್ ಬದುಕಿದ್ದಾನೋ  ಅಥವಾ ಇಲ್ಲವೋ? ಎಂಬುದೇ ಕಂಡುಕೊಂಡಿಲ್ಲ ಎಂದು ಸಿಐಡಿ ತನಿಖಾಧಿಕಾರಿಗಳನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

High court Expressed unpleasant with CID

ಬೆಂಗಳೂರು (ಜೂ. 02): ಕಳೆದ ವರ್ಷ ಬೆಂಗಳೂರಿನಿಂದ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ. ಒಂದು ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ಕಾಣುತ್ತಿಲ್ಲ. ಈವರೆಗಿನ ವಿದ್ಯಮಾನ ಗಮನಿಸಿದರೆ ತನಿಖೆಯು ಕೇವಲ ಕಣ್ಣೊರೆಸುವ ತಂತ್ರದಂತಿದೆ.

ಈವರೆಗೂ ಅಜಿತಾಬ್ ಬದುಕಿದ್ದಾನೋ  ಅಥವಾ ಇಲ್ಲವೋ? ಎಂಬುದೇ ಕಂಡುಕೊಂಡಿಲ್ಲ ಎಂದು ಸಿಐಡಿ ತನಿಖಾಧಿಕಾರಿಗಳನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಒಂದೊಮ್ಮೆ ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘಟನೆಗಳ ಕೈಗೆ ಆತ ಸಿಕ್ಕಿಹಾಕಿಕೊಂಡು, ಅವು ಆತನ ಕೌಶಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ಏನು ಮಾಡುವುದು ಎಂಬ ಆತಂಕವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.

ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು, ಸಿಐಡಿಯ ತನಿಖಾ ವಿಧಾನವನ್ನು ಟೀಕಿಸಿದರು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಜಿತಾಬ್ ನಾಪತ್ತೆಯಾದ ನಂತರ ಆತನ ಮೊಬೈಲ್ ಕರೆಗಳ ಮಾಹಿತಿ ಒಳಗೊಂಡ ವರದಿಯನ್ನು ಹಾಜರುಪಡಿಸಿದರು. ಇದನ್ನು ಪರಿಶೀಲಿಸಿದ  ನ್ಯಾಯಮೂರ್ತಿಗಳು, ಅಜಿತಾಬ್ ಮೊಬೈಲ್‌ಗೆ ಯಾರು ಕರೆ ಮಾಡಿದರು, ಆತ ಯಾರಿಗೆ ಕರೆ ಮಾಡಿದ್ದ, ಕರೆ ಮಾಡಿದವರನ್ನು ತನಿಖಾಧಿಕಾರಿಗಳು ಸಂಪರ್ಕಿಸಿದರೇ ಎಂದು ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು ಯಾರನ್ನೂ ಸಂಪರ್ಕಿಸಿಲ್ಲ ಎಂದು ಉತ್ತರಿಸಿದರು.

ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ನಾಪತ್ತೆಯಾದ ನಂತರ ಅಜಿತಾಬ್‌ಗೆ ಕರೆ ಮಾಡಿದವರ‌್ಯಾರು, ಆತ ಯಾರಿಗೆ ಕರೆ ಮಾಡಿದ ಎಂಬುದು ತಿಳಿದುಕೊಳ್ಳಲಿಲ್ಲ ಎಂದಾದರೆ ಇನ್ಯಾವ ರೀತಿ ತನಿಖೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಈ ವಿಚಾರಗಳನ್ನು ಸಾಮಾನ್ಯರೂ ಯೋಚಿಸುತ್ತಾರೆ. ತನಿಖಾಧಿಕಾರಿ ಆಲೋಚಿಸಿಲ್ಲ ಎಂದಾದರೆ ತುಂಬಾ ಆಶ್ಚರ್ಯವಾಗುತ್ತದೆ. ನ್ಯಾಯಾಧೀಶನಾಗಿಯೇ ನಾನು ಇಷ್ಟೆಲ್ಲಾ ದಿಕ್ಕುಗಳಿಂದ ಯೋಚಿಸಬೇಕಾದರೆ ತನಿಖಾಧಿಕಾರಿಯು ಸಾವಿರಾರು ದಿಕ್ಕುಗಳಿಂದ ಚಿಂತಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ತನಿಖಾಧಿಕಾರಿಯ ಸಮಗ್ರತೆ ಪ್ರಶ್ನಿಸುತ್ತಿಲ್ಲ. ತನಿಖೆ ಸಮರ್ಥವಾಗಿರಬೇಕು ಎಂದು ಹೇಳುತ್ತಿದ್ದೇನೆ. ಇಷ್ಟು ತಿಂಗಳಿಂದ ತನಿಖೆ ನಡೆಸಿದರೂ ಸಕಾರಾತ್ಮಕ  ಫಲಿತಾಂಶ ಸಿಕ್ಕಿಲ್ಲ ಹಾಗೂ ತನಿಖೆ ಪ್ರಗತಿ ಕಂಡಿಲ್ಲ. ಈವರೆಗಿನ ಬೆಳವಣಿಗೆ ಕಣ್ಣೊರೆಸುವ ಮಾದರಿಯಲ್ಲಿದೆ. ವರದಿಯಲ್ಲಿ ತುಂಬಾ ತೂಕದ ವಿಷಯಗಳಿವೆ ಎಂದು ಅನಿಸುತ್ತದೆ. ಒಳಗಡೆ ಏನೇನೂ ಇಲ್ಲ. ಅಲ್ಲಿಗೆ ಹೋದ; ಇಲ್ಲಿಗೆ ಬಂದ, ಅಲ್ಲಿ ಕೂತ; ಎದ್ದುಬಂದ ಎಂದಿದಂತಿದೆ ಅಷ್ಟೇ ಎಂದು ಬೇಸರಗೊಂಡರು.

ಅಜಿತಾಬ್ ಈವರೆಗೆ ಪತ್ತೆಯಾಗದಿರುವುದು ನೋಡಿದರೆ, ಯಾರಿಗೆ ಗೊತ್ತು ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘನೆಗಳ ಕೈಗೆ ಆತ  ಸಿಕ್ಕಿರಬಹುದೇನೊ, ಮೇಲಾಗಿ ಆತ ಟೆಕ್ಕಿಯಾಗಿದ್ದು, ಆ ಸಂಘಟನೆಗಳು ಆತನ ಕೌಶಲ್ಯವನ್ನು ದೇಶದ ವಿರುದ್ಧ ಬಳಸುತ್ತಿದ್ದರೆ ಏನು ಮಾಡಲು ಸಾಧ್ಯವಿದೆ.

ಈಗಿನ ತಂತ್ರಜ್ಞಾನದಲ್ಲಿ ಒಬ್ಬ ವ್ಯಕ್ತಿ ಎಲ್ಲಿದ್ದಾನೆಂಬುದನ್ನು ಶ್ರಮಿವಿಲ್ಲದೇ ಕಂಡು ಹಿಡಿಯಬಹುದು. ಆದರೆ, ಅಜಿತಾಬ್ ಬದುಕಿದ್ದಾನೋ, ಇಲ್ಲವೋ, ಎಲ್ಲಿದ್ದಾನೋ?  ಎಂಬುದನ್ನೆ ಕಂಡು ಹಿಡಿದಿಲ್ಲ. ತನಿಖೆ ಅಸಮರ್ಪಕ ಹಾಗೂ ಅಸಮರ್ಥತೆಯಿಂದ ಕೂಡಿದೆ. ತನಿಖಾಧಿಕಾರಿ ಶ್ರಮ ಹಾಕಿಲ್ಲ. ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ಆಗಿಲ್ಲ. ಇದು ಕೋರ್ಟ್‌ಗೆ ಆಘಾತ ತರಿಸಿದೆ ಎಂದರು.  

Follow Us:
Download App:
  • android
  • ios