ರಾಜ್ಯ ಬಿಜೆಪಿ ಶಾಸಕರ ನಿದ್ದೆಗೆಡಿಸಿದೆ ಗುಜರಾತ್ ಚುನಾವಣೆ!ಅಲ್ಲಿನ ರಣತಂತ್ರ ಯಶಸ್ವಿಯಾದ್ರೆ ರಾಜ್ಯದಲ್ಲೂ ಯಥಾವತ್ ಅಳವಡಿಕೆ
ಬೆಂಗಳೂರು: 2018ರ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ರಾಜ್ಯ ನಾಯಕರು ಮತ್ತು ಹಾಲಿ ಶಾಸಕರನ್ನು ಬೆಚ್ಚಿಬೀಳಿಸುವಂತಿವೆ.
ಉತ್ತರ ಪ್ರದೇಶ ಮಾದರಿ ಗುಜರಾತ್ ಚುನಾವಣೆಯಲ್ಲಿ ಇನ್ನಷ್ಟು ಪಕ್ವಗೊಂಡಿದ್ದು, ಹಾಲಿ ಶಾಸಕರನ್ನ ನಿದ್ದೆಗೆಡಿಸಿರುವುದರ ಜೊತೆಗೆ 150 ಅಭ್ಯರ್ಥಿಗಳನ್ನು ತಾನೇ ಹುಡುಕಲು ಹೈಕಮಾಂಡ್ ಮುಂದಾಗಿರುವುದು ರಾಜ್ಯ ನಾಯಕರನ್ನು ಕಂಗಾಲಾಗಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಬಾಕಿ ಇರುವುದು ಕೇವಲ ಮೂರ್ನಾಲ್ಕು ತಿಂಗಳು ಮಾತ್ರ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ತುಳಿಯುತ್ತಿರುವ ಹಾದಿ ರಾಜ್ಯ ನಾಯಕರಿಗೆ ಮತ್ತು ಹಾಲಿ ಶಾಸಕರಲ್ಲಿ ನಡುಕ ಹುಟ್ಟಿಸಿದೆ. ಒಂದು ವೇಳೆ ಗುಜರಾತ್ನಲ್ಲಿ ಹೈಕಮಾಂಡ್ ರಣತಂತ್ರ ಯಶಸ್ವಿಯಾದರೆ, ಅದೇ ಮಾದರಿಯ ಪ್ಲಾನ್ ಕರ್ನಾಟಕ ಚುನಾವಣೆಗೆ ಅಳವಡಿಕೆಯಾಗಲಿದೆ. ಇದೇ ಈಗ ಹಾಲಿ ಶಾಸಕರನ್ನ ನಿದ್ದೆಗೆಡಿಸಿರುವುದು.
ಹೈಕಮಾಂಡ್ನಿಂದಲೇ 150 ಅಭ್ಯರ್ಥಿಗಳಿಗಾಗಿ ಶೋಧ ನಡೆಯುತ್ತಿದೆ. ಗುಜರಾತ್ ನಂತೆಯೇ ರಾಜ್ಯದಲ್ಲಿ ಹಾಲಿ ಶಾಸಕರಿಗೆ ಕೊಕ್ ನೀಡುವ ಸಾಧ್ಯತೆ ಇದೆಯೆನ್ನಲಾಗಿದ್ದು, ಶಾಸಕರಿಗೆ ಕ್ಷೇತ್ರ ಬದಲಾವಣೆಯ ಭೂತ ಕಾಡುತ್ತಿದೆ.
ಇಡೀ ರಾಜ್ಯ ಬಿಜೆಪಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಸರಿ ಹೈಕಮಾಂಡ್ ಪ್ರತಿ ದಿನ ಹೊಸದೊಂದು ತಂತ್ರ ಪ್ರಯೋಗಿಸುತ್ತಿದೆ. ಈಗಾಗಲೇ 150 ಕ್ಷೇತ್ರಗಳಿಗೆ ತಾನೇ ಅಭ್ಯರ್ಥಿಗಳನ್ನು ಶೋಧಿಸುವುದಾಗಿ ರಾಜ್ಯ ನಾಯಕರಿಗೆ ಮೌಖಿಕ ಸಂದೇಶ ರವಾನೆಯಾಗಿದೆ.
ಈಗಾಗಲೇ ಗುಜರಾತ್ನಲ್ಲಿ 35ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಹಲವು ಶಾಸಕರ ಕ್ಷೇತ್ರಗಳನ್ನು ಬದಲಾಯಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದ್ದ ಈ ಕಾರ್ಯತಂತ್ರ ಗುಜರಾತ್’ನಲ್ಲಿ ಮತ್ತಷ್ಟು ಬಲಯುತವಾಗಿ ಕಾರ್ಯರೂಪಕ್ಕೆ ಇಳಿದಿದೆ.
ಗುಜರಾತ್ನಲ್ಲಿ ಇದು ಸಂಪೂರ್ಣ ಯಶಸ್ವಿಯಾದರೆ ಯಾವುದೇ ಬದಲಾವಣೆಯಿಲ್ಲದೇ ರಾಜ್ಯದಲ್ಲಿ ಕೂಡಾ ಅಳವಡಿಕೆಯಾಗಲಿದೆ. ಒಟ್ಟಿನಲ್ಲಿ, ಚುನಾವಣೆಯ ಸಮೀಪದಲ್ಲಿ ಇಷ್ಟು ದಿನ ರಾಜ್ಯ ಬಿಜೆಪಿಯಲ್ಲಿ ನಾವೇ ಸುಪ್ರೀಂ ಅಂತಾ ಓಡಾಡುತ್ತಿದ್ದವರಿಗೆ ಹೈಕಮಾಂಡ್ ಬಿಸಿ ಮುಟ್ಟಿಸುವುದು ಖಚಿತವಾಗುತ್ತಿದೆ.
ವರದಿ: ಕಿರಣ್ ಹನಿಯಡ್ಕ
