Asianet Suvarna News Asianet Suvarna News

ಪೋಷಕರೇ ಎಚ್ಚರ : ನಿಮ್ಮ ಮಕ್ಕಳಿಗೂ ಕಾಡಬಹುದು ಗಂಭೀರ ಸಮಸ್ಯೆ

ನಗರ ಪ್ರದೇಶದ ಪೋಷಕರೇ ಎಚ್ಚರ.  ನಿಮ್ಮ ಮಕ್ಕಳಲ್ಲಿಯೂ ಕೂಡ ಕಾಡಬಹುದು ಇಂತಹ ಸಮಸ್ಯೆ. ಈ ನಿಟ್ಟಿನಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು.  

High Blood Pressure in City Kids
Author
Bengaluru, First Published Jul 27, 2018, 8:47 AM IST

ಬೆಂಗಳೂರು : ನಗರದ ಪುಟ್ಟ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಗಂಭೀರ ಪ್ರಮಾಣದಲ್ಲಿ ತೀವ್ರಗೊಂಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ರಕ್ತದೊತ್ತಡದ ಸಮಸ್ಯೆಯೊಂದಿಗೆ ದಾಖಲಾಗುವ ಪುಟ್ಟಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದೆ. ಶನಿವಾರದಿಂದ ಈಚೆಗೆ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೂರು ಮಕ್ಕಳು ತೀವ್ರ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಆಯೆಷಾ ಸಿದ್ದಿಕಾ (ಹೆಸರು ಬದಲಿಸಲಾಗಿದೆ)ಳಿಗೆ ಬರೋಬ್ಬರಿ 90/140ರವರೆಗೆ ಅಧಿಕ ರಕ್ತದೊತ್ತಡ ಕಂಡುಬರುವ ಮೂಲಕ ಪೋಷಕರಿಗೆ ಭಾರಿ ಆತಂಕ ಸೃಷ್ಟಿಸಿದೆ.

ಈ ವಯಸ್ಸಿನ ಮಕ್ಕಳಲ್ಲಿ ಶೇ.95 ಪ್ರಕರಣ ಗಳಲ್ಲಿ 118/78 ರಷ್ಟು ರಕ್ತದೊತ್ತಡವೇ ಅಧಿಕ ರಕ್ತದೊತ್ತಡ. ಹೀಗಾಗಿ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಮಗು ಚೇತರಿಸಿಕೊಂಡಿದ್ದು, ರಕ್ತದೊತ್ತಡ ಪ್ರಮಾಣ ಪ್ರಸ್ತುತ 110ಕ್ಕೆ ಕಡಿಮೆಯಾಗಿದೆ ಎಂದು ಪೋಷಕರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. 

ವಯಸ್ಕರಲ್ಲಿ 80/120 ಸಾಮಾನ್ಯ ಹಾಗೂ 120/180 ಅತ್ಯಧಿಕ ರಕ್ತದೊತ್ತಡ ಎಂದು ಪರಿಗಣಿಸ ಲಾಗುತ್ತದೆ. ಆದರೆ, ಮಕ್ಕಳಲ್ಲಿ ರಕ್ತದೊತ್ತಡ ಪ್ರಮಾಣ ಅಳೆಯಲು ಪ್ರತ್ಯೇಕ ಮಾನದಂಡವಿರುತ್ತದೆ. 15 ವರ್ಷದೊಳಗಿನ ಮಕ್ಕಳ ರಕ್ತದೊತ್ತಡವನ್ನು ವಯಸ್ಸಿನ ಆಧಾರದ ಮೇಲೆ 7 ಹಂತದಲ್ಲಿ ಅಳೆಯಲಾಗುತ್ತದೆ.

1 ವರ್ಷದ ಮಗುವಿಗೆ 40/85-42/88, 6 ವರ್ಷದ ಮಗುವಿಗೆ 54/93-57/97, 12 ವರ್ಷದ ಮಗುವಿಗೆ 61/101-63/108 ಸಾಮಾನ್ಯವಾಗಿ ಇರಬೇಕಾದ ರಕ್ತದೊತ್ತಡ. ವೈದ್ಯರ ಪ್ರಕಾರ ೧೧ ವರ್ಷ ವಯಸ್ಸಿನ ಮಗುವಿಗೆ 118/78ರಷ್ಟು ಇದ್ದರೆ ಅದು ಅಧಿಕ ರಕ್ತದೊತ್ತಡ. ಆದರೆ, ನಗರದ ನಿವಾಸಿಗೆ 140ರವರೆಗೆ ರಕ್ತದೊತ್ತಡ ಹೋಗಿತ್ತು. ಹೀಗಾಗಿ ಆತಂಕ ಸೃಷ್ಟಿಸಿತ್ತು. ಇದೇ ರೀತಿ 3 ವರ್ಷದ ಮಗು ಸೇರಿದಂತೆ ಮೂರು ಮಕ್ಕಳಲ್ಲಿ ಒಂದೇ ಆಸ್ಪತ್ರೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. 

ಕಿಡ್ನಿ ಸಮಸ್ಯೆ: ಆಯೆಷಾ ಸಿದ್ದಿಕಾಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿದೆ. ಜ್ವರದ ಜತೆಗೆ ಪ್ರತಿ ದಿನ ದೇಹದಲ್ಲಿ ಊತ, ಗಂಟಲು ನೋವು, ವಾಂತಿ, ಮೈಯೆಲ್ಲಾ ಗುಳ್ಳೆ ಗಳು ಉಂಟಾಗಿತ್ತು. ಇದರಿಂದ ಎಚ್ಚೆತ್ತ ಪೋಷಕರು ನಗರದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಶೀಲನೆ ನಡೆಸಿದ ವೈದ್ಯರು ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಖಚಿತಪಡಿಸಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ ಈ ಪ್ರಮಾಣದಲ್ಲಿ ರಕ್ತದೊತ್ತಡ ಹೆಚ್ಚಾಗಿದೆ. 

ಮೊದಲ ಬಾರಿ ರಕ್ತದೊತ್ತಡ ಹೆಚ್ಚಾಗಿದ್ದಕ್ಕೆ ವೈಟ್‌ಕೋಟ್ ರಕ್ತದೊತ್ತಡವೂ ಕಾರಣ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಾಸ್ತವವಾಗಿ ಆತಂಕದಿಂದ ಆಸ್ಪತ್ರೆಗೆ ಬಂದ ಮಗುವು ಶುಶ್ರೂಷಕರು, ವೈದ್ಯರ ಬಿಳಿ ಉಡುಪು ನೋಡಿ ಮತ್ತಷ್ಟು ಆತಂಕ ಪಡುತ್ತಾಳೆ. ಇದರಿಂದ ಅಧಿಕ ರಕ್ತದೊತ್ತಡ ಮತ್ತಷ್ಟು ಹೆಚ್ಚು ರಕ್ತದೊತ್ತಡವಾಗಿ ಕಂಡು ಬರುತ್ತದೆ. ಹೀಗಾಗಿ ಮಕ್ಕಳು ವಿಶ್ರಾಂತಿ ಪಡೆದ ಬಳಿಕ ರಕ್ತದೊತ್ತಡ ಪರೀಕ್ಷಿಸಬೇಕು. ಬಳಿಕವೂ ರಕ್ತದೊತ್ತಡ ಅಧಿಕವಿದ್ದ ಕಾರಣ ಚಿಕಿತ್ಸೆ ನೀಡಿದ್ದು, ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಿಡ್ನಿ ಸಮಸ್ಯೆ, ಮತ್ತೊಬ್ಬರಿಗೆ ಕಿಡ್ನಿ ಹಾಗೂ ಹಾರ್ಮೊನ್ ಸಮಸ್ಯೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಶ್ರೀಕಾಂತ್ ಎನ್ ಗೌಡಸಂದ್ರ

Follow Us:
Download App:
  • android
  • ios