ಬೆಂಗಳೂರು :  ರಣಬಿಸಿಲ ತಾಪ ದಿನೇ ದಿನೆ ಏರುತ್ತಿದ್ದಂತೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಕೆರೆ, ಕಟ್ಟೆ, ನದಿಗಳೆಲ್ಲ ಒಣಗಿ ನೀರಿಗಾಗಿ ಹಾಹಾಕಾರ ಎದ್ದಿದೆ. ಪ್ರತೀ ವರ್ಷ ಮಾರ್ಚ್ ಅಂತ್ಯದ ಹೊತ್ತಿಗೆ ಹನಿನೀರಿಗೂ ಪರದಾಡುವ ಸ್ಥಿತಿ ಇರುವ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜತೆಗೆ ಈ ಬಾರಿ ಮಲೆನಾಡು, ಕರಾವಳಿ ಮಾತ್ರವಲ್ಲದೆ ಕಾವೇರಿ ತಪ್ಪಲಿನ ಮಂಡ್ಯ, ಮೈಸೂರಿನಂಥ ಜಿಲ್ಲೆಗಳಲ್ಲೂ ಜಲಕ್ಷಾಮ ಆವರಿಸಿದೆ. ಕಳೆದ ವರ್ಷ ಬೇಸಿಗೆಯಲ್ಲಿ ರಾಜ್ಯದಲ್ಲಿ 3178 ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಮೇ ಆರಂಭಕ್ಕೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ 3689 ದಾಟಿದೆ.

ಮಳೆಯ ವಿಚಾರದಲ್ಲಿ ಒಂದು ರೀತಿಯಲ್ಲಿ ಶಾಪಗ್ರಸ್ತ ಜಿಲ್ಲೆಗಳೇ ಆಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದ ಜನ ಕಳೆದ ಬಾರಿ ವರುಣನ ಕೃಪೆಯಿಂದಾಗಿ ಕೆರೆಕಟ್ಟೆಗಳೆಲ್ಲ ತುಂಬಿದ್ದರಿಂದ ನೆಮ್ಮದಿಯಿಂದಿದ್ದರು. ಆದರೆ, ಈ ಬಾರಿ ಮಾಚ್‌ರ್‍ಗೆ ಮೊದಲೇ ಕುಡಿಯುವ ನೀರಿಗಾಗಿ ಈ ಜಿಲ್ಲೆಗಳಲ್ಲಿ ಪರಿತಾಪ ಎದುರಾಗಿದೆ. ಪಶ್ಟಿಮ ಘಟ್ಟದ ಸೆರಗಿನಲ್ಲೇ ಇದ್ದರೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜೀವನದಿಗಳಾದ ನೇತ್ರಾವತಿ, ಸುವರ್ಣ ನದಿ ಬಹುತೇಕ ಬತ್ತಿದ್ದು ಮೇ ತಿಂಗಳು ಕಳೆಯುವುದು ಹೇಗೆನ್ನುವ ಚಿಂತೆ ಜನರನ್ನು ಕಾಡಲು ಶುರುವಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಂತು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ‘ನೀರಿಲ್ಲ’ ಎಂಬ ಕೂಗು ಜೋರಾಗಿಯೇ ಕೇಳಿಸುತ್ತಿದೆ. ಇನ್ನು ಪ್ರತೀ ಬಾರಿಯೂ ಭೀಕರ ಬರಕ್ಕೆ ತುತ್ತಾಗುವ ಮಧ್ಯಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಹನಿನೀರಿಗಾಗಿ ಕೆರೆ, ಕಟ್ಟೆಗಳೆಲ್ಲ ಬಾಯ್ತೆರುದು ನಿಂತಿವೆ. ಈ ಜಿಲ್ಲೆಗಳ ಬಹುತೇಕ ಕಡೆ ಅಂತರ್ಜಲ ತಳಕಂಡಿದ್ದು, ನಾಲ್ಕೈದು ದಿನಗಳಿಗೊಮ್ಮೆ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಇದೆ. ಮಹಾರಾಷ್ಟ್ರ, ಆಂಧ್ರದ ಗಡಿಭಾಗದಲ್ಲಂತು ಕೊಡ ನೀರಿಗಾಗಿ ಕಿ.ಮೀ.ಗಟ್ಟಲೆ ಸಾಗುವ ಅನಿವಾರ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲೂ ಮೂರು ದಿನಗಳಿಗೊಮ್ಮೆ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರಿನ ಸ್ಥಿತಿ ಇದಾದರೆ ಬಿಸಿಲ ತಾಪಕ್ಕೆ ಬಹುತೇಕ ಕಡೆ ಬೆಳೆಗಳೆಲ್ಲ ಒಣಗಿದ್ದು, ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರೆಲ್ಲ ದೂರದೂರುಗಳಿಗೆ ಗುಳೇ ಹೋಗಿದ್ದಾರೆ. ಮೇವು, ನೀರಿನ ಸಮಸ್ಯೆ ಜಾನುವಾರುಗಳನ್ನೂ ತೀವ್ರವಾಗಿಯೇ ಕಾಡುತ್ತಿದ್ದು, ಅವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳೂ ಅನ್ಯ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರಿಂದ ನೀರಿನ ಸಮಸ್ಯೆಯನ್ನು ಮತ್ತಷ್ಟುಬಿಗಡಾಯಿಸಿದೆ.

ಬರದ ಕಪಿ ಮುಷ್ಟಿಗೆ ಬಿದ್ದಿರುವ ಜಿಲ್ಲೆಗಳಲ್ಲಿ ಮಾರ್ಚ್ ಅಂತ್ಯದ ವೇಳೆ ಒಟ್ಟಾರೆ 3689 ಹಳ್ಳಿಗಳಲ್ಲಿ ನೀರಿನ ಸ್ಥಿತಿ ಬಿಗಡಾಯಿಸಿದೆ. ಒಂದು ವೇಳೆ ಮಳೆ ಆಗಮನ ವಿಳಂಬವಾದಲ್ಲಿ ಇನ್ನೂ 2187ಕ್ಕೂ ಅಧಿಕ ಗ್ರಾಮಗಳಲ್ಲಿ ಭೀಕರ ಜಲಕ್ಷಾಮ ತಲೆದೋರುವ ಸಾಧ್ಯತೆಗಳಿವೆ. ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 780 ಗ್ರಾಮಗಳು ನೀರಿನ ಸಮಸ್ಯೆಯಲ್ಲಿ ನಲುಗುತ್ತಿವೆ. ಪಕ್ಕದ ಬೀದರ್‌ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಬಾವಿಗಳು ಬತ್ತಿದ್ದು, 6,700 ಕೊಳವೆಬಾವಿಗಳ ಪೈಕಿ ಅರ್ಧದಷ್ಟುನೀರಿಲ್ಲದೆ ಕೆಟ್ಟಿವೆ.

ಟ್ಯಾಂಕರ್‌ ನೀರೇ ಗತಿ: ಕಳೆದ ಕೆಲ ವರ್ಷಗಳಿಂದ ಕುಡಿಯುವ ನೀರು ಪೂರೈಸುವ ಮಾಡುವ ಸಲುವಾಗಿ ಜಿಲ್ಲಾಡಳಿತಗಳು ಇನ್ನಿಲ್ಲದ ಹರಸಾಹಸ ಪಡುತ್ತಿವೆ. ಖಜಾನೆಯಲ್ಲಿ ದುಡ್ಡಿದ್ದರೂ ಒದಗಿಸಲು ನೀರಿಲ್ಲ. ಕಳೆದ ವರ್ಷ ಇಡೀ ವರ್ಷದಲ್ಲಿ ಒಟ್ಟಾರೆ 1395 ಗ್ರಾಮಗಳಲ್ಲಿ ಟ್ಯಾಂಕರ್‌ ನೀರನ್ನು ಒದಗಿಸಲಾಗಿತ್ತು. ಈ ವರ್ಷ ಈಗಾಗಲೇ 1250ಕ್ಕೂ ಅಧಿಕ ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ 75 ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದ್ದು ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಕೊಪ್ಪಳ, ಹಾವೇರಿ, ಧಾರವಾಡಗಳ ಜಿಲ್ಲೆಗಳಲ್ಲಿ ಈ ಸಂಖ್ಯೆ ನೂರು ದಾಟಿವೆ.

ಖಾಸಗಿ ಬೋರ್‌ವೆಲ್‌ಗಳೂ ವಶಕ್ಕೆ: ನೀರಿನ ಕೊರತೆಯಿರುವಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳು ಖಾಸಗಿ ಕೊಳವೆಬಾವಿಗಳನ್ನೂ ವಶಕ್ಕೆ ಪಡೆದು ಅಥವಾ ಬಾಡಿಗೆ ಪಡೆದು ಜನರಿಗೆ ನೀರು ಪೂರೈಸಲು ಪ್ರಯತ್ನಪಡುತ್ತಿವೆ. ಚಿಕ್ಕಬಳ್ಳಾಪುರದಲ್ಲಿ 141 ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ತುಮಕೂರಿನಲ್ಲಿ 150ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ನೀರು ಸರಬರಾಜು ಪೂರೈಸಲಾಗುತ್ತಿದೆ. ಬಹುತೇಕ ಮಲೆನಾಡು ಪ್ರದೇಶದಿಂದಲೇ ಆವೃತವಾಗಿರುವ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 9796 ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಪಾವತಿ ಕರಾರು ಮಾಡಿಕೊಂಡು ಟ್ಯಾಂಕರ್‌ ಮೂಲಕ ನೀರು ವಿತರಿಸಲಾಗುತ್ತಿದೆ.

ಸಾಕುಪ್ರಾಣಿಗಳಿಗೂ ಸಂಕಷ್ಟ: ಕೋಲಾರ, ಚಿಕ್ಕಬಳ್ಳಾಪುರ, ಹೈದ್ರಾಬಾದ್‌ ಕರ್ನಾಟಕ ಪ್ರದೇಶಗಳಲ್ಲಿ 1500ಕ್ಕೂ ಅಧಿಕ ಅಡಿ ಆಳ ಕೊರೆದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗದೆ ರೈತರು ಕಂಗಾಲಾಗಿದ್ದರೆ. ಬಿತ್ತಿದ ಬೆಳೆನಷ್ಟವಾಗಿರುವುದು ಒಂದೆಡೆಯಾದರೆ, ನೀರು, ಮೇವುಗಳಿಲ್ಲದೆ ಜಾನುವಾರುಗಳನ್ನು ಸಾಕಲೂ ಕಷ್ಟವಾಗುತ್ತಿದೆ. ಪರಿಣಾಮ ಧಾರವಾಡ, ಕೊಪ್ಪಳ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ನೀರು, ಮೇವು ಕೊರತೆಯಿಂದಾಗಿ ಜಾನುವಾರುಗಳನ್ನು ಮಾರಾಟ ಮಾಡು​ತ್ತಿ​ರುವವರ ಪ್ರಮಾಣ ಇತ್ತೀಚೆಗೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೂಕನೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಜಾನುವಾರುಗಳ ಮಾರಾಟ ಜಾಸ್ತಿಯಾಗಿದೆ. ಕೊಪ್ಪಳದಲ್ಲಿ ಕೆಲ ರೈತರು 2000ಕ್ಕೂ ಅಧಿಕ ಜಾನುವಾರುಗಳನ್ನು ನೀರು, ಮೇವು ದೊರೆಯುವ ತುಂಗಭದ್ರಾ ನದಿಯ ಬಲಭಾಗ(ಬಳ್ಳಾರಿ ಜಿಲ್ಲೆ)ದ ಹಳ್ಳಿಗಳಿಗೆ ಹೊಡೆದುಕೊಂಡು ಹೋಗಿರುವುದು ವಿಪರಾರ‍ಯಸ.

ಮುಗಿಯದ ಗುಳೆ ಸಮಸ್ಯೆ: ನೀರಿನ ಸಮಸ್ಯೆ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಕೃಷಿಕಾರ್ಯಗಳನ್ನು ಬಿಟ್ಟು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರು ತುತ್ತಿನ ಊಟಕ್ಕಾಗಿ ಪರವೂರುಗಳಿಗೆ ಕೆಲಸ ಹುಡುಕಿ ಗುಳೇ ಹೋಗುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕಲ​ಘ​ಟಗಿ ಹಾಗೂ ಅಳ್ನಾ​ವ​ರ​ದ ಜನತೆ ಕೆಲ​ಸ​ವಿ​ಲ್ಲದೆ ಗೋವಾ, ಮಹಾ​ರಾ​ಷ್ಟ್ರ​ಗ​ಳಿಗೆ ತೆರಳಿ​ದ್ದಾರೆ. ರಾಯಚೂರಿನ ದೇವದುರ್ಗ, ಮಾನ್ವಿ ಮತ್ತು ಲಿಂಗಸುಗೂರು ತಾಲೂಕುಗಳ ನೂರಾರು ತಾಂಡ, ದೊಡ್ಡಿ ಹಾಗೂ ಕ್ಯಾಂಪ್‌ಗಳ ಜನ ಕುಟುಂಬ ಸಮೇತ ಮಹಾರಾಷ್ಟ್ರ ಮತ್ತಿತರ ಕಡೆ ಗೇಳೇ ಹೋಗಿದ್ದಾರೆ. ಇದರ ನಡುವೆಯೂ ಜಿಲ್ಲಾ ಪಂಚಾಯಿತಿ ವತಿಯಿಂದ ಖಾತರಿ ಯೋಜನೆಯಡಿ ನಿತ್ಯ 50ರಿಂದ 70 ಸಾವಿರ ಕೂಲಿಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಇಷ್ಟಾದರೂ ಗುಳೇ ಪ್ರಮಾಣ ತಗ್ಗಿಲ್ಲ.