Asianet Suvarna News Asianet Suvarna News

ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ ಭೀತಿ

ರಾಜ್ಯದ ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಬುಧವಾರ ಮತ್ತಷ್ಟುತೀವ್ರವಾಗಿದ್ದು ನದಿಪಾತ್ರಗಳಲ್ಲಿ ನೆರೆಪರಿಸ್ಥಿತಿ ಉದ್ಭವವಾಗಿದೆ. 

Heavy Rainfall In Karnataka Many States
Author
Bengaluru, First Published Jul 12, 2018, 8:20 AM IST

ಬೆಂಗಳೂರು :  ರಾಜ್ಯದ ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಬುಧವಾರ ಮತ್ತಷ್ಟುತೀವ್ರವಾಗಿದ್ದು ನದಿಪಾತ್ರಗಳಲ್ಲಿ ನೆರೆಪರಿಸ್ಥಿತಿ ಉದ್ಭವವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಸೇತುವೆಯೊಂದರ ಮೇಲೆ ಬೈಕ್‌ ಸವಾರಿ ಮಾಡುತ್ತಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ನಡೆದಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ಜಿಲ್ಲೆಯ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು ಸಂಪರ್ಕ ಕಡಿತಗೊಂಡಿದೆ.

ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ತುಂಗಾ, ಭದ್ರಾ ಹಾಗೂ ಹೇಮಾವತಿ ನದಿ ಮಟ್ಟಹೆಚ್ಚಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದ್ದು ತಾಲೂಕಿನ ಕಬ್ಬಿನಹಳ್ಳ ಸೇತುವೆ ದಾಟುತ್ತಿದ್ದ ಬೈಕ್‌ಸವಾರ ಅಶೋಕ(21) ಎಂಬ ಯುವಕ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಬೈಕ್‌ ಸಿಕ್ಕಿದ್ದು, ಮೃತದೇಹದ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯಾದ್ಯಂತ ಅಂಗನವಾಡಿಗಳೂ ಸೇರಿದಂತೆ ಶಾಲಾ-ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಿಸಲಾಗಿದೆ. ಈಗಾಗಲೇ ಜಲಾವೃತವಾಗಿರುವ ಭಾಗಮಂಡಲದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ದಕ್ಷಿಣ ಕೊಡಗಿನಲ್ಲೂ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಲಕ್ಷ್ಮಣತೀರ್ಥ ನದಿ ಅಪಾಯದ ಮಟ್ಟಮೀರಿದೆ. ಹಲವು ಕಡೆಗಳಲ್ಲಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿದೆ.

ಸ್ನಾನಘಟ್ಟಗಳು ಮುಳುಗಡೆ:  ಪಶ್ಚಿಮಘಟ್ಟಮತ್ತು ತಪ್ಪಲು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೆಯ ಸೇತುವೆ ಮತ್ತು ಕುಮಾರಧಾರಾ ಸ್ನಾನಘಟ್ಟಸಂಪೂರ್ಣ ಜಲಾವೃತಗೊಂಡಿವೆ. ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟಹೆಚ್ಚಳವಾಗಿದ್ದು ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ, ಪರಶುರಾಮ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಹದಿನಾರು ಕಲ್ಲು ಮಂಟಪ ಮುಕ್ಕಾಲು ಭಾಗ ಮುಳುಗಡೆಯಾಗಿದೆ.

ನಾಲ್ಕು ಸೇತುವೆ ಜಲಾವೃತ:  ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜಾಪುರ ಬ್ಯಾರೇಜ್‌ ಮೂಲಕ ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 68,419 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಬ್ಯಾರೇಜ್‌ದಿಂದ 53,100 ಕ್ಯುಸೆಕ್‌ ನೀರನ್ನು ಹೊರಗೆ ಹರಿ ಬಿಡಲಾಗುತ್ತಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಚಿಕ್ಕೋಡಿ, ಖಾನಾಪುರಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ವೇದಗಂಗಾ ಮತ್ತು ದೂಧಗಂಗಾ ನದಿಯ ಕೆಳ ಹಂತದ 4 ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿವೆ. ಮಲಪ್ರಭಾ ನದಿ ಉಗಮ ಸ್ಥಾನವಾದ ಕಣಕುಂಬಿಯಲ್ಲಿ ಒಂದೇ ದಿನ 220 ಮಿ.ಮೀ. ಮಳೆಯಾಗಿದ್ದು ಮಲಪ್ರಭಾ, ಪಾಂಡರಿ, ಮಹದಾಯಿ ನದಿಗಳು ತುಂಬಿ ಹರಿಯುತ್ತಿವೆ.

ಇನ್ನುಳಿದಂತೆ ಕಲಬುರಗಿ ಉತ್ತರ ಕನ್ನಡ, ಹಾವೇರಿ, ಧಾರವಾಡ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆ ಸುರಿದಿದೆ.

ಭರ್ತಿಯಾಗುವತ್ತ ಜಲಾಶಯಗಳು :  ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯಗಳಾದ ಕಬಿನಿ, ಹೇಮಾವತಿ, ಹಾರಂಗಿ ಜಲಾಶಯ ಮಟ್ಟದಲ್ಲಿ ಏರಿಕೆ ಕಂಡಿದೆ.ಕೊಡಗಿನಲ್ಲಿ ಸುರಿಯುತ್ತಿರುವ ಭಾರಿಮಳೆಯಿಂದಾಗಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟಏರುಗತಿಯಲ್ಲೇ ಸಾಗಿದ್ದು ಡ್ಯಾಂ ಭರ್ತಿಗೆ ಇನ್ನು 8 ಅಡಿ ಮಾತ್ರ ಬಾಕಿ ಇದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ 30ರಿಂದ 35 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ. ಹೇಮಾವತಿ ಜಲಾಶಯ ಭರ್ತಿಗೂ ಕೇವಲ 9 ಅಡಿ ಬಾಕಿ ಇದೆ.

ಬುಧವಾರ ಸಂಜೆ 6 ಗಂಟೆ ವೇಳೆಗೆ 116.40 ಅಡಿ ನೀರಿತ್ತು. ಒಳಹರಿವು 35,435ಕ್ಯುಸೆಕ್‌ ಹಾಗೂ ಹೊರ ಹರಿವು 3820 ಕ್ಯುಸೆಕ್‌ ಇದೆ. ಜಲಾಶಯ ಭರ್ತಿಯಾಗುವ ತನಕ ಯಾವುದೇ ಕಾರಣಕ್ಕೂ ನದಿಗೆ ನೀರು ಬಿಡದಂತೆ ಕಾವೇರಿ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಬುಧವಾರ ಬೆಂಗಳೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಾಕೀತು ಮಾಡಿದ್ದಾರೆ.

Follow Us:
Download App:
  • android
  • ios