ಕೇವಲ ಮೀಸಲಾತಿ ವ್ಯವಸ್ಥೆಯಿಂದಲೇ ಎಲ್ಲರ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಿನ ಕೆಲಸ ಸರ್ಕಾರ ಮಾಡಿದರೆ ಸಮಸ್ಯೆ ಪರಿಹಾರ ಸಿಗುತ್ತೆ

ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡಿದರೆ ಸುಮಾರು 50 ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗುತ್ತೆ. ಬೇರೆಕಡೆಯಿಂದ ಸಾಲ ಮಾಡಿ ರೈತರ ಸಾಲ ತೀರಿಸಬೇಕಾಗುತ್ತದೆ. ಆದರೆ ಆ ಸಾಲ ನಿಮ್ಮ ಮೇಲೆ ಹೊರೆ ಬೀಳುತ್ತೆ. ಇಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಸಾಧ್ಯವಿದೆ. ಬಹುಮತದ ನಮ್ಮ ಸರ್ಕಾರ ಬಂದಾಗ ಮಾತ್ರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿದೆ. ಹೀಗಾಗಿ ನಮ್ಮನ್ನು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೋಗುವಂತೆ ಮಾಡಬೇಡಿ. ಈ ಬಾರಿ ನಮಗೆ ಸಂಪೂರ್ಣ ಬಹುಮತ ನೀಡಿ. ನಿಮ್ಮ ಆಶಯಕ್ಕೆ ತಕ್ಕ ಹಾಗೆ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದರು.

ಮೀಸಲಾತಿ ವ್ಯವಸ್ಥೆಯ ಸೌಲಭ್ಯಗಳನ್ನು ಎಷ್ಟೋ ಕುಟುಂಬಗಳು ಬಳಸಿಲ್ಲ. ಕಳೆದ 70 ವರ್ಷಗಳಿಂದ ಮೀಸಲಾತಿ ಸೌಲಭ್ಯದ ಲಾಭ ಪಡೆದವರೇ ಇನ್ನು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ವ್ಯವಸ್ಥೆಗಿಂತ ಮುಂದೆ ಹೋಗಿ, ಸಮಾಜದ ಎಲ್ಲಾ ವರ್ಗಗಳ ಬಡವರ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಕೇವಲ ಮೀಸಲಾತಿ ವ್ಯವಸ್ಥೆಯಿಂದಲೇ ಎಲ್ಲರ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಿನ ಕೆಲಸ ಸರ್ಕಾರ ಮಾಡಿದರೆ ಸಮಸ್ಯೆ ಪರಿಹಾರ ಸಿಗುತ್ತೆ ಎಂದು ಹೇಳಿದರು.