ಎಚ್.ಡಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಮಾನ ಮನಸ್ಕ ಕ್ಯಾಬ್ ಚಾಲಕರೇ ಆರಂಭಿಸಿ ಬಳಿಕ ಬಂದಷ್ಟೇ ವೇಗದಲ್ಲಿ ತೆರೆಗೆ ಸರಿದಿದ್ದ ಆ್ಯಪ್ ಆಧಾರಿತ ‘ನಮ್ಮ ಟೈಗರ್’ ಕ್ಯಾಬ್ ಸೇವೆ ಶೀಘ್ರದಲ್ಲೇ ಮರು ಆರಂಭವಾಗುವ ಸೂಚನೆ ದೊರೆತಿದೆ. 

ಬೆಂಗಳೂರು : ಆ್ಯಪ್ ಆಧರಿತ ಒಲಾ, ಉಬರ್ ಟ್ಯಾಕ್ಸಿ ಸೇವಾ ಕಂಪನಿಗಳಿಗೆ ಸಡ್ಡು ಹೊಡೆಯುವ ಉದ್ದೇಶ ದಿಂದ ಕಳೆದ ವರ್ಷ ಎಚ್.ಡಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಮಾನ ಮನಸ್ಕ ಕ್ಯಾಬ್ ಚಾಲಕರೇ ಆರಂಭಿಸಿ ಬಳಿಕ ಬಂದಷ್ಟೇ ವೇಗದಲ್ಲಿ ತೆರೆಗೆ ಸರಿದಿದ್ದ ಆ್ಯಪ್ ಆಧಾರಿತ ‘ನಮ್ಮ ಟೈಗರ್’ ಕ್ಯಾಬ್ ಸೇವೆ ಶೀಘ್ರದಲ್ಲೇ ಮರು ಆರಂಭವಾಗುವ ಸೂಚನೆ ದೊರೆತಿದೆ. 

ಎಲ್ಲವೂ ಅಂದುಕೊಂಡತೆ ಸಾಗಿದ್ದರೆ ನಗರದಲ್ಲಿ ಕ್ಯಾಬ್ ಸೇವೆ ಆರಂಭವಾಗಿ ಒಂದು ವರ್ಷ ಕಳೆಯಬೇಕಾಗಿತ್ತು. ಕ್ಯಾಬ್ ಸೇವೆ ಒದಗಿಸಲು ಅಗ್ರಿಗೇಟರ್ ಪರವಾನಗಿ ಪಡೆಯಲು ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ವೇಳೆ ನೀಡಲಾಗಿದ್ದ ದಾಖಲೆಗಳಲ್ಲಿ ಕೆಲ ತಾಂತ್ರಿಕ ದೋಷಗಳು ಕಂಡು ಬಂದಿದ್ದರಿಂದ ಸಾರಿಗೆ ಇಲಾಖೆ ಪರವಾನಗಿ ನಿರಾಕರಿಸಿತ್ತು. ಇದೀಗ ದಾಖಲೆಗಳ ದೋಷ ಸರಿಪಡಿಸಿಕೊಂಡು ಅಗ್ರಿಗೇಟರ್ ಪರವಾನಗಿ ಪಡೆಯಲು ನಿರ್ಧರಿಸಲಾಗಿದೆ ಎಂದು ಕ್ಯಾಬ್ ಚಾಲಕರು ಮತ್ತು ಮಾಲಿಕರ ಸಂಘಟನೆ ಮುಖಂಡ ತನ್ವೀರ್ ಪಾಷಾ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 

ಒಲಾ, ಉಬರ್ ಕಂಪನಿಗಳಲ್ಲಿ ಚಾಲಕರ ಮೇಲೆ ನಡೆಯುತ್ತಿರುವ ಶೋಷಣೆ ಸೇರಿದಂತೆ ಚಾಲಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚಾಲಕ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಉನ್ನತ ಸಮಿತಿ ರಚನೆಗೆ ಸೂಚಿಸಿದ್ದಾರೆ. ಕಳೆದ ವರ್ಷ ಅವರ ಮಾರ್ಗದರ್ಶನದಲ್ಲೇ ನಮ್ಮ ಟೈಗರ್ ಕ್ಯಾಬ್ ಸೇವೆ ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗಿತ್ತು. 

ಆದರೆ, ತಾಂತ್ರಿಕ ಕಾರಣಗಳಿಂದ ಪರವಾನಗಿ ಸಿಕ್ಕಿರಲಿಲ್ಲ. ಇದೀಗ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪರವಾನಗಿ ಪಡೆದು ಕ್ಯಾಬ್ ಸೇವೆ ಆರಂಭಿಸಲು ನಿಶ್ಚಿಯಿಸಿದ್ದೇವೆ. ರಾಜ್ಯ ಸರ್ಕಾರವೇ ಕ್ಯಾಬ್ ಪ್ರಯಾಣಿಕರ ಅನುಕೂಲಕ್ಕಾಗಿ ಆ್ಯಪ್ ರೂಪಿಸುವ ಚಿಂತನೆಯಲ್ಲಿದ್ದು, ಅದನ್ನೂ ಸ್ವಾಗತಿಸುತ್ತೇವೆ ಎಂದರು.

ಲೋಗೋ-ಆ್ಯಪ್ ಬಿಡುಗಡೆಯಾಗಿತ್ತು: ಕೋಲ್ಕತ್ತ ಮೂಲದ ಸ್ಟಾರ್ಟ್‌ಅಪ್ ಮಾದರಿಯ ‘ಹುಲಿ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್’ ಕಂಪನಿ ಅಡಿಯಲ್ಲಿ ಚಾಲಕ ಹಾಗೂ ಪ್ರಯಾಣಿಕ ಸ್ನೇಹಿಯಾಗಿ ‘ನಮ್ಮ ಟೈಗರ್’ ಕ್ಯಾಬ್ ಸೇವೆ ಆರಂಭಿಸಲು ಸರ್ವ ಸಿದ್ಧತೆ ನಡೆದಿತ್ತು. ಇದಕ್ಕೆ
ಪೂರಕವಾಗಿ ಕ್ಯಾಬ್ ಸೇವೆಯ ‘ಲೋಗೋ’ ಮತ್ತು ‘ನಮ್ಮ ಟೈಗರ್’ ಆ್ಯಪ್ ಕೂಡ ರೂಪಿಸಲಾಗಿತ್ತು. 2017 ರ ನವೆಂಬರ್‌ನಲ್ಲಿ ನಗರದ ಪುರಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅಂದಿನ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಲೋಗೋ ಮತ್ತು ಆ್ಯಪ್ ಬಿಡುಗಡೆಗೊಳಿಸಿದ್ದರು.

ಒಂದೆಡೆ ಅಗ್ರಿಗೇಟರ್ ಪರವಾನಗಿಗೆ ಅರ್ಜಿ ಸಲ್ಲಿಸಿದ್ದ ಹುಲಿ ಟೆಕ್ನಾಲಜಿಸ್ ಸಂಸ್ಥೆ, ಮತ್ತೊಂದೆಡೆ ಪ್ರಾಯೋಗಿಕವಾಗಿ ನಗರದಲ್ಲಿ ಕ್ಯಾಬ್ ಸೇವೆ ಆರಂಭಿಸಿತ್ತು. ಪರವಾನಗಿ ಪಡೆಯದೇ ಸೇವೆಗೆ ಮುಂದಾಗಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು, ನಗರದ ಹಲವೆಡೆ ನಮ್ಮ ಟೈಗರ್ ಕ್ಯಾಬ್‌ಗಳನ್ನು ಜಪ್ತಿ ಮಾಡಿ ದಂಡ ವಿಧಿಸಲು ಆರಂಭಿಸಿದ್ದರು. ಹಾಗಾಗಿ ನಮ್ಮ ಟೈಗರ್ ಕ್ಯಾಬ್ ಸೇವೆ ಸ್ಥಗಿತಗೊಂಡಿತ್ತು.

ಚಾಲಕರಿಗೆ ಭರಪೂರ ಸೌಲಭ್ಯ: ಸಂಸ್ಥೆಗೆ ಸೇರುವ ಚಾಲಕರಿಗೆ ಭರಪೂರ ಸೌಲಭ್ಯಗಳು ಘೋಷಿಸಿದ್ದ ಹುಲಿ ಟೆಕ್ನಾಲಜಿಸ್, ಚಾಲಕರ ಕುಟುಂಬಕ್ಕೆ 2 ಲಕ್ಷ ವೈದ್ಯಕೀಯ ವಿಮೆ, 5 ಲಕ್ಷ ಅಪಘಾತ ವಿಮೆ, 5 ಲಕ್ಷ ಜೀವ ವಿಮೆ ಸೇರಿದಂತೆ 12 ಲಕ್ಷದ ವಿಮಾ ಸೌಲಭ್ಯ,
ಕಾರುಗಳಿಗೆ ಉಚಿತ ಸರ್ವಿಸ್ ಇತರೆ ಸೌಲಭ್ಯಗಳನ್ನು ಪ್ರಕಟಿಸಿತ್ತು. ಸರ್ಕಾರ ನಿಗದಿತ ದರದಲ್ಲಿ ದಿನದ 24 ತಾಸು ಕ್ಯಾಬ್ ಸೇವೆ ನೀಡಲು ನಿಶ್ಚಯಿಸಿದ್ದ ಸಂಸ್ಥೆ, ತುರ್ತು ಸಂದರ್ಭಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರ ನೆರವಿಗಾಗಿ ಗಸ್ತುವಾಹನ ನಿಯೋಜಿಸುವುದಾಗಿ ತಿಳಿಸಿತ್ತು.

ಮೋಹನ್ ಹಂಡ್ರಂಗಿ