ಬೆಂಗಳೂರು[ಜು.12]: ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಈಗಲೂ ಗೌರವ, ವಿಶ್ವಾಸವಿದೆ. ಆದರೆ, ಕೆಲವರು ಅವರ ದಾರಿ ತಪ್ಪಿಸಿದರು. ಮೈತ್ರಿ ಸರ್ಕಾರ ನಡೆಸುವುದು ಸವಾಲಾಗಿತ್ತು. ಕುಮಾರಸ್ವಾಮಿ ಅವರ ಪಕ್ಕ ನಿಂತು ಸವಾಲು ಎದುರಿಸಲು ಬಯಸಿದ್ದೆ. ಆದರೆ, ಕುಮಾರಸ್ವಾಮಿ, ಸಿದ್ದರಾಮಯ್ಯ ಆರಂಭದಿಂದಲೂ ನನ್ನನ್ನು ದೂರ ಇಟ್ಟರು. ಇದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು..!’

ಅತೃಪ್ತರ ಗುಂಪಿನ ಜೆಡಿಎಸ್‌ ಶಾಸಕರಲ್ಲೊಬ್ಬರಾದ ಎಚ್‌.ವಿಶ್ವನಾಥ್‌ ಅವರ ಹೇಳಿಕೆಯಿದು.

ಗುರುವಾರ ಮುಂಬೈನಿಂದ ಬೆಂಗಳೂರಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈಗಲೂ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ನಂಬಿಕೆ, ಗೌರವ, ವಿಶ್ವಾಸವಿದೆ. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ನಡೆಸುವುದು ದೊಡ್ಡ ಸವಾಲಾಗಿತ್ತು. ಆದರೆ, ಕೆಲವರು ಅವರನ್ನು ದಾರಿ ತಪ್ಪಿಸಿದರು. ನಾನು ಮೊದಲಿಂದಲೂ ಹೇಳುತ್ತಲೇ ಬಂದಿದ್ದೆ. ನನಗೆ ಯಾವ ಸಚಿವ ಸ್ಥಾನದ ಅಧಿಕಾರವೂ ಬೇಡ. ನಿಮ್ಮ ಪಕ್ಕದಲ್ಲಿ ನಿಂತು ನಿಮ್ಮೊಂದಿಗೆ ಮೈತ್ರಿ ಸರ್ಕಾರದ ಸವಾಲುಗಳನ್ನು ಎದುರಿಸುತ್ತೇನೆ ಎಂದಿದ್ದೆ. ಆದರೆ, ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರೂ ನನ್ನನ್ನು ಆರಂಭದಿಂದಲೂ ದೂರ ಇಟ್ಟರು. ಜನರು ನೀಡಿದ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತೃಪ್ತ ಶಾಸಕರಾರೂ ವೈಯಕ್ತಿಕವಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿಲ್ಲ. ಮೈತ್ರಿ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕೆ, ರಾಜಕಾರಣ, ಕ್ಷೇತ್ರದ ಅಭಿವೃದ್ಧಿ, ಜನಜೀವನ ಸೇರಿದಂತೆ ಹತ್ತಾರು ವಿಷಯಗಳನ್ನು ಯೋಚಿಸಿ ನಿರ್ಧಾರ ಕೈಗೊಂಡಿದ್ದರೆ. ಆ ನಿರ್ಧಾರ ಸರಿಯಾಗಿಯೂ ಇದೆ. ಇದರ ನಡುವೆ, ನಾವೆಲ್ಲಾ ಸೇರಿ ಬೇರೆ ಏನೋ ಮಾಡಿಬಿಡುತ್ತೇವೇನೋ ಎಂಬ ಭಯವೂ ಇದೆ. ಏಕೆಂದರೆ, ರಾಜ್ಯ ರಾಜಕಾರಣಕ್ಕೆ ತನ್ನದೇ ಆದ ಪರಂಪರೆ ಇದೆ ಎಂದರು.

ನಾವೆಲ್ಲರೂ ರಾಜೀನಾಮೆ ನೀಡಿಯಾಗಿದೆ. ಮತ್ತೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಯಾವ ನಾಯಕರ ಮಾತುಕತೆಯೂ ನಡೆಯುವುದಿಲ್ಲ. ಸುಪ್ರೀಂಕೋರ್ಟ್‌ ಆದೇಶದಂತೆ ಸ್ಪೀಕರ್‌ ಭೇಟಿ ಮಾಡಿ ಮತ್ತೆ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಪುನರುಚ್ಚರಿಸಿದರು.