Asianet Suvarna News Asianet Suvarna News

12 ತಾಸುಗಳವರೆಗೆ ಜನರ ಸಮಸ್ಯೆ ಆಲಿಸಿದ ಸಿಎಂ

ಮುಖ್ಯಮಂತ್ರಿಯಾದ ಪ್ರಥಮ ದಿನದಿಂದಲೂ ಸಾರ್ವಜನಿಕರನ್ನು ಭೇಟಿ ಮಾಡಿ ಆಗಾಗ ಅವರ ಅಹವಾಲು ಕೇಳುತ್ತಿದ್ದ ಕುಮಾರಸ್ವಾಮಿ ಅವರು ಶನಿವಾರದಿಂದ ಅಧಿಕೃತವಾಗಿ ಜನತಾ ದರ್ಶನಕ್ಕೆ ಚಾಲನೆ ನೀಡಿದರು. ಮಧ್ಯರಾತ್ರಿವರೆಗೂ ಜನತಾದರ್ಶನ ಮಾಡಿದ ಸಿಎಂ 1600ಕ್ಕೂ ಅಧಿಕ ಅರ್ಜಿ ಸ್ವೀಕಾರ ಮಾಡಿದರು. 

HD Kumaraswamy Conduct Janatha Darshan
Author
Bengaluru, First Published Sep 2, 2018, 8:48 AM IST

ಬೆಂಗಳೂರು :  ಉದ್ಯೋಗ, ಚಿಕಿತ್ಸಾ ವೆಚ್ಚ, ಹಣಕಾಸು ನೆರವು, ಮಾಸಾಶನ, ನಿವೇಶನ ಸಮಸ್ಯೆ, ಹೀಗೆ ಹತ್ತು ಹಲವು ಸಮಸ್ಯೆಗಳು ಹೊತ್ತು ನಾಡಿನ ಮೂಲೆ ಮೂಲೆಯಿಂದ ಬಂದ ಶ್ರೀಸಾಮಾನ್ಯರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ ತಮ್ಮ ದುಮ್ಮಾನ ಹೇಳಿಕೊಂಡರು.

ಮುಖ್ಯಮಂತ್ರಿಯಾದ ಪ್ರಥಮ ದಿನದಿಂದಲೂ ಸಾರ್ವಜನಿಕರನ್ನು ಭೇಟಿ ಮಾಡಿ ಆಗಾಗ ಅವರ ಅಹವಾಲು ಕೇಳುತ್ತಿದ್ದ ಕುಮಾರಸ್ವಾಮಿ ಅವರು ಶನಿವಾರದಿಂದ ಅಧಿಕೃತವಾಗಿ ಜನತಾ ದರ್ಶನಕ್ಕೆ ಚಾಲನೆ ನೀಡಿದರು. ಇದಕ್ಕೆ ಅಭೂತಪೂರ್ವ ಸ್ಪಂದನೆಯೂ ದೊರೆಯಿತು. ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗೃಹ ಕಚೇರಿ ಕೃಷ್ಣಾಗೆ ಅಗಮಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಡರಾತ್ರಿವರೆಗೆ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು. ಮಧ್ಯಾಹ್ನದ ಭೋಜನವನ್ನು ಸಹ ಸೇವಿಸದೆ ಜನರ ಅಹವಾಲುಗಳನ್ನು ಸಹನೆಯಿಂದ ಕೇಳಿ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಯತ್ನ ನಡೆಸಿದರು.

ಕಳೆದ 12 ವರ್ಷಗಳ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾ ದರ್ಶನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿ, ಇಡೀ ದಿನ ಜನರ ಸಮಸ್ಯೆಗಳನ್ನು ಆಲಿಸಿ ಕೆಲವೊಂದಕ್ಕೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಜನರು ತಮ್ಮ ದುಃಖ ದುಮ್ಮಾನ, ನೋವು, ಸಂಕಷ್ಟಗಳನ್ನು ನಾಡಿನ ದೊರೆಯ ಮುಂದಿಟ್ಟು ಪರಿಹಾರಕ್ಕಾಗಿ ಪರಿಪರಿಯಾಗಿ ವಿನಂತಿಸಿಕೊಂಡರು. ಅಹವಾಲುಗಳೊಂದಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸೂರು, ಆಸನ,ಕುಡಿಯುವ ನೀರು, ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು.

ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉದ್ಯೋಗ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಾಗಿ ಸಲ್ಲಿಕೆಯಾಗಿವೆ. 132 ಅರ್ಜಿಗಳು ಉದ್ಯೋಗ ತರಬೇತಿ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಈ ಪೈಕಿ 300ಕ್ಕೂ ಹೆಚ್ಚು ಅಂಗವಿಕಲರಾಗಿದ್ದರು. ಜನತಾದರ್ಶನಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಟೋಕನ್‌ ನೀಡಿ, ವ್ಯವಸ್ಥಿತವಾಗಿ ಜನತಾದರ್ಶನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿದ್ದು, ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟುಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ವಹಿಸಲಾಯಿತು. ಒಂದೂವರೆ ಗಂಟೆಗಳ ಕಾಲ ತಡವಾಗಿ ಆಗಮಿಸಿ ಜನತಾ ದರ್ಶನ ಆರಂಭಿಸಿದ ಕುಮಾರಸ್ವಾಮಿ ಶಾಂತಚಿತ್ತದಲ್ಲಿಯೇ ಎಲ್ಲರ ಸಮಸ್ಯೆಗಳನ್ನು ಆಲಿಸಿದ್ದು ಜನರ ಮೊಗದಲ್ಲಿ ಮಂದಹಾಸ ಮೂಡಿದ್ದು ಕಂಡುಬಂತು.

ಬೆಂಗಳೂರಿನ ಕೋರಮಂಗಲದ ರಂಗನಾಥ್‌ ಎಂಬ ಅಂಗವಿಕಲ ವ್ಯಕ್ತಿಯೊಬ್ಬರು ತಮ್ಮ ಜೀವನಾಧಾರವಾಗಿದ್ದ ಕೋರಮಂಗಲದ ರಸ್ತೆ ಬದಿಯಲ್ಲಿ ಇಟ್ಟುಕೊಂಡಿದ್ದ ಟೀ ಅಂಗಡಿಯನ್ನು ತೆರವುಗೊಳಿಸಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ತಕ್ಷಣ ಬಿಬಿಎಂಪಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರ್ಯಾಯ ಸ್ಥಳ ಗೊತ್ತು ಮಾಡಿಕೊಡುವಂತೆ ಸೂಚಿಸಿದರು.

ಮನೆಗೆ ಆಧಾರವಾಗಿದ್ದ ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ವೈದ್ಯಕೀಯ ವೆಚ್ಚ ಭರಿಸುವುದು ಮತ್ತು ಎರಡು ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ಎರಡು ಹೊತ್ತಿನ ಊಟಕ್ಕೂ ತತ್ವಾರವಾಗಿದೆ. ಸುಮಾರು 3 ಲಕ್ಷ ರು. ಕೈ ಸಾಲ ಮಾಡಿಕೊಂಡಿರುವುದಾಗಿ ಮಂಡ್ಯ ಜಿಲ್ಲೆಯ ಮಂಜುಳಾ ಸಮಸ್ಯೆ ಹೇಳಿಕೊಂಡರು. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರು ಮಂಜುಳಾ ಪತಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಇದೇ ವೇಳೆ ಸಾಂತ್ವನ ಹೇಳಿ 50 ಸಾವಿರ ರು. ಚೆಕ್‌ ವಿತರಿಸಿದರು.

ಮೂರು ತಿಂಗಳ ಮಗುವಿನೊಂದಿಗೆ ಆಗಮಿಸಿದ ಮಹಿಳೆ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಆರ್‌.ನಾಗಮಣಿ ತಮ್ಮ ಮೂರು ತಿಂಗಳ ಮಗುವನ್ನು ಎತ್ತಿಕೊಂಡು ಜನತಾದರ್ಶನಕ್ಕೆ ಆಗಮಿಸಿದ್ದರು. ಅನಾರೋಗ್ಯ ಪೀಡಿತರಾಗಿರುವ ನಾಗಮಣಿ ತಮ್ಮ ಆರ್ಥಿಕ ಸಂಕಷ್ಟವನ್ನು ಮುಖ್ಯಮಂತ್ರಿಗಳ ಬಳಿ ತೋಡಿಕೊಂಡರು. ತಮ್ಮ ಹೆರಿಗೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ಲಕ್ಷಾಂತರ ರು. ವೆಚ್ಚ ಮಾಡಿರುವುದಾಗಿ ಹೇಳಿಕೊಂಡರು. ಕೂಡಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರು. ಚೆಕ್‌ ವಿತರಣೆ ಮಾಡಲಾಗಿತು.

11 ವರ್ಷದ ಲೋಹಿತ್‌ ಮುಖ್ಯಮಂತ್ರಿ ಬಳಿ ಬಿಕ್ಕುತ್ತಲೇ ತನಗೆ ಬ್ಲಡ್‌ ಕ್ಯಾನ್ಸರ್‌ ಇರುವುದಾಗಿ ತಿಳಿಸಿದ. ಈ ವೇಳೆ ಲೋಹಿತ್‌ ಮತ್ತು ಆತನ ತಾಯಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿಗಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಬಾಲಕನಿಗೆ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದರು. ಲೋಹಿತ್‌ನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಅಶ್ವಾಸನೆ ನೀಡಿ ಸ್ಥಳದಲ್ಲಿ 10 ಸಾವಿರ ರು. ಚೆಕ್‌ ನೀಡಿದರು.

ಮಾನವೀಯತೆ ಮೆರೆದ ಪೇದೆ

ಜನತಾದರ್ಶನಕ್ಕೆ ಆಗಮಿಸಿದ ಅಂಕವಿಕಲ ಯುಸೂಫ್‌ ಸಬೀರ್‌ ಎಂಬಾತನನ್ನು ಸ್ಥಳದಲ್ಲಿದ್ದ ಸಂಚಾರ ಪೇದೆ ಬಾಲಾಜಿಯು ಎತ್ತಿಕೊಂಡು ಹೋಗಿ ಮಾನವಿಯತೆ ಮರೆದ ಪ್ರಸಂಗ ನಡೆಯಿತು. ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಿದ ಸಬೀರ್‌ಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೃಷ್ಣಾದೊಳಗೆ ಆಗಮಿಸಲು ಕಷ್ಟಪಡುತ್ತಿದ್ದನ್ನು ಗಮನಿಸಿದ ಪೇದೆ ಬಾಲಾಜಿ, ಗೇಟ್‌ನಿಂದ ಒಳಗಡೆ ಎತ್ತಿಕೊಂಡು ಬಂದರು. ಈ ಘಟನೆಯು ಎಲ್ಲರ ಗಮನ ಸೆಳೆಯಿತು.

ಕಿರುಕುಳ, ರಕ್ಷಣೆಗೆ ಮನವಿ

ಬಳ್ಳಾರಿ ಜಿಲ್ಲೆಯ ಹುಲವತ್ತಿ ಗ್ರಾಮದ ದಾನಪ್ಪ ಎಂಬ ಯುವಕ ತನ್ನ ತಂದೆ ಮಾಡಿದ್ದ 20 ಸಾವಿರ ರು. ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಸೇರಿ 5 ಲಕ್ಷ ರು. ದಾಟಿದೆ. ಸಾಲಗಾರರು ಕಿರುಕುಳ ನೀಡುತ್ತಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದರು. ಬಳ್ಳಾರಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು ದಾನಪ್ಪ ಅವರಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿದರು, ಒಂದು ತಿಂಗಳಲ್ಲಿ ಋುಣ ಪರಿಹಾರ ಕಾಯ್ದೆ ಜಾರಿಗೆ ಬಂದಾಗ ಜಮೀನಿನ ಕಾಗದ ಪತ್ರವನ್ನು ವಾಪಸು ಪಡೆಯಲು ಸಾಧ್ಯವಿದೆ ಎಂದು ಸಮಾಧಾನ ಮಾಡಿದರು.

ದಯಾಮರಣಕ್ಕೆ ಮನವಿ :  ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಕಿತ್ತುಕೊಂಡಿರುವ ವ್ಯಕ್ತಿಯಿಂದ ಜಮೀನು ಕೊಡಿಸಿ ಅಥವಾ ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು ಮಂಡ್ಯದ ಕೃಷ್ಣ ಎಂಬುವವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ತಮಗೆ ಸೇರಿದ ನಾಲ್ಕು ಎಕರೆ ಜಮೀನನ್ನು ವೈನ್‌ಸ್ಟೋರ್‌ ಮಾಲೀಕ ಮಂಚಯ್ಯ ಎಂಬಾತ ಕಿತ್ತುಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಪಡೆದುಕೊಂಡಿದ್ದಾರೆ. ಆತನಿಗೆ ಅಧಿಕಾರಿಗಳ ಕುಮ್ಮಕ್ಕಿದೆ. ಹೀಗಾಗಿ ಜಮೀನು ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲಾಧಿಕಾರಿ ಅವರಿಂದ ತನಿಖೆ ನಡೆಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.

Follow Us:
Download App:
  • android
  • ios