ಬೆಂಗಳೂರು [ಜು.28] : ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಎಷ್ಟುನೋವು ಅನುಭವಿಸಿದ್ದಾರೆ, ಎಷ್ಟುಕಷ್ಟಪಟ್ಟಿದ್ದಾರೆ ಎಂಬುದು ಗೊತ್ತಿದೆ. ಪಕ್ಷದ ಕಚೇರಿಯಲ್ಲಿ ಅವರು ನನ್ನೆದುರು 15 ನಿಮಿಷ ಕಣ್ಣೀರು ಹಾಕಿದ್ದರು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಶನಿವಾರ ಜೆಡಿಎಸ್‌ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ತುಂಬಾ ನೋವು ಅನುಭವಿಸಿದ್ದಾರೆ. ಆಡಳಿತ ನಡೆಸುವ ವೇಳೆ ಅನುಭವಿಸಿದ ಕಷ್ಟದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ, ಯಾವ ವಿಚಾರವಾಗಿ ಕುಮಾರಸ್ವಾಮಿ ಕಣ್ಣೀರು ಹಾಕಿದರು ಎಂಬ ವಿಚಾರವನ್ನು ಬಹಿರಂಗಪಡಿಸಲು ದೇವೇಗೌಡರು ಇಚ್ಛಿಸಲಿಲ್ಲ.

ಅಧಿಕಾರ ಕಳೆದುಕೊಂಡ ಮಾತ್ರಕ್ಕೆ ಜೆಡಿಎಸ್‌ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಹೋದರೂ ಚಿಂತೆ ಇಲ್ಲ. ಪಕ್ಷವನ್ನು ಸಂಘಟನೆ ಮಾಡುತ್ತೇವೆ. ತಳಮಟ್ಟದಿಂದ ಪಕ್ಷವನ್ನು ಬಲಗೊಳಿಸಲು ನಿರಂತರ ಶ್ರಮ ಹಾಕುತ್ತೇವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ ಪಕ್ಷದೊಂದಿಗಿನ ಮೈತ್ರಿ ಮುಂದುವರಿಸುವ ವಿಚಾರದ ಕುರಿತು ಸದ್ಯಕ್ಕೆ ಚರ್ಚೆ ಬೇಡ. ಮುಂದಿನ ದಿನದಲ್ಲಿ ಆ ಬಗ್ಗೆ ನೋಡೋಣ ಎಂದಷ್ಟೇ ಪ್ರತಿಕ್ರಿಯಿಸಿದರು.

ಪಕ್ಷದ ಶಾಸಕ ಕೆ.ಗೋಪಾಲಯ್ಯ ನಮ್ಮ ವಿರುದ್ಧ ಹೇಳಿಕೆ ನೀಡಿ ಮುಂಬೈಗೆ ಹೋಗಿದ್ದಾರೆ. ಬಂಡಾಯ ಶಾಸಕರ ಬಗ್ಗೆ ವಿಧಾನಸಭೆಯ ಸ್ಪೀಕರ್‌ ವಾರದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ. ಚುನಾವಣೆ ನಡೆಯುತ್ತೋ, ಇಲ್ಲವೋ ಗೊತ್ತಿಲ್ಲ ಎಂದು ಗೌಡರು ಮಾರ್ಮಿಕವಾಗಿ ಹೇಳಿದರು.

ಪರಿಣಾಮಕಾರಿಯಾಗಿ ಪ್ರತಿಪಕ್ಷದ ಕೆಲಸ ಮಾಡುವಂತೆ ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ. ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದೇವೆ. ಏನು ಮಾಡೋದಕ್ಕೆ ಆಗುತ್ತದೆ? ಕುಮಾರಸ್ವಾಮಿಗೆ ಶೇ.20ರಷ್ಟುಮತ ಕೊಟ್ಟಿರುವ ಮತದಾರರಿದ್ದಾರೆ ಎಂದು ಹೇಳಿದರು.

ಧನವಿನಿಯೋಗ ವಿಧೇಯಕಕ್ಕೆ ಎಲ್ಲರೂ ಒಪ್ಪಿದರೆ ನಾವೂ ಸಹಕಾರ ನೀಡುತ್ತೇವೆ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ಮೇಲೆ ಲೇಖಾನುದಾನ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದೇವೆ. ಆ.7ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. 30 ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆಗೊಳಿಸುತ್ತೇವೆ. ಅಲ್ಲದೇ, ಆಗಸ್ಟ್‌ 2ನೇ ವಾರದಲ್ಲಿ ಮಹಿಳಾ ಸಮಾವೇಶವನ್ನು ನಡೆಸಲಾಗುವುದು. ನಾನು ಸೋತ ದಿನದಿಂದ ಪಕ್ಷವನ್ನು ಸಂಘಟನೆಗೊಳಿಸುವಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದನ್ನು ಸ್ವಾಗತಿಸುತ್ತೇನೆ. ರಾಜ್ಯಕ್ಕೆ ಒಳ್ಳೆಯದು ಮಾಡಿದರೆ ನಮ್ಮ ಸಹಕಾರ ಇರಲಿದೆ.

-ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ