ಇಂಧೋರ್(ಜು.29): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಕಣ್ ಸನ್ನೆ ಮಾಡಿದ ವಿಚಾರ ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಗರಂ ಆಗಿದ್ದಾರೆ.

ಇಂತಹ ಕ್ಷುಲ್ಲಕ ವಿಚಾರಗಳನ್ನು ಬಿಟ್ಟು, ರೈತರ ಆತ್ಮಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಳ ಬಗ್ಗೆ ಗಮನಹರಿಸುವಂತೆ ಜ್ಯೋತಿರಾದಿತ್ಯ ಸಿಂಧಿಯಾ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ರಾಹುಲ್ ಗಾಂಧಿ ಕಣ್ ಸನ್ನೆ ಬಗ್ಗೆ ವರದಿಗಾರರ ಪ್ರಶ್ನೆಗೆ ಗರಂ ಆದ ಸಿಂಧಿಯಾ, ಕಣ್ಣು ಹೊಡೆದದ್ದು ಒಂದು ದೊಡ್ಡ ವಿಚಾರವೇ? ನೀವು ಜೀವನದಲ್ಲಿ ಯಾವತ್ತೂ ಕಣ್ಣೆ ಹೊಡೆದಿಲ್ಲವೇ? ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.

ದೇಶದಲ್ಲಿ ರೈತರ ಆತ್ಮಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದಾಳಿ,  ನಿರುದ್ಯೋಗ, ಮುಂತಾದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಸಿಂಧಿಯಾ ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ, ದೇಶವನ್ನು ಕಾಡುತ್ತಿರುವ ಸಮಸ್ಯೆ ಕುರಿತು ಗಮನಹರಿಸುವುದನ್ನು ಬಿಟ್ಟು, ಕಣ್ ಸನ್ನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಎಂದು ಸಿಂಧಿಯಾ ಖೇದ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಂಧಿಯಾ, ಇತ್ತೀಚಿಗೆ ಭತ್ತ ಮತ್ತು ಇತರೆ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿರುವುದು ಕೇವಲ ಚುನಾವಣಾ ಗಿಮಿಕ್ ಎಂದು ಹರಿಹಾಯ್ದರು.