ನವದೆಹಲಿ [ಜು.03] :  ರಾಜ್ಯ ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಈ ಹಿಂದೆಯೇ ಅಪಸ್ವರ ಎತ್ತಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮತ್ತೊಮ್ಮೆ ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿದ್ದಾರೆ. ರಾಜ್ಯದಲ್ಲಿ ಅರಾಜಕತೆಯಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ ಇಬ್ಬರೂ ಮೈತ್ರಿ ಆಶಯವನ್ನು ಕಾಪಾಡುವಲ್ಲಿ ವಿಫರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಸರ್ಕಾರ ಬಿಜೆಪಿ ಬೀಳಿಸುವುದಲ್ಲ, ನಾವೇ ಬೀಳಲು ಸಿದ್ಧರಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅನ್ನುವುದು ಪ್ರಯೋಗವಾಗಿದ್ದು, ಅದನ್ನು ನಿಭಾಯಿಸುವುದು ರಾಜಕೀಯ ಚತುರತೆಯಾಗಿದೆ. ಈ ಪ್ರಯೋಗ ಯಶಸ್ವಿ ಮಾಡಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಯತ್ನ ಮಾಡ್ತಿಲ್ಲ. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಬ್ಬರೂ ವಿಫಲ ಆಗಿದ್ದಾರೆ ಎಂದು ಅನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಈ ರಾಜ್ಯದ ಸಮಗ್ರ ಅಭಿವೃದ್ಧಿ, ಜನರ ಕಷ್ಟಸಂಕಷ್ಟಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಸರ್ಕಾರದಲ್ಲಿ ಯಾರೂ ಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಸರ್ಕಾರದ ಬಗೆಗಿನ ಒಲವು ಕಡಿಮೆಯಾಗಿದೆ. ಇವತ್ತು ಕರ್ನಾಟಕ ರಾಜ್ಯ ರಾಜಕಾರಣ ಅರಾಜಕತೆಯ ದಿಕ್ಕಿನಲ್ಲಿ ಹೋಗುತ್ತಿದ್ದು, ಈ ಬೆಳವಣಿಗೆ ಮನಸ್ಸಿಗೆ ಬಹಳ ನೋವುಂಟು ಮಾಡುತ್ತಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರದಲ್ಲಿನ ನಾಯಕರು ತಮ್ಮ ಶಾಸಕರ ಸಮಸ್ಯೆಗಳನ್ನು ಪರಿಹರಿಸುವ ಮನಸ್ಥಿತಿಯಿಲ್ಲ. ಹೀಗಾಗಿ ಬಿಜೆಪಿ ಅವರು ಸರ್ಕಾರ ಬೀಳಿಸುವುದಲ್ಲ, ನಾವೇ ಬೀಳಲು ಸಿದ್ಧರಾಗಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಯೋಗ ವಿಫಲ: ರಾಜ್ಯದ ಜನರು ಅಸ್ಪಷ್ಟಜನಾದೇಶ ನೀಡಿದ್ದರಿಂದ ಪ್ರಾಂತೀಯ ಪಕ್ಷವಾದ ಜೆಡಿಎಸ್‌ ಮತ್ತು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಸಮನ್ವಯದಿಂದ ಸರ್ಕಾರ ರಚಿಸಲಾಯಿತು. ಇದು ಒಂದು ಪ್ರಯೋಗ. ಆದರೆ ಆ ಪ್ರಯೋಗ ವಿಫಲ ಆಗ್ತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಎಲ್ಲೋ ಒಂದು ಕಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮನ್ವಯದಲ್ಲಿ ಬೆತ್ತಲಾಗುತ್ತಿರುವ ಸನ್ನಿವೇಶ ನಿರ್ಮಾಣ ಆಗುತ್ತಿದೆ. ಬೀಳಿಸಲೂ ಜನ ಇದ್ದಾರೆ. ಬೀಳಲೂ ಜನ ಇದ್ದಾರೆ. ಇದರ ನಡುವೆ ರಾಷ್ಟ್ರರಾಜಕಾರಣದಲ್ಲಿ ನಾವು ಅಧೋಗತಿಗೆ ಹೋಗುತ್ತಿದ್ದೇವೇನೋ ಎಂದು ಅನ್ನಿಸುತ್ತಿದೆ. ಒಬ್ಬರು ನನಿಗ್ಯಾಕೆ ಅನ್ನುತ್ತಾರೆ, ಬಿಜೆಪಿಯವರು ನನಿಗೆ ಬೇಕು ಅನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದರು.

ಇದೇವೇಳೆ ಸಿದ್ದರಾಮಯ್ಯಗೆ ನನ್ನನ್ನು ಸಮನ್ವಯ ಸಮಿತಿಯಲ್ಲಿ ಸೇರಿಸಲು ಇಷ್ಟವಿಲ್ಲ. ಅವರು ವೈಯಕ್ತಿಕ ಸೇಡನ್ನು ರಾಜ್ಯದ ಅಭಿವೃದ್ಧಿಗೆ ಬೆರೆಸಿರೋದು ಸರಿಯಲ್ಲ ಎಂದು ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಹೇಳಿ ಹೋಗುವೆ: ದೆಹಲಿ ಭೇಟಿಯ ಸಂದರ್ಭದಲ್ಲಿ ವಿಶ್ವನಾಥ್‌ ಬಿಜೆಪಿ ಸಂಸದರಾದ ಶ್ರೀನಿವಾಸ ಪ್ರಸಾದ್‌, ಜಿ.ಎಸ್‌.ಬಸವರಾಜು, ಬಿ.ವೈ.ರಾಘವೇಂದ್ರ, ಸಿದ್ದೇಶ್‌, ಪ್ರಭಾಕರ ಕೋರೆ, ಪಕ್ಷೇತರ ಸದಸ್ಯೆ ಸುಮಲತಾ, ಕಾಂಗ್ರೆಸ್‌ ಸಂಸದರಾದ ಡಿ.ಕೆ.ಸುರೇಶ್‌, ಕೆ.ಸಿ.ರಾಮಮೂರ್ತಿ, ಜಿ.ಸಿ.ಚಂದ್ರಶೇಖರ್‌ ಅವರನ್ನು ಭೇಟಿಯಾದರು. ಈ ಕುರಿತಾಗಿ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಈ ಭೇಟಿಗೆ ಯಾವುದೇ ಅರ್ಥ ಕಲ್ಪಿಸಬಾರದು. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ. ನಾನು ಬಿಜೆಪಿ ಸಂಸದರನ್ನು ಭೇಟಿ ಮಾಡಿದ ತಕ್ಷಣ, ಶುಭಾಶಯ ಮಾಡಿಕೊಂಡ ಕೂಡಲೇ ಬಿಜೆಪಿ ಸೇರಿದಂತಲ್ಲ. ನಾನು ಜೆಡಿಎಸ್‌ ಶಾಸಕ. ಒಂದು ವೇಳೆ ನಾನು ಬಿಜೆಪಿಗೆ ಹೋಗುವುದಾದಲ್ಲಿ ನಿಮ್ಮೆಲ್ಲರ ಮೂಲಕ, ನಿಮಗೆ ತಿಳಿಸಿ, ಜನರಿಗೆ ತಿಳಿಸಿ ಹೋಗುತ್ತೇನೆಯೇ ಹೊರತು, ಸುಮ್ಮಸುಮ್ಮನೆ ಓಡಿ ಹೋಗುವುದಕ್ಕಾಗುವುದಿಲ್ಲ ಎಂದು ವಿಶ್ವನಾಥ್‌ ಸ್ಪಷ್ಟಪಡಿಸಿದರು.

ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಮುನ್ನ ದೇವಸ್ಥಾನಕ್ಕೆ ಹೋಗುವುದು ರೂಢಿ. ಮಂಗಳವಾರ ಅಮಾವಾಸ್ಯೆ ಗ್ರಹಣ ಇತ್ತು. ಹಾಗಾಗಿ ಗುವಾಹಟಿಯ ಕಾಮಾಕ್ಯ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದ್ದೆ ಎಂದು ಹೇಳಿದರು.