ಕೆಂಪಯ್ಯಗೆ ಟಾಂಗ್ ಕೊಟ್ಟ ಸಿಎಂ ಎಚ್.ಡಿ. ಕುಮಾರಸ್ವಾಮಿ

H D Kumaraswamy Targets Kempayya
Highlights

ಗೃಹ ಇಲಾಖೆ ಕಾರ್ಯವೈಖರಿಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ. ಜತೆಗೆ ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ರೌಡಿಗಳನ್ನು ನಿರ್ಭೀತಿಯಿಂದ ಮಟ್ಟಹಾಕಿ ಎಂದು ಪೊಲೀಸ್‌ ಇಲಾಖೆಗೆ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರು[ಜೂ.01]: ಗೃಹ ಇಲಾಖೆಗೆ ಸಲಹೆಗಾರರು ಬೇಕಿಲ್ಲ. ಇಲಾಖೆಯ ಅಧಿಕಾರಿಗಳೇ ಸಮರ್ಥರಿದ್ದು, ಯಾವುದೇ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.  ಹೀಗೆ ಹೇಳುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಹಿಂದಿನ ಸರ್ಕಾರದಲ್ಲಿ ಗೃಹ ಇಲಾಖೆಗೆ ಸಲಹೆಗಾರರಾಗಿದ್ದ ಕೆಂಪಯ್ಯ ಅವರಂತಹ ಅಧಿಕಾರಿಗಳ ಸೇವೆ ಈ ಬಾರಿ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಗೃಹ ಇಲಾಖೆ ಕಾರ್ಯವೈಖರಿಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ. ಜತೆಗೆ ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ರೌಡಿಗಳನ್ನು ನಿರ್ಭೀತಿಯಿಂದ ಮಟ್ಟಹಾಕಿ ಎಂದು ಪೊಲೀಸ್‌ ಇಲಾಖೆಗೆ ಅವರು ಸೂಚನೆ ನೀಡಿದ್ದಾರೆ.ವಿಧಾನಸೌಧದಲ್ಲಿ ಗೃಹ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸುದೀರ್ಘ ಸಭೆ ನಡೆಸಿದ ಅವರು, ಪೊಲೀಸ್‌ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ದಕ್ಷತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡುವುದಾಗಿ ಹೇಳಿದರು.

ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಲಿದೆ. ಹೀಗಾಗಿ ಯಾರೂ ಅಭದ್ರತೆಯಿಂದ ಕೆಲಸ ಮಾಡುವ ಅಗತ್ಯವಿಲ್ಲ. ಯಾರಿಗೂ ಅಂಜದಂತೆ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು. ರಾಜ್ಯದಲ್ಲಿ ನೂತನ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಗುಪ್ತಚರ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗ ಸೂಕ್ತವಾಗಿ ಕೆಲಸ ಮಾಡಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೂ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಮಕ್ಕಳ ಕಳ್ಳರ ವದಂತಿ ಬಗ್ಗೆ ಚರ್ಚೆ:
ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿಗಳ ಬಗ್ಗೆ ಸೂಕ್ತ ಗಮನ ಕೊಡಿ. ಹತ್ತು ದಿನಗಳ ಮೊದಲಿನಿಂದಲೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದ್ದರೂ ಗೃಹ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿಯೇ ಜನರು ಭಯಭೀತರಾಗುವ ವಾತಾವರಣ ನಿರ್ಮಾಣಗೊಂಡು ಅಮಾಯಕರು ಜನರ ಆಕ್ರೋಶಕ್ಕೆ ಬಲಿಯಾಗುವಂತಾಯಿತು. ಹೀಗಾಗಿ ಇಂತಹ ಸೂಕ್ಷ್ಮ ವಿಚಾರಗಳಿಗೆ ಬಗ್ಗೆ ಗಮನ ನೀಡಿ ಎಂದು ಸೂಚಿಸಿದರು ಎಂದು ತಿಳಿದು ಬಂದಿದೆ.
ಪೊಲೀಸ್‌ ಮಹಾ ನಿರ್ದೇಶಕರಾದ ನೀಲಮಣಿ ಎನ್‌. ರಾಜು, ಡಿಜಿಪಿಗಳಾದ ಎಂ.ಎನ್‌. ರೆಡ್ಡಿ, ಎ.ಎಂ. ಪ್ರಸಾದ್‌, ಪಿ.ಕೆ. ಗರ್ಗ್‌, ಎಡಿಜಿಪಿಗಳಾದ ರವೀಂದ್ರನಾಥ್‌, ಆರ್‌.ಪಿ. ಶರ್ಮಾ, ಎನ್‌.ಎಸ್‌. ಮೇಘರಿಕ್‌, ಕಮಲ್‌ಪಂಥ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

loader