ನವದೆಹಲಿ[ಅ.11]: ಲಖನೌ- ದೆಹಲಿ ನಡುವಿನ ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು ಖಾಸಗೀಕರಣಗೊಳಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು 150 ರೈಲುಗಳು ಹಾಗೂ 50 ರೈಲು ನಿಲ್ದಾಣಗಳನ್ನು ಖಾಸಗಿ ವಶಕ್ಕೆ ಒಪ್ಪಿಸಲು ಸಿದ್ಧತೆ ಆರಂಭಿಸಿದೆ. ಇದರ ನೀಲನಕ್ಷೆ ಸಿದ್ಧಪಡಿಸುವ ಉದ್ದೇಶದಿಂದ ರೈಲ್ವೆ ಮಂಡಳಿಯು ಕಾರ್ಯಪಡೆಯೊಂದನ್ನು ರಚಿಸಿದೆ.

ರೈಲ್ವೆ ಮಂಡಳಿ ರಚಿಸಿರುವ ಉನ್ನತಾಧಿಕಾರ ಸಮಿತಿಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಯಾದವ್‌, ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರಲ್ಲದೆ, ಆರ್ಥಿಕ ಸಚಿವಾಲಯ, ವಸತಿ ಸಚಿವಾಲಯ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳೂ ಇರಲಿದ್ದಾರೆ.

ಖಾಸಗಿ ತೇಜಸ್‌ ರೈಲು ವಿಳಂಬವಾದ್ರೆ ಗಂಟೆಗೆ 100 ಪರಿಹಾರ ಸಿಗುತ್ತೆ!

ಕಾರ್ಯಪಡೆ ರಚನೆಗೂ ಮುನ್ನ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದ ಅಮಿತಾಭ್‌ ಕಾಂತ್‌ ಅವರು ‘400 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಈವರೆಗೆ ಕೆಲವೇ ಕೆಲವು ನಿಲ್ದಾಣಗಳನ್ನು ಆ ಮಟ್ಟಕ್ಕೆ ಏರಿಸಲಾಗಿದೆ. ಹೀಗಾಗಿ ಇದನ್ನು ತ್ವರಿತಗೊಳಿಸುವ ಉದ್ದೇಶದಿಂದ 50 ನಿಲ್ದಾಣಗಳು ಹಾಗೂ 150 ರೈಲುಗಳ ಕಾರ್ಯಾಚರಣೆಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸಲು ನಿರ್ಧರಿಸಲಾಗಿದೆ. 6 ವಿಮಾನ ನಿಲ್ದಾಣಗಳನ್ನು ಕೂಡ ಇತ್ತೀಚೆಗೆ ಖಾಸಗಿಗೆ ವಹಿಸಲಾಗಿತ್ತು. ಅದರ ಅನುಭವದ ಆಧಾರದಲ್ಲಿ ಈಗ ಖಾಸಗೀಕರಣ ನೀತಿ ರೂಪಿಸಲಾಗುವುದು’ ಎಂದು ಹೇಳಿದ್ದರು.

ಕಳೆದ ಅಕ್ಟೋಬರ್‌ 4ರಂದು ಲಖನೌ-ದಿಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ ಆರಂಭವಾಗಿದ್ದು, ಇದನ್ನು ಖಾಸಗಿ ಕಂಪನಿಯು ನಿರ್ವಹಿಸುತ್ತಿದೆ. ಇದು ಇಂತಹ ಮೊದಲ ಖಾಸಗಿ ರೈಲಾಗಿದೆ.

ಇತ್ತೀಚೆಗಷ್ಟೇ ರೈಲ್ವೆ ಮಂಡಳಿಯು, ದೇಶದಲ್ಲಿನ ಎಲ್ಲಾ ರೈಲ್ವೆ ವಲಯಗಳಿಗೆ ಸುತ್ತೋಲೆಯೊಂದನ್ನು ರವಾನಿಸಿದ್ದು, ಅದರಲ್ಲಿ ನಿಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರೈಲು ಮಾರ್ಗಗಳನ್ನು ಎಂಬುದರ ಬಗ್ಗೆ ಮಾಹಿತಿ ರವಾನಿಸಿ ಎಂದು ಸೂಚಿಸಿತ್ತು.

'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'