ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್‌ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೀದರ್–ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಜೂನ್ 1ರಿಂದ ಪುನರಾರಂಭಗೊಳ್ಳಲಿದ್ದು, ನೂತನ ವೇಳಾಪಟ್ಟಿ ಯನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಹೊರಡಲಿರುವ ವಿಮಾನ 7:45ಕ್ಕೆ ಬೀದರ್ ತಲುಪಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಮಾನ ವೇಳಾಪಟ್ಟಿ ಇಲ್ಲಿದೆ
ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಸ್ಟಾರ್ ಏರ್ ವತಿಯಿಂದ ಆರಂಭವಾಗುತ್ತಿರುವ ಈ ವಿಮಾನ ಸೇವೆಯ ವೇಳಾಪಟ್ಟಿಯಂತೆ ಬೀದರ್‌ನಿಂದ ಬೆಳಿಗ್ಗೆ 8:15ಕ್ಕೆ ಹೊರಡುವ ವಿಮಾನ 9:30ಕ್ಕೆ ಬೆಂಗಳೂರು ತಲುಪಲಿದ್ದು, ಕೇವಲ 1 ಗಂಟೆ 15 ನಿಮಿಷಗಳಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಈ ವಿಮಾನ ಸೇವೆ ಪುನರಾರಂಭಗೊಳ್ಳಲು ನಿರಂತರ ಪ್ರಯತ್ನ ಮಾಡಲಾಗಿದ್ದು, ಇದರ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತೆ ವಾಯು ಸಂಪರ್ಕ ಸೌಲಭ್ಯ ಲಭ್ಯವಾಗುತ್ತಿದೆ. ಇದರಿಂದ ಜಿಲ್ಲೆಯ ವ್ಯಾಪಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಪ್ರಗತಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಕೆಕೆಆರ್‌ಡಿಬಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ್ ಖಂಡ್ರೆ, ಸಚಿವರಾದ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರವೂ ಶ್ಲಾಘನೀಯ ವಾಗಿದೆ ಎಂದು ಅವರು ತಿಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಜನರ ಸೌಲಭ್ಯಕ್ಕಾಗಿ ಸರ್ಕಾರ ಇನ್ನಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.


