ಕಾಂಗ್ರೆಸ್ ಪಕ್ಷದ 6 ಸಂಸದರನ್ನು ಅಮಾನತು ಮಾಡಿರುವ ಲೋಕಸಭಾ ಸ್ಪೀಕರ್ ಕ್ರಮದ ವಿರುದ್ಧ ಪ್ರತಿಪಕ್ಷಗಳು ಇಂದು ಪ್ರತಿಭಟನೆ ನಡೆಸಿವೆ. ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಮಾತನಾಡಿ, ಸಂಸದರ ಧ್ವನಿಯನ್ನು ಹತ್ತಿಕ್ಕುವುದು ಈ ಸರ್ಕಾರದ ಪ್ರವೃತಿಯಾಗಿಬಿಟ್ಟಿದೆ. ಈ ಹಿಂದೆ ಮಾಯಾವತಿಯವರಿಗೆ ಮಾತನಾಡಲು ಅವಕಾಶ ನೀಡಿಲ್ಲ, ಈಗ ಪ್ರತಿಪಕ್ಷದ ಇತರ ಸಂಸದರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಆಸ್ಪದವಿಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನವದೆಹಲಿ: ಕಾಂಗ್ರೆಸ್ ಪಕ್ಷದ 6 ಸಂಸದರನ್ನು ಅಮಾನತು ಮಾಡಿರುವ ಲೋಕಸಭಾ ಸ್ಪೀಕರ್ ಕ್ರಮದ ವಿರುದ್ಧ ಪ್ರತಿಪಕ್ಷಗಳು ಇಂದು ಪ್ರತಿಭಟನೆ ನಡೆಸಿವೆ.

Add Asianetnews Kannada as a Preferred SourcegooglePreferred

ಸಂಸತ್ತು ಕಟ್ಟಡದ ಹೊರಗಡೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇನ್ನಿತರ ಸಂಸದರು ಭಾಗವಹಿಸಿದ್ದರು.

ಪ್ರತಿಭಟನಾನಿರತ ಸಂಸದರನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಮೀರಾ ಕುಮಾರ್ ಸ್ಪೀಕರ್ ಆಗಿದ್ದಾಗ ಇಂತಹ ಗದ್ದಲಗಳು ನಡೆದಿವೆ, ಆದರೆ ಅವರು ಯಾವತ್ತೂ ಸಂಯಮ ಕಳೆದುಕೊಂಡು ಈ ರೀತಿ ವರ್ತಿಸಿರಲಿಲ್ಲವೆಂದು ಹೇಳಿದರು.

ಇನ್ನೋರ್ವ ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಮಾತನಾಡಿ, ಸಂಸದರ ಧ್ವನಿಯನ್ನು ಹತ್ತಿಕ್ಕುವುದು ಈ ಸರ್ಕಾರದ ಪ್ರವೃತಿಯಾಗಿಬಿಟ್ಟಿದೆ. ಈ ಹಿಂದೆ ಮಾಯಾವತಿಯವರಿಗೆ ಮಾತನಾಡಲು ಅವಕಾಶ ನೀಡಿಲ್ಲ, ಈಗ ಪ್ರತಿಪಕ್ಷದ ಇತರ ಸಂಸದರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಆಸ್ಪದವಿಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲೋಕಸಭೆಯ ಘನತೆಗೆ ಚ್ಯುತಿ ಬರುವಂತೆ ವರ್ತಿಸಿದ ಆರೋಪದ ಮೇಲೆ 6 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನಿನ್ನೆ ಅಮಾನತು ಮಾಡಿದ್ದರು.

ಗೌರವ್ ಗೊಗೋಯ್, ಕೆ.ಸುರೇಶ್, ಅಧೀರ್ ರಾಜನ್ ಚೌಧರಿ, ರಂಜಿತ್ ರಂಜನ್, ಸುಷ್ಮಿತಾ ದೇವ್ ಮತ್ತು ಎಂಕೆ ರಾಘವನ್ ಅವರನ್ನು 5 ದಿನಗಳ ಕಾಲ ಸಸ್ಪೆಂಡ್ ಮಾಡಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಆದೇಶ ಹೊರಡಿಸಿದ್ದರು.

ಲೋಕಸಭೆಯಲ್ಲಿ ಗೋಮಾರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣದ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷವು ಬೋಫೋರ್ಸ್ ಹಗರಣವನ್ನು ಪ್ರತ್ಯಸ್ತ್ರವಾಗಿ ಬಳಸಿದೆ ಎಂದು ಆರೋಪಿಸಿ ಆ ಆರು ಸಂಸದರು ಸದನದ ಬಾವಿಗೆ ನುಗ್ಗಿ ಕಡತಗಳನ್ನು ಹರಿದು ಸ್ಪೀಕರ್ ಅವರತ್ತ ಎಸೆದು ಗದ್ದಲ ನಡೆಸಿದ್ದರು.