ಬೆಂಗಳೂರು, [ಆ.26]: ಬಿ.ಎಸ್. ಯಡಿಯೂರಪ್ಪ ಸಂಪುಟದ ನೂತನ 17 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಇದರ ಜತೆಗೆ ಬಿಜೆಪಿ ಹೈಕಮಾಂಡ್ ನಿರ್ದೇಶನದಂತೆ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. 

ಮೂರು ಹೊಸ ಮುಖಗಳಿಗೆ ಡಿಸಿಎಂ ಹುದ್ದೆ ನೀಡಿರುವುದು ಹಿರಿಯ ಬಿಜೆಪಿ ಶಾಸಕರಿಗೆ ನಿರಾಸೆಯಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬರೀ ಬೃಹತ್ ಕೈಗಾರಿಕೆ ಖಾತೆ ನೀಡಿ ಸಮಾಧಾನ ಮಾಡಲಾಗಿದೆ. 

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ಇನ್ನು ಮಾಜಿ ಡಿಸಿಎಂಗಳಾದ ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ಅವರಿಗೂ ಸಹ ಕೇವಲ ಸಚಿವ ಸ್ಥಾನ ನೀಡಿಲಾಗಿದೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲುಗೂ ಸಹ ಡಿಸಿಎಂ ಹುದ್ದೆ ಸಿಗಲಿಲ್ಲ. ಇದರಿಂದ ಇವರೆಲ್ಲರಿಗೂ ಇರುಸುಮುರುಸು ಉಂಟಾಗಿದೆ.

ಹೈಕಮಾಂಡ್ ಕೃಪಾಕಟಾಕ್ಷದಿಂದ ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಲಕ್ಷ್ಮಣ್ ಸವದಿಗೆ ಡಿಸಿಎಂ ಪಟ್ಟ ಒಲಿದಿದೆ. ಪ್ರಮುಖವಾಗಿ ಅಂದ್ರೆ ಲಕ್ಷ್ಮಣ ಸವದಿ 2018ರ ಚುನಾವಣೆಯಲ್ಲಿ ಸೋತರೂ ಸಹ ಅವರಿಗೆ ಡಿಸಿಎಂ ಹುದ್ದೆ ಒಲಿದಿರುವುದು ಭಾರೀ ಕುತೂಹಲ ಮೂಡಿಸಿದೆ.

ಈ ಮೂಲಕ ಎಷ್ಟೇ ದೊಡ್ಡವರಿದ್ದರೂ ಪಕ್ಷದ ಮುಂದೆ ಎಲ್ಲರೂ ಸಣ್ಣವರು ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದರಿಂದ ಯಡಿಯೂರಪ್ಪಗೂ ಹೈಕಮಾಂಡ್ ಮೂಗುದಾರ ಹಾಕಿದೆ.