ಫೇಸ್‌ಬುಕ್‌ನಲ್ಲಿ ತಾನು ನಡೆಸುತ್ತಿರುವ ಮತದಾರರ ಜಾಗೃತಿ ಆಂದೋಲನ ಹಾಗೂ ಚುನಾವಣಾ ಸಂಬಂಧಿ ಪ್ರಚಾರ ಚಟುವಟಿಕೆಗಳನ್ನು ಮುಂದುವರಿಸಬೇಕೇ ಅಥವಾ ನಿಲ್ಲಿಸಬೇಕೇ ಎಂಬ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮರುಚಿಂತನೆ ಆರಂಭಿಸಿದೆ.

ನವದೆಹಲಿ (ಮಾ.24): ಫೇಸ್‌ಬುಕ್‌ನಲ್ಲಿ ತಾನು ನಡೆಸುತ್ತಿರುವ ಮತದಾರರ ಜಾಗೃತಿ ಆಂದೋಲನ ಹಾಗೂ ಚುನಾವಣಾ ಸಂಬಂಧಿ ಪ್ರಚಾರ ಚಟುವಟಿಕೆಗಳನ್ನು ಮುಂದುವರಿಸಬೇಕೇ ಅಥವಾ ನಿಲ್ಲಿಸಬೇಕೇ ಎಂಬ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮರುಚಿಂತನೆ ಆರಂಭಿಸಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿಯ ದುರ್ಬಳಕೆ ಹಗರಣದಲ್ಲಿ ಫೇಸ್‌ಬುಕ್‌ ಸಿಲುಕಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಜನಾಭಿಪ್ರಾಯ ರೂಪಿಸುವ ಪ್ರಕ್ರಿಯೆಯಲ್ಲಿ ವಾಮಮಾರ್ಗದ ಮೂಲಕ ಮಾಡುವ ಯಾವುದೇ ಕೆಲಸಗಳ ಬಗ್ಗೆ ನಮಗೆ ಕಳವಳವಿದೆ. ಈ ಬಗ್ಗೆ ಆಯೋಗದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು, ಯುವಕರು ಮತಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಉತ್ತೇಜಿಸಲು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಚುನಾವಣಾ ಆಯೋಗವು ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಂದೋಲನ ನಡೆಸುತ್ತ ಬಂದಿದೆ.