ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್‌ನ ಹೆಲಿಕಾಪ್ಟರ್ ಅನ್ನು ಧ್ವಂಸಗೊಳಿಸಿದೆ ಎಂದು ಹೇಳಲಾದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಆದರೆ, ಇದು ನಿಜವಾದ ಹೆಲಿಕಾಪ್ಟರ್ ಅಲ್ಲ, ಬದಲಿಗೆ ನೆಲದ ಮೇಲೆ ಬಿಡಿಸಿದ ನಕಲಿ ಚಿತ್ರ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ನವದೆಹಲಿ (ಮಾ.7): ಇರಾನ್‌ನ ಪಡೆಗಳು ನೆಲದ ಮೇಲೆ ಹೆಲಿಕಾಪ್ಟರ್‌ನಂತೆ ಕಾಣುವ 'ನಕಲಿ ಚಿತ್ರ'ಗಳನ್ನು (Decoys) ಬಿಡಿಸುವ ಮೂಲಕ ಇಸ್ರೇಲ್ ಸೇನೆಯನ್ನು ದಾರಿ ತಪ್ಪಿಸಿವೆಯೇ? ಇಸ್ರೇಲ್ ರಕ್ಷಣಾ ಪಡೆ (IDF) ಹಂಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ವಿವಾದದ ಕುರಿತು ಐಡಿಎಫ್ ಮೌನ ವಹಿಸಿರುವುದು ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದೆ.
ಮಾರ್ಚ್ 4ರಂದು ಇಸ್ರೇಲ್ ರಕ್ಷಣಾ ಪಡೆಯ ಅಧಿಕೃತ 'X' ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಇರಾನ್‌ನ 'Mi-17' ಹೆಲಿಕಾಪ್ಟರ್ ಅನ್ನು ಕ್ಷಿಪಣಿ ದಾಳಿಯ ಮೂಲಕ ಧ್ವಂಸಗೊಳಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, "ನೀವು ಹೊಡೆದು ಉರುಳಿಸಿದ್ದು ಅಸಲಿ ಹೆಲಿಕಾಪ್ಟರ್ ಅಲ್ಲ, ಬದಲಾಗಿ ನೆಲದ ಮೇಲೆ ಬಿಡಿಸಲಾಗಿದ್ದ ಚಿತ್ರವನ್ನು!" ಎಂದು ಟೀಕೆ ಮಾಡಿದ್ದಾರೆ.
ನೆಟ್ಟಿಗರ ವ್ಯಂಗ್ಯ ಮತ್ತು ಟೀಕೆ
"ಇದು ಅಸಲಿ ಹೆಲಿಕಾಪ್ಟರ್ ಆಗಿದ್ದರೆ ಬಾಂಬ್ ಬಿದ್ದ ತಕ್ಷಣ ಅದರ ರೆಕ್ಕೆಗಳು ಗಾಳಿಯಲ್ಲಿ ಹಾರಬೇಕಿತ್ತು. ಆದರೆ ಇಲ್ಲಿ ಚಿತ್ರ ಮೊದಲಿದ್ದಂತೆಯೇ ಇದೆ. ನೀವು ಒಂದು ಪೇಂಟಿಂಗ್ ಮೇಲೆ ಬಾಂಬ್ ಹಾಕಿದ್ದೀರಿ," ಎಂದು ಒಬ್ಬ ಯೂಸರ್ ಈ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. "ಇಸ್ರೇಲ್ ಮಕ್ಕಳಿರುವ ಶಾಲೆಗಳ ಮೇಲೆ ಮತ್ತು ನೆಲದ ಮೇಲೆ ಪೇಂಟ್ ಮಾಡಿದ ಚಿತ್ರಗಳ ಮೇಲೆ ಬಾಂಬ್ ಹಾಕುವುದರಲ್ಲಿ ಎತ್ತಿದ ಕೈ," ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಕೋಟಿ ಕೋಟಿ ನಷ್ಟದ ಲೆಕ್ಕಾಚಾರ!
ಒಂದು ವೇಳೆ ಇಸ್ರೇಲ್ ಹೊಡೆದದ್ದು ಕೇವಲ ಚಿತ್ರಕ್ಕೇ ಆಗಿದ್ದರೆ, ಅದು ಇಸ್ರೇಲ್‌ಗೆ ಭಾರಿ ನಷ್ಟ. ಏಕೆಂದರೆ, ಇಸ್ರೇಲ್‌ನ ಒಂದು ಕ್ಷಿಪಣಿಯ ಬೆಲೆ ಸರಾಸರಿ $3 ಮಿಲಿಯನ್ (ಸುಮಾರು ₹25 ಕೋಟಿ) ಇರುತ್ತದೆ. ಆದರೆ ಇರಾನ್ ಇಂತಹ ನಕಲಿ ಚಿತ್ರಗಳನ್ನು ಬಿಡಿಸಲು ಖರ್ಚು ಮಾಡುವುದು ಕೇವಲ ಕೆಲವು ಡಾಲರ್‌ಗಳನ್ನು ಮಾತ್ರ!
ನಿಜವಾಗಿಯೂ ನಡೆದದ್ದೇನು?
ಕೆಲವರು ಇದನ್ನು ಪೇಂಟಿಂಗ್ ಎಂದು ಟೀಕಿಸುತ್ತಿದ್ದರೆ, ಇನ್ನು ಕೆಲವು ತಜ್ಞರು ವಿಡಿಯೋದಲ್ಲಿ ಕಂಡುಬರುವ ಹೊಗೆಯ ಚಲನೆಯನ್ನು ಆಧರಿಸಿ ಇದು ಅಸಲಿ ಮಿಲಿಟರಿ ಆಸ್ತಿ ಎಂದು ವಾದ ಮಾಡಿದ್ದಾರೆ. ವಿಡಿಯೋದ ಕೆಳಗಿರುವ 'ಕಮ್ಯೂನಿಟಿ ನೋಟ್' ಪ್ರಕಾರ, "ವಿಡಿಯೋದಲ್ಲಿ ಕಂಡುಬರುವ ಥರ್ಮಲ್ ಸಿಗ್ನೇಚರ್ (ಶಾಖದ ಗುರುತು) ಮತ್ತು ನೆರಳುಗಳನ್ನು ಕೇವಲ ಪೇಂಟಿಂಗ್ ಮೂಲಕ ಸೃಷ್ಟಿಸಲು ಸಾಧ್ಯವಿಲ್ಲ," ಎಂದು ಹೇಳಲಾಗಿದೆ.
ಯುದ್ಧದ ಸದ್ಯದ ಸ್ಥಿತಿ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿ ಒಂದು ವಾರ ಕಳೆದಿದೆ. ಶುಕ್ರವಾರ ಇಸ್ರೇಲ್ ಪಡೆಗಳು ಇರಾನ್ ಮತ್ತು ಲೆಬನಾನ್ ರಾಜಧಾನಿಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿವೆ. ಇತ್ತ ಅಮೆರಿಕ ಕೂಡ ಸಮುದ್ರದಲ್ಲಿ ಇರಾನ್‌ನ ಡ್ರೋನ್ ಕ್ಯಾರಿಯರ್ ಹಡಗಿನ ಮೇಲೆ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ಆರಂಭಿಸಿದ್ದು, ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ಸಂಘರ್ಷ ಮತ್ತಷ್ಟು ಭೀಕರವಾಗಲಿದೆ ಎಂದು ಎಚ್ಚರಿಸಿದ್ದಾರೆ.


