ಹುಬ್ಬಳ್ಳಿ(ಅ.19): ಅದೊಂದು ನಿಗೂಢ ಕೊಲೆ ಪ್ರಕರಣ. ಆ ಕೊಲೆ ನಡೆದು ಒಂದೂವರೆ ವರ್ಷ ಆಗಿತ್ತು. ಹುಬ್ಬಳ್ಳಿ ಪೊಲೀಸರಿಗಂತೂ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಕೊನೆಗೂ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಆ ಆರೋಪಿ ಅಷ್ಟು ಪ್ಲಾನ್‌ ಮಾಡಿಕೊಂಡು ಹತ್ಯೆ ಮಾಡಲು ಸಹಾಯವಾಗಿದ್ದು ಒಂದು ಸಿನಿಮಾ. ಆ ಸಿನಿಮಾ ಯಾವುದು? ಅವನು ಯಾವ ರೀತಿ ಪ್ಲಾನ್ ಮಾಡಿ ಕೊಲೆ ಮಾಡಿದ? ಇಲ್ಲಿದೆ ವಿವರ.

ಇಲ್ಲಿ ಪ್ರಿಯಕರ ಮದುವೆಯಾಗು ಅಂದಿದಕ್ಕೆ ಪ್ರೀತಿಸಿದವಳನ್ನೇ ಕೊಂದು ಹೂತಿಟ್ಟಿದ್ದ ಪಾಪಿ. ಆತ ಕೊಲೆ ಮಾಡಿ ಪಾರಾಗಲು ರೂಪಿಸಿಕೊಂಡಿದ್ದ ಪ್ಲಾನ್ ಕೇಳಿ ಪೊಲೀಸರೇ ಒಂದು ಕ್ಷಣ ನಿಬ್ಬೆರಗಾಗಿದ್ದರು. ಈ ಮುದ್ದು ಮುಖದ ಹುಡುಗಿ ಅರ್ಪಿತಾ ಹಾಗೂ ಅರುಣ್ ಪಾಟೀಲ್ ವಿಜಯಪುರ ಜಿಲ್ಲೆಯವರುವ. ಕಾಲೇಜಿನ ದಿನಗಳಲ್ಲಿ ಅರಳಿದ ಪ್ರೀತಿ ಮದುವೆ ಹಂತಕ್ಕೂ ಹೋಗಿತ್ತು. ಪ್ರೀತಿಸಿದ ಹುಡುಗನನ್ನು ಬಿಟ್ಟಿರಲಾಗದೇ ಮದುವೆಯಾಗುವಂತೆ ಅರುಣ್‌'ನನ್ನು ಅರ್ಪಿತಾ ಒತ್ತಾಯಿಸಿದ್ದ. ಇದರಿಂದ ಪಾರಾಗಲು ಯತ್ನಿಸಿದಾಗಲೇ ನೆನಪಿಗೆ ಬಂದಿದ್ದೇ ರವಿಚಂದ್ರನ್ ನಟನೆಯ ದೃಶ್ಯ ಚಿತ್ರ.

ಅರುಣ್ ಕೂಡ ಇದೇ ರೀತಿ ಪ್ಲಾನ್ ಮಾಡಿಕೊಂಡು ಧಾರವಾಡಕ್ಕೆ ಬಂದಿದ್ದ. ಬಳಿಕ ಅರ್ಪಿತಾಳನ್ನು ಮಾತನಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ. ಬಳಿಕ ರಸ್ತೆ ಪಕ್ಕದಲ್ಲಿದ ಈ ಹೊಲದಲ್ಲಿ ಹೂತಿಟ್ಟು ಪರಾರಿಯಾಗಿದ್ದ. ಈ ಸಂಬಂಧ ಪ್ರಿಯಕರ ಅರುಣ್‌‌'ನನ್ನು ಕಸಬಾ ಪೊಲೀಸ್ರು ವಿಚಾರಣೆಗೆ ಒಳಪಡಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊಲೆ ನಡೆದ ದಿನ ತಾನು ಆ ಸ್ಥಳದಲ್ಲೇ ಇರಲಿಲ್ಲ, ಬೆಂಗಳೂರಿನಲ್ಲಿದ್ದೆ  ಎನ್ನುವ ರೀತಿ ಸಾಕ್ಷ್ಯ ಸೃಷ್ಟಿಸಿದ್ದ. ಪದೇ ಪದೇ ವಿಚಾರಣೆ ನಡೆಸಿ ಪೊಲೀಸ್ ಸ್ಟೈಲ್‌'ನಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಅಂದ ಹಾಗೆ ಈತ ಎಂಥಾ ಚಾಲಾಕಿ ಎಂದರೆ. ಪೊಲೀಸರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕು ಎನ್ನುವುದನ್ನು ಈ ಮೊದಲೇ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದಾನಂತೆ. ಒಟ್ಟಿನಲ್ಲಿ ಕನ್ನಡದ ದೃಶ್ಯ ಸಿನಿಮಾ ನೋಡಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಪ್ರೇಯಸಿಯ ಕೊಲೆ ಮಾಡಿದ್ದ ಪ್ರಿಯಕರ ಅರುಣ ಪಾಟೀಲ್  ಕೊನೆಗೂ ಜೈಲುಪಾಲಾಗಿದ್ದಾನೆ.