ಬೆಂಗಳೂರು(ಜ.31): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಲೋಹಿಯಾವಾದಿ ಜಾರ್ಜ್ ಫರ್ನಾಂಡೀಸ್ ಈಗ ನಮ್ಮೊಂದಿಗೆ ಇಲ್ಲ. ಆದರೆ ಅವರ ರಾಜಕೀಯ, ಸಾಮಾಜಿಕ ಜೀವನದ ಹೆಜ್ಜೆ ಗುರುತುಗಳು ನಮ್ಮನ್ನು ಭವಿಷ್ಯದೆಡೆಗೆ ಕೊಂಡೊಯ್ಯಲಿವೆ ಎಂಬುದಂತೂ ಸತ್ಯ.

ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಜಾರ್ಜ್ ಅವರ ವ್ಯಕ್ತಿತ್ವ ಭಾರತದ ರಾಜಕೀಯ ಇತಿಹಾಸದಲ್ಲಿ ದಾಖಲಾಗಲಿದೆ. ಅದರಂತೆ ಅವರ ಸರಳ ಜೀವನ, ನೇರ ನಡೆ ನುಡಿ ಭವಿಷ್ಯದ ರಾಜಕೀಯ ನಾಯಕರಿಗೆ ದಾರಿದೀಪ ಕೂಡ ಹೌದು.

ಅದರಂತೆ ಜಾರ್ಜ್ ರಾಜಕೀಯ ಬದ್ಧತೆ ಕುರಿತು ಹತ್ತು ಹಲವು ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಅದರಲ್ಲಿ 1998ರಲ್ಲಿ ಲೋಕಸಭೆಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ದ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡೀಸ್ ಮಾಡಿದ ಐತಿಹಾಸಿಕ ಭಾಷಣ ಅತ್ಯಂತ ಪ್ರಮುಖವಾದದ್ದು.

ಅದು 1998, ಲೋಕಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿತ್ತು. ಮತ್ತು ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿ ಅಟಲ್ ಬಿಹಾರ ವಾಜಪೇಯಿ ಪ್ರಧಾನಿಯಾಗಿದ್ದರು.

ಆದರೆ ಅಟಲ್ ಸರ್ಕಾರವನ್ನು ಉರುಳಿಸಲು ಮುಂದಾದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್, ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇದಕ್ಕೆ ಪ್ರಮುಖ ಎಡಪಕ್ಷ ಸಿಪಿಎಂ ಕೂಡ ಬೆಂಬಲ ನೀಡಿತ್ತು.

ಈ ವೇಳೆ ಸರ್ಕಾರದ ಪರ ಮಾತನಾಡಲು ಎದ್ದು ನಿಂತ ಜಾರ್ಜ್ ಫರ್ನಾಂಡೀಸ್ ಭಾಷಣವನ್ನು ಇಡೀ ಸದನ ಕಿವಿಗೊಟ್ಟು ಕೇಳಿಸಿಕೊಂಡಿತ್ತು. ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್ ಮತ್ತು ಸಿಪಿಎಂ ವಿರುದ್ಧ ಹರಿಹಾಯ್ದಿದ್ದ ಜಾರ್ಜ್, ಅಂದೇ ಭವಿಷ್ಯದ ರಾಜಕೀಯದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಏನಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಜಾರ್ಜ್ ಫರ್ನಾಂಡೀಸ್ 1998ರಲ್ಲಿ ಲೋಕಸಭೆಯಲ್ಲಿ ಮಾಡಿದ ಭಾಷಣ ಇಂತಿದೆ:

ಕೈಯಲ್ಲಿ ಪುಸ್ತಕವೊಂದನ್ನು ಹಿಡಿದಿದ್ದ ಜಾರ್ಜ್ ಫರ್ನಾಂಡೀಸ್ ಮಾತು ಆರಂಭಿಸಿದರು..''ಮಾನ್ಯ ಸಭಾಧ್ಯಕ್ಷರೇ, ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಅಡಿಪಾಯ ಹಾಕಿದ ಪಕ್ಷ ಕಾಂಗ್ರೆಸ್. ಬ್ರಿಟಿಷರು ಭಾರತ ಬಿಟ್ಟು ಹೋದ ಮೇಲೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಕಳೆದ 50 ವರ್ಷಗಳಲ್ಲಿ ಭ್ರಷ್ಟಾಚಾರದ ಹೊಸ ಭಾಷ್ಯ ಬರೆದಿದೆ. ಕಾಂಗ್ರೆಸ್ ನಾಯಕರು ಭಾಗಿಯಾದ ಹಗರಣಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ಹವಾಲಾ, ಭೋಫೋರ್ಸ್, ಮುಂದ್ರಾ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇಂದಿನ ಸದನದ ಕಲಾಪವೇ ಮುಗಿದು ಹೋಗುತ್ತದೆ. ಕಾಂಗ್ರೆಸ್ ಪಕ್ಷ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಪರಿ ಎಂತವರನ್ನೂ ದಂಗು ಬಡಿಸುತ್ತದೆ''.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಸಿಪಿಎಂ, ಜಾರ್ಜ್ ಸುಮ್ಮನೇ ಆರೋಪ ಮಾಡುವಂತಿಲ್ಲ ಸೂಕ್ತ ದಾಖಲೆಗಳನ್ನು ಸದನದ ಮುಂದೆ ಇಡಬೇಕು ಎಂದು ಆಗ್ರಹಿಸಿದವು. ಇದಕ್ಕೆ ಮುಗುಳ್ನಗುತ್ತಾ ಉತ್ತರಿಸಿದ ಜಾರ್ಜ್, ಇರಿ ನನ್ನ ಮಾತು ಮುಗಿಸುತ್ತಿದ್ದಂತೇ ದಾಖಲೆಯ ಮೂಲ ಒದಗಿಸುತ್ತೇನೆ ಎಂದು ಹೇಳಿದರು.

ಮಾತು ಮುಂದುವರೆಸಿದ ಜಾರ್ಜ್, ''ಜಾತ್ಯಾತೀತತೆಯ ಸೋಗು ಹಾಕಿರುವ ಕಾಂಗ್ರೆಸ್, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಹಲವು ಕೋಮು ಗಲಭೆಗಳಲ್ಲಿ ನೇರವಾಗಿ ಭಾಗಿಯಾಗಿರುವುದು ಬಹಿರಂಗ ರಹಸ್ಯ. ಕಾಂಗ್ರೆಸ್ ಗೂಂಡಾಗಳು ಸಮಾಜದಲ್ಲಿ ಅಶಾಂತಿ ಪಸರಿಸಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 3000 ಸಿಖ್‌ರ ಮಾರಣಹೋಮ ನಡೆಯುತ್ತಿದ್ದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಕಣ್ಮುಚ್ಚಿ ಕುಳಿತಿದ್ದರು''.

ಮತ್ತೆ ಎದ್ದು ನಿಂತ ಕಾಂಗ್ರೆಸ್ ಮತ್ತು ಸಿಪಿಎಂ ಸದಸ್ಯರು ಸಾಕ್ಷ್ಯಧಾರ ಒದಗಿಸಿ ಎಂದು ಮೇಜು ಕುಟ್ಟಿ ಒತ್ತಾಯ ಮಾಡತೊಡಗಿದರು. ಮತ್ತೆ ನಕ್ಕ ಜಾರ್ಜ್, ಇನ್ನೆರೆಡು ನಿಮಿಷದಲ್ಲಿ ಭಾಷಣ ಮುಗಿಸಲಿದ್ದೇನೆ, ತಾಳ್ಮೆಯಿಂದಿರಿ ಎಂದು ಮನವಿ ಮಾಡಿದರು.

ಮತ್ತೆ ಪುಸ್ತಕದಲ್ಲಿನ ಅಂಶಗಳನ್ನು ಉಲ್ಲೇಖಿಸತೊಡಗಿದ ಜಾರ್ಜ್, ''ಮಾನ್ಯ ಸಭಾಧ್ಯಕ್ಷರೇ, ಕೆಟ್ಟ ಆಡಳಿತ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಯಾವುದೇ ದೇಶ ಅಭಿವೃದ್ಧಿ ಸಾಧಿಸಿಲ್ಲ ಎಂಬುದು ಇತಿಹಾಸದಿಂದ ನಮಗೆ ತಿಳಿಯುತ್ತದೆ. ಆದರೆ ಕಾಂಗ್ರೆಸ್ ಇವೆರೆಡನ್ನೂ ಪೋಷಿಸಿದ್ದು ಈ ದೇಶದ ದುರಂತ. ಆದರೆ ದೇಶದ ಒಳಿತಿಗಾಗಿ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಅಲ್ಲದೇ ಈ ಪಕ್ಷವನ್ನು ದೇಶದಿಂದಲೇ ಅಳಿಸಿ ಬಿಡುವುದು ಇಂದಿನ ತುರ್ತು ಅಗತ್ಯವಾಗಿದೆ''.

ಜಾರ್ಜ್ ಭಾಷಣವನ್ನು ಕೇಳಿಸಿಕೊಳ್ಳಲಾಗದ ಕಾಂಗ್ರೆಸ್ ಮತ್ತು ಸಿಪಿಎಂ ಸದಸ್ಯರು, ಸಾಕು ಮಾಡಿ ಜಾರ್ಜ್ ಇಂತಹ ಆಧಾರರಹಿತ ಆರೋಪ ಮಾಡುತ್ತಾ ಕಾಲಹರಣ ಮಾಡಬೇಡಿ, ತಾಕತ್ತಿದ್ದರೆ ಸಾಕ್ಷ್ಯಾಧಾರಗಳನ್ನು ಒದಗಿಸಿ ಇಲ್ಲವೇ ಭಾಷಣ ನಿಲ್ಲಿಸಿ ಎಂದು ಒಕ್ಕೊರಲಿನಿಂದ ಕೂಗತೊಡಗಿದರು.

ಒಂದು ಕ್ಷಣ ಮೌನಕ್ಕೆ ಜಾರಿದ ಜಾರ್ಜ್ ಆಯ್ತು ನಿಮ್ಮೆಲ್ಲರ ಒತ್ತಾಯಕ್ಕೆ ಮಣಿದು ನಾನೀಗ ಈ ಎಲ್ಲಾ ಆರೋಪಗಳ ದಾಖಲೆಗಳನ್ನು ಒದಗಿಸುತ್ತೇನೆ ಎಂದು ಹೇಳಿದರು. ಅದರಂತೆ ಜಾರ್ಜ್ ಹೇಳಿದ್ದು, ''ಮಾನ್ಯ ಸಭಾಧ್ಯಕ್ಷರೇ, ಈ ಎಲ್ಲಾ ಆರೋಪಗಳ ದಾಖಲೆ ನನಗೆ ಸಿಕ್ಕಿದ್ದು, ಸಿಪಿಎಂ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ. ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಹೊರತಂದಿದ್ದ ಸಿಪಿಎಂ ಪಕ್ಷ, ಕಾಂಗ್ರೆಸ್ ವಿರುದ್ಧ ಈ ಎಲ್ಲ ಆರೋಪಗಳನ್ನು ಮಾಡುತ್ತಾ ಆ ಪಕ್ಷವನ್ನು ಸೋಲಿಸುವಂತೆ ಜನತೆಗೆ ಕರೆ ನೀಡಿತ್ತು''.

ಜಾರ್ಜ್ ಇಷ್ಟು ಹೇಳಿದ್ದೇ ತಡ, ಇಡೀ ಸದನದಲ್ಲಿ ನೀರವ ಮೌನ ಆವರಿಸಿತು. ಆಕ್ರೋಶಭರಿತರಾಗಿ ಅರಚುತ್ತಿದ್ದ ಕಾಂಗ್ರೆಸ್, ಸಿಪಿಎಂ ಸದಸ್ಯರು 'ಏ ಕ್ಯಾ ಹೋ ಗಯಾ ಭಾಯೀ' ಅಂತಾ ತಲೆ ಮೇಲೆ ಕೈಹೊತ್ತು ಕುಳಿತರು. ಕಾಂಗ್ರೆಸ್ ಸದಸ್ಯರು ಸಿಪಿಎಂ ಸದಸ್ಯರತ್ತ ಸಿಟ್ಟಿನಿಂದ ನೋಡಿದರೆ, ನಾವೇನು ಮಾಡೋಣ ಅಂತಾ ಸಿಪಿಎಂ ಸದಸ್ಯರು ತಲೆ ತಗ್ಗಿಸಿ ಕುಳಿತರು.

ವಿಪಕ್ಷಗಳತ್ತ ಮತ್ತೆ ನೋಡಿದ ಜಾರ್ಜ್. "ಯಾಕೆ ಎಲ್ಲರೂ ಸುಮ್ಮನಾದಿರಿ?. ನೀವೇ ತಾನೇ ಆರೋಪಗಳ ದಾಖಲೆ ಒದಗಿಸಿ ಎಂದು ಕೇಳುತ್ತಿದ್ದಿದ್ದು?. ಇದೀಗ ದಾಖಲೆ ಒದಗಿಸಿದರೆ ಮೌನಕ್ಕೆ ಶರಣಾಗಿದ್ದೀರಲ್ಲಾ?'' ಎಂದು ಜಾರ್ಜ್ ಕುಹುಕವಾಡಿದರು. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೆ ಅತ್ಯಂತ ಗಾಂಭೀರ್ಯದಿಂದ ಮಾತು ಮುಂದುವರೆಸಿದ ಜಾರ್ಜ್, ಸಿಪಿಎಂ ಮತ್ತು ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಜಾರ್ಜ್ ಹೇಳಿದ್ದಿಷ್ಟು.

"ನಾಚಿಕೆಯಾಗಬೇಕು ನಿಮಗೆ. ಸಿಪಿಎಂ ಸದಸ್ಯರೇ ಒಂದೋ ನೀವು ಈ ಪ್ರಣಾಳಿಕೆಯಲ್ಲಿ ಏನಿದೆ ಎಂದು ಓದಿಲ್ಲ, ಅಥವಾ ಈ ಪ್ರಣಾಳಿಕೆಗೆ ನೀವು ಬದ್ಧರಾಗಿಲ್ಲ. ನಿಮ್ಮ ನಿಮ್ಮ ರಾಜಕೀಯ ಲಾಭಕ್ಕಾಗಿ, ಸರ್ಕಾರವನ್ನು ಬೀಳಿಸುವ ದುರುದ್ದೇಶದಿಂದ ಇಂದು ಒಂದಾಗಿದ್ದೀರಿ. ಇದೇ ಏನು ನಿಮ್ಮ ಸಿದ್ದಾಂತ?. ಇದೆ ಏನು ನಿಮ್ಮ ಬದ್ದತೆ?. ಇನ್ನಾದರೂ ಬದಲಾಗಿ. ಇಲ್ಲದಿದ್ದರೆ ಭಾರತದ ಭವಿಷ್ಯದ ರಾಜಕೀಯ ಭೂಪಟದಿಂದ ನೀವು ಹೇಗೆ ಕಣ್ಮರೆಯಾಗುತ್ತೀರಿ ಎಂಬುದು ನಮಗೆ ಬಿಡಿ, ಖುದ್ದು ನಿಮಗೇ ತಿಳಿಯುವುದಿಲ್ಲ''.....

2014ರ ಲೋಕಸಭೆ ಚುನಾವಣೆ ಫಲಿತಾಂಶಧ ಜಾರ್ಜ್ ಫರ್ನಾಂಡೀಸ್ ಅವರ 1998ರ ಭಾಷಣಕ್ಕೆ ಅಧಿಕೃತ ಮುದ್ರೆ ಒತ್ತಿತ್ತು. ದ್ಯಾಟ್ಸ್ ಜಾರ್ಜ್ ಫರ್ನಾಂಡೀಸ್.

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಮೋದಿ ಸೇರಿದಂತೆ ಗಣ್ಯರ ಸಂತಾಪ!

ಮಂಗಳೂರು, ಮುಂಬೈ, ದೆಹಲಿ: ಜಾರ್ಜ್ ಹೆಜ್ಜೆಯ ಜಾಡು ಹುಡುಕುತ್ತಾ!

ಸಾಮಾನ್ಯರಂತಿದ್ದ ಅಸಾಮಾನ್ಯ ಮೋಡಿಗಾರ ಜಾರ್ಜ್!: ಇದು ಆಪ್ತ ಗೆಳೆಯನ ಮಾತು