ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನರಾಗಿದ್ದಾರೆ.
ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ಬೆಳಗ್ಗೆ 7 ಗಂಟೆಗೆ ದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಇತ್ತೀಚೆಗೆ H1N1 ಸೋಂಕಿಗೆ ತುತ್ತಾಗಿದ್ದು, ಮಂಗಳವಾರ ತಮ್ಮ 88ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
"
ಕರ್ನಾಟಕದ ಮಂಗಳೂರು ಮೂಲದವರಾದ ಫರ್ನಾಂಡಿಸ್ ಅವರು ಜನತಾ ಪರಿವಾರದ ಮಹಾನಾಯಕರಾಗಿ ಗುರುತಿಸಿಕೊಂಡಿದ್ದು, ವಾಜಪೇಯಿ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಹಿನ್ನೆಲೆ : 1930 ಜೂನ್ 3ರಂದು ಮಂಗಳೂರಿನಲ್ಲಿ ಜನಿಸಿದ ಜಾರ್ಜ್ ಫರ್ನಾಂಡಿಸ್, ತಮ್ಮ 19ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಸಮಾಜವಾದಿ ನಾಯಕ ಲೋಹಿಯಾ ಪರಿಚಯದಿಂದ ಹೋರಾಟ ಆರಂಭ ಮಾಡಿದ್ದರು.
ಸರಳ ಜೀವಿ ಹಾಗೂ ಅಪ್ರತಿಮ ಹೋರಾಟಗಾರರಾಗಿದ್ದ ಅವರು ಕಾರ್ಮಿಕ ಚಳವಳಿಯಲ್ಲಿ ಅಗ್ರಗಣ್ಯ ನಾಯಕರಾಗಿ ರೂಪುಗೊಂಡು, ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕರನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಬಳಿಕ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಪಡೆದು, ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೈಗಾರಿಕೆ ಸಚಿವರಾದರು.
ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆ ಆರಂಭ ಮಾಡಿದ್ದು, ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿದ್ದಾಗ ಬಿಜೆಪಿ ಜೊತೆ ಕೈಜೋಡಿಸಿದರು.
1998ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾರ್ಜ್ ರಕ್ಷಣಾ ಸಚಿವರಾದರು.
ಅಪ್ರತಿಮ ಹೋರಾಟಗಾರ, ಸರಳ ಜೀವಿ,ದೇಶಭಕ್ತ ಹಾಗೂ ಹಿರಿಯ ರಾಜಕೀಯ ಮುಖಂಡನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
