Asianet Suvarna News Asianet Suvarna News

ಸಾಮಾನ್ಯರಂತಿದ್ದ ಅಸಾಮಾನ್ಯ ಮೋಡಿಗಾರ ಜಾರ್ಜ್!: ಇದು ಆಪ್ತ ಗೆಳೆಯನ ಮಾತು

77ರ ನಂತರ ಒಂದು ವೇಳೆ ಜಾರ್ಜ್ ಜನತಾಪಕ್ಷದಲ್ಲೇ ಇದ್ದು ತನ್ನ ಕಾರ್ಯಕ್ಷೇತ್ರವನ್ನು ಕರ್ನಾಟಕದ ಮೂಲಕ ವಿಸ್ತರಿಸಿದ್ದರೆ, 1983ರಲ್ಲಿ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು.

george fernandes a common person with unusual charm
Author
New Delhi, First Published Jan 31, 2019, 10:46 AM IST

-ಶ್ರೀಪತಿ ರಾವ್‌[ಜಾರ್ಜ್ ಫರ್ನಾಂಡಿಸ್‌ ಅವರ ಆಪ್ತ]

ತುರ್ತು ಪರಿಸ್ಥಿತಿಯ ಬಂಧನದಿಂದ ಹೊರಬಂದ ನನ್ನಂತಹವರಿಗೆ ಕೇಂದ್ರದಲ್ಲಿ ಜನತಾ ಸರ್ಕಾರ ರಚನೆ ಅದರಲ್ಲೂ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್‌, ಮಧು ದಂಡವತೆ ಸಚಿವರಾದುದು ಹೊಸ ಹುರುಪು ಮೂಡಿಸಿತ್ತು. ಸರ್ಕಾರ ರಚನೆಯಾದ ಕೆಲವೇ ಸಮಯದಲ್ಲಿ ಅಂದರೆ ನನಗೆ ನೆನಪಿರುವಂತೆ ಏಪ್ರಿಲ್‌ 21, 1977ರಂದು ಜಾಜ್‌ರ್‍ ಶೇಷಾದ್ರಿಪುರದ ನೆಹರೂ ಪಾರ್ಕಿನಲ್ಲಿ ಮಧ್ಯಾಹ್ನ ಒಂದು ಘಂಟೆಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆಗ, ಶೇಷಾದ್ರಿಪುರ ಪೊಲೀಸ್‌ ಸ್ಟೇಷನ್ನಿನ ಹಿಂಭಾಗದ ನೆಹರೂ ಪಾರ್ಕ್ ಇಡೀ ಖಾಲಿ ಆಟದ ಮೈದಾನದಂತಿತ್ತು. ಪಶ್ಚಿಮಾಭಿಮುಖವಾಗಿ ಒಂದು ಸ್ಟೇಜ್‌ ಅಷ್ಟೆ. ತಲೆ ತಿರುಗುವ ಆ ಬಿಸಿಲಿನಲ್ಲೂ ಕಾಲಿಡಲು ಜಾಗವಿಲ್ಲದಂತೆ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಒಂದು ಘಂಟೆಗೂ ಮೊದಲೇ ಜಮಾಯಿಸಿದುದು ತುರ್ತುಪರಿಸ್ಥಿತಿಯ ವಿರುದ್ಧದ ಆಗಿನ ಜನರ ಮನಸ್ಥಿತಿ ಮತ್ತು ಜಾಜ್‌ರ್‍ ಜನಪ್ರಿಯತೆಯನ್ನು ತೋರುತ್ತಿತ್ತು.

ಮಂಗಳೂರು, ಮುಂಬೈ, ದೆಹಲಿ: ಜಾರ್ಜ್ ಹೆಜ್ಜೆಯ ಜಾಡು ಹುಡುಕುತ್ತಾ!

ಮೊರಾರ್ಜಿ ಪರ ಜಾರ್ಜ್ ಭಾಷಣ

ನಿರಂತರ ಒಳಜಗಳದಿಂದಾಗಿ ಕೇಂದ್ರ ಸರ್ಕಾರ ಪೂರ್ಣಾವಧಿ ಪೂರೈಸಲಾರದು ಎನ್ನುವುದು ನಿಧಾನವಾಗಿ ಸ್ಪಷ್ಟವಾಗುತ್ತಿತ್ತು. ಸಮಾಜವಾದಿ ಮುಖಂಡ ಮಧುಲಿಮಯೆ ಹಾಗೂ ಚೌಧುರಿ ಚರಣಸಿಂಗ್‌ ಜನತಾಪಕ್ಷದ ಕೆಲವು ಸದಸ್ಯರ ದ್ವಿಪಕ್ಷ ಸದಸ್ಯತ್ವದ ಬಗ್ಗೆ ತಕರಾರು ಎತ್ತಿ ಅವರನ್ನೆಲ್ಲಾ ಪಕ್ಷದಿಂದ ಹೊರಹಾಕುವಂತೆ, ಇಲ್ಲವೇ ಬೇರಾವುದೇ ಪಕ್ಷದ ಸದಸ್ಯತ್ವ ಹೊಂದಿಲ್ಲ ಎಂದು ಅವರಿಂದ ಪ್ರಮಾಣಪತ್ರ ಪಡೆಯುವಂತೆ ಪ್ರಧಾನಿ ಮೊರಾರ್ಜಿ ದೇಸಾಯಿ ಹಾಗೂ ಪಕ್ಷದ ಅಧ್ಯಕ್ಷರನ್ನು ಒತ್ತಾಯಿಸುತ್ತಲೇ ಇದ್ದರು. ಅವರೆಲ್ಲರ ಗುರಿ ಇದ್ದುದು ಜನಸಂಘದೊಂದಿಗೆ ಬಂದು ಸೇರಿಕೊಂಡ ಈಗಿನ ಬಿಜೆಪಿ ಬಗ್ಗೆ. ವಾಜಪೇಯಿ, ಅಡ್ವಾಣಿ ಸೇರಿದಂತೆ ಜನಸಂಘದ ಎಲ್ಲರೂ ಆರ್‌ಎಸ್‌ಎಸ್‌ ಸದಸ್ಯರಾಗಿರುವುದರಿಂದ ಅಲ್ಲಿ ರಾಜೀನಾಮೆ ನೀಡದೇ ಜನತಾಪಕ್ಷದ ಸದಸ್ಯರಾದರೆ ದ್ವಿಪಕ್ಷ ಸದಸ್ಯತ್ವ ಹೊಂದಿದಂತಾಗುತ್ತದೆನ್ನುವುದು ಅವರ ವಾದ. ಎಲ್ಲರಿಗೂ ಗೊತ್ತಿತ್ತು. ಇದೊಂದು ನೆಪ ಅಷ್ಟೇ, ಮೊರಾರ್ಜಿಯನ್ನು ವಿರೋಧಿಸಲು ಚರಣಸಿಂಗ್‌ ಈ ಅಸ್ತ್ರ ಕೈಗೆತ್ತಿಕೊಂಡಿದ್ದಾರೆ ಎಂದು. ಕೊನೆಗೆ ಮೊರಾರ್ಜಿ ದೇಸಾಯಿ ಜುಲೈ 1979ರಲ್ಲಿ ವಿಶ್ವಾಸಮತ ಯಾಚನೆಗೆ ಮುಂದಾಗಬೇಕಾಯಿತು.

ಈಗಿನಂತೆ ಆಗ ಮೊಬೈಲ…, ಟಿವಿ ಯಾವುದೂ ಇರಲಿಲ್ಲ. ಸುದ್ದಿ ಬೇಕೆಂದರೆ ಆಕಾಶವಾಣಿಗೆ ಕಿವಿಗೊಟ್ಟು ಕುಳಿತಿರಬೇಕು. ವಿಶ್ವಾಸಮತದ ಪರವಾಗಿ ಜಾರ್ಜ್ ಫರ್ನಾಂಡಿಸ್‌ ಸುಮಾರು ಒಂದೂವರೆ ಘಂಟೆಗಳ ಕಾಲ ಮಾತನಾಡಿದ್ದನ್ನು ಕೇಳಿಸಿಕೊಂಡವರೆಲ್ಲ ಮೈಮೇಲೆ ಆವೇಶ ಬಂದಂತೆ ಕುಣಿದಾಡಿದರು. ಅವರು ಅಷ್ಟುನಿಖರವಾಗಿ, ಅಂಕಿ ಅಂಶಗಳ ಸಹಿತ ಸರ್ಕಾರದ ಸಾಧನೆಗಳನ್ನು, ಹಿಂದಿನ ಸರ್ಕಾರದ ಲೋಪದೋಷಗಳನ್ನು ತೆರೆದಿಟ್ಟಿದ್ದರು. ಮಾರನೆಯ ದಿನ ಸುದ್ದಿಪತ್ರಿಕೆಗಳೆಲ್ಲ ಅವರ ಭಾಷಣವನ್ನೇ ಪ್ರಧಾನ ವರದಿಯನ್ನಾಗಿಸಿದ್ದವು.

ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಮೋದಿ ಸೇರಿದಂತೆ ಗಣ್ಯರ ಸಂತಾಪ!

ಒಂದೇ ದಿನದಲ್ಲಿ ತಿರುಗಿಬಿದ್ದರು

ಆಕಾಶವಾಣಿಯಲ್ಲಿ ಭಾಷಣ ಕೇಳಿದ ಆ ರಾತ್ರಿ ಮತ್ತು ಮಾರನೆಯ ದಿನ ಸಿಕ್ಕಸಿಕ್ಕವರ ಹತ್ತಿರ ಜಾರ್ಜನ್ನು ನಾನು ಹೊಗಳಿದ್ದೇ ಹೊಗಳಿದ್ದು. ಯಾರೊಬ್ಬರನ್ನೂ ಅಲ್ಲಿಯ ತನಕ ನಾನು ಹೊಗಳಿರಲಿಲ್ಲ. ಯಾರನ್ನೂ ಆ ನಂತರ ಹೊಗಳುವ ಪ್ರಯತ್ನ, ಧೈರ್ಯ ಮಾಡಲಿಲ್ಲ. ಏಕೆಂದರೆ, ಅಷ್ಟುಬಲಯುತವಾಗಿ ಸರ್ಕಾರವನ್ನು ಬೆಂಬಲಿಸಿದ್ದ ಜಾರ್ಜ್ ಮಾರನೆಯ ದಿನವೇ ಮೊರಾರ್ಜಿ ವಿರುದ್ಧವಾಗಿ ಬಿಟ್ಟರು. ಮೊರಾರ್ಜಿ ರಾಜೀನಾಮೆ ನೀಡಿದಾಗ ಜನತಾಪಕ್ಷ ಜಗಜೀವನರಾಂ ಅವರನ್ನು ತನ್ನ ಸಂಸದೀಯ ನಾಯಕ ಎಂದು ಘೋಷಿಸಿದರೂ ಕಾಂಗ್ರೆಸ್‌ ಬೆಂಬಲಿತ ಚೌಧುರಿ ಚರಣ್‌ಸಿಂಗ್‌ ಬಣಕ್ಕೆ ಸರ್ಕಾರ ರಚಿಸುವಂತೆ ರಾಷತ್ರಪತಿ ನೀಲಂ ಸಂಜೀವ ರೆಡ್ಡಿ ಆಹ್ವಾನಿಸಿದರು. ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಜಗಜೀವನರಾಂ ಹೇಳಿದ್ದರೂ ಚರಣ್‌ ಸಿಂಗ್‌ ಪ್ರಧಾನಿಯಾದ ಕೆಲವೇ ದಿನಗಳಲ್ಲಿ, ಅವರು ಪಾರ್ಲಿಮೆಂಟ್‌ ಪ್ರವೇಶಿಸುವುದರೊಳಗೆ ಕಾಂಗ್ರೆಸ್‌ ಬೆಂಬಲ ವಾಪಸು ಪಡೆದುದರಿಂದ, ರಾಜೀನಾಮೆ ನೀಡಬೇಕಾಯಿತು.

ನೀವ್ಯಾಕೆ ಹೀಗೆ ಮಾಡಿಬಿಟ್ಟಿರಿ?

ದೇಶದ ಯುವಜನರ ಆಕಾಂಕ್ಷೆಗಳ ಪ್ರತೀಕವಾಗಿದ್ದ ಕೇಂದ್ರ ಸರ್ಕಾರ ಬಿದ್ದು ಹೋದಾಗ ಸಹಜವಾಗಿಯೇ ನೋವು ಮಡುಗಟ್ಟಿತ್ತು. ಅದರಲ್ಲೂ ಜಾರ್ಜ್ ಅಷ್ಟುಸುಲಭವಾಗಿ ವಿರೋಧಿಗಳ ಜೊತೆ ಸೇರಿದುದು ನುಂಗಲಾರದೇ ಹೋಗಿತ್ತು. ಅವರು ದೆಹಲಿಯಲ್ಲಿ, ಇಲ್ಲಿ ನಮ್ಮಂತಹವರು ಅವರ ಪರ ನಿರಂತರ ಬ್ಯಾಟ್‌ ಬೀಸುತ್ತಿದ್ದವರು. ಆದರೆ, ಜಾಜ್‌ರ್‍ ನಿನ್ನೆ ಮೊರಾರ್ಜಿ ಸರ್ಕಾರವನ್ನು ಹೊಗಳಿ, ಇಂದು ವಿರೋಧಿಗಳ ಜೊತೆ ಕುಳಿತುಕೊಂಡದ್ದನ್ನು ಸಮರ್ಥಿಸಲು ನಮ್ಮಲ್ಲೇನೂ ಇರಲಿಲ್ಲ. ಕೇಳಿದವರೆದುರು ತಲೆತಗ್ಗಿಸುವ ಸರದಿ ನಮ್ಮದಾಗಿತ್ತು. 1980ರ ಚುನಾವಣೆಯ ಸಮಯದಲ್ಲಿ ಜಾರ್ಜ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಮೊದಲಿನ ಮೂರು ವರ್ಷಗಳ ಜನಸಂದಣಿ ಕರಗಿ ಹೋಗಿತ್ತು. ಯಥಾಪ್ರಕಾರ ಕೆಲವೇ ಕೆಲವರು. ಒಬ್ಬರೇ ಇದ್ದಾಗ ಜಾರ್ಜ್‌ಗೆ ಕೇಳಿದೆ. ನೀವ್ಯಾಕೆ ಹೀಗೆ ಮಾಡಿಬಿಟ್ಟಿರಿ?

ಏನ್ಮಾಡೋದು, ಮಧುಲಿಮೆಯೆ ಒತ್ತಾಯ ಮಾಡಿದರು. ಅವರ ಮಾತು ಕೇಳಬೇಕಲ್ವಾ? ನಾನು ಒಪ್ಪಲಾಗದ ಕಾರಣ ಅದು. ಆದರೂ ಕೇಳಿದೆ. ನೀವೇನೋ ನಮ್ಮ ಹತ್ತಿರ ಹೇಳಿಬಿಡ್ತೀರಿ. ಆದರೆ, ಎಲ್ಲರ ಹತ್ತಿರ ಜಗಳ ಆಡಿ ನಿಮ್ಮನ್ನು ಅಷ್ಟು ಸಪೋರ್ಟ್‌ ಮಾಡಿದ ನಾವು ಹೇಗೆ ಅದನ್ನೇ ಹೇಳಿ ಒಪ್ಪಿಸಲಿಕ್ಕೆ ಆಗ್ತದೆ..? ಜಾರ್ಜ್ ಉತ್ತರ. ಮೊದಲಿನಂತೆ ಅಷ್ಟೊಂದು ಮನಒಲಿಸಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೇರಿತ್ತು.

ಜಾರ್ಜ್ ಹೋರಾಟ ಯಾರ ವಿರುದ್ಧ?

ಮತ್ತೆ ಹದಿನೈದು ವರ್ಷಗಳ ಕಾಲ ರಾಜಕೀಯದ ಚರ್ಚೆ ಇಲ್ಲದೇ ಭೇಟಿಯಾಗುತ್ತಿದ್ದರೂ, ನಂತರ ಜಾರ್ಜ್ ಸಮತಾ ಪಕ್ಷವನ್ನು ಸಂಯುಕ್ತ ಜನತಾದಳದೊಂದಿಗೆ ವಿಲೀನಗೊಳಿಸಿದ ನಂತರ ಅದರ ಅಧ್ಯಕ್ಷರಾಗಿ ಬೆಂಗಳೂರಿನ ಸಭೆಯೊಂದರಲ್ಲಿ ಇದ್ದಾಗ ಹೇಳಿದೆ. 77ರ ನಂತರ ಒಂದು ವೇಳೆ ಜಾರ್ಜ್ ಜನತಾಪಕ್ಷದಲ್ಲೇ ಇದ್ದು ತನ್ನ ಕಾರ್ಯಕ್ಷೇತ್ರವನ್ನು ಕರ್ನಾಟಕದ ಮೂಲಕ ವಿಸ್ತರಿಸಿದ್ದಿದ್ದರೆ, 1983ರಲ್ಲಿ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು. ಮಧುಲಿಮೆಯೆ ಮುಂತಾದವರ ಜೊತೆ ಸೇರಿ ದ್ವಿಪಕ್ಷ ಸದಸ್ಯತ್ವದ ವಿರುದ್ಧ ದನಿ ಎತ್ತಿದ ಜಾಜ್‌ರ್‍ ನಂತರ ಬಿಜೆಪಿ ಜೊತೆ ಸೇರಿ ರಕ್ಷಣಾ ಸಚಿವರಾದುದು ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಆದರೆ, ತನ್ನ ಹೋರಾಟ ಯಾರ ವಿರುದ್ಧ ಎನ್ನುವುದನ್ನು ಅರಿತಿದ್ದ ಜಾಜ್‌ರ್‍, ವಾಜಪೇಯಿ, ಅಡ್ವಾಣಿಯ ಅಕ್ಕರೆಯ ಜೊತೆಗಾರರಾಗಿ ಕೊನೆತನಕ ಉಳಿದುಬಿಟ್ಟರು.

ಕಳೆದ ಹತ್ತು ವರ್ಷಗಳಿಂದ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ ಇದೀಗ ಎಲ್ಲವನ್ನೂ ತ್ಯಜಿಸಿ ಹೋಗಿದ್ದಾರೆ. ಕೆಲವರಿಗೆ ಅವರೊಂದು ಒಗಟು. ಕುರ್ತಾ ಪೈಜಾಮದೊಳಗೊಬ್ಬ ಸಾಮಾನ್ಯರಂತಿರುವ ಅಸಾಮಾನ್ಯ ಮೋಡಿಗಾರ ಹತ್ತಿರವಿದ್ದವರಿಗೆ.

ಅತ್ಯುತ್ತಮ ಸ್ನೇಹಿತನಿಗೊಂದು ಅಂತಿಮ ನಮನ.

Follow Us:
Download App:
  • android
  • ios