Asianet Suvarna News Asianet Suvarna News

ಗೌರಿ ಹಂತಕ ಬಾಯಿಬಿಟ್ಟ ಸ್ಫೋಟಕ ಸತ್ಯವೇನು..?

ಗೌರಿಗೆ ಗುಂಡಿಕ್ಕಿದ್ದ ಆರೋಪದಡಿ ಸೆರೆಯಾಗಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್‌ ವಾಗ್ಮೋರೆ ಎಸ್‌ಐಟಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿ ಹಿಂದೂ ಧರ್ಮದ ಉಳಿವಿಗಾಗಿ ನಾನು ಅವರನ್ನು ಕೊಂದೆ ಎಂದಿದ್ದಾನೆ.

Gauri Lankesh Murderer Parashuram Waghmare Reaction

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು : ನನಗೆ ಗೌರಿ ಲಂಕೇಶ್‌ ಅವರು ಯಾರು ಎಂಬುದೇ ಗೊತ್ತಿರಲಿಲ್ಲ. ಹತ್ಯೆಗೂ ನಾಲ್ಕೈದು ದಿನಗಳ ಮುನ್ನ ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಗೌರಿ ಹೊಂದಿದ್ದ ಅಭಿಪ್ರಾಯ ತಿಳಿದುಕೊಂಡೆ. ಧರ್ಮದ ಉಳಿವಿಗೆ ನಾನು ಅವರನ್ನು ಕೊಂದಿದ್ದಕ್ಕೆ ಈಗ ಪಶ್ಚಾತ್ತಾಪವಾಗುತ್ತಿದೆ...!

ಇದು ಗೌರಿಗೆ ಗುಂಡಿಕ್ಕಿದ್ದ ಆರೋಪದಡಿ ಸೆರೆಯಾಗಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್‌ ವಾಗ್ಮೋರೆ ಎಸ್‌ಐಟಿ ಮುಂದೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ.

ಹಿಂದೂ ಧರ್ಮದ ಉಳಿವಿಗೆ ನಿನ್ನಿಂದ ಕೆಲಸವಾಗಬೇಕಿದೆ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ನನ್ನನ್ನು ಸಂಪರ್ಕಿಸಿದ್ದ. ಆತನ ಮಾತು ಕೇಳಿ ನಾನು ಗೌರಿ ಅವರನ್ನು ಹತ್ಯೆ ಮಾಡಿದೆ. ಆದರೆ, ಈಗ ಬಂಧಿತರಾಗಿರುವರ ಪೈಕಿ ನನ್ನನ್ನು ಹತ್ಯೆಗೆ ಸಜ್ಜುಗೊಳಿಸಿದ ವ್ಯಕ್ತಿ ಇಲ್ಲ ಎಂದು ಪರಶುರಾಮ್‌ ಸ್ಪಷ್ಟಪಡಿಸಿರುವುದಾಗಿ ಎಸ್‌ಐಟಿ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಪರಶುರಾಮ್‌ ಹೇಳಿದ್ದೇನು?

2017ರ ಆಗಸ್ಟ್‌ನಲ್ಲಿ ನನ್ನನ್ನು ಸಿಂದಗಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಭೇಟಿಯಾಗಿದ್ದ. ಆತ ಬಲಪಂಥೀಯ ವಿಚಾರಧಾರೆಯುಳ್ಳ ವ್ಯಕ್ತಿ. ನಮ್ಮ ಮೊದಲ ಭೇಟಿಯಲ್ಲೇ ನೀನು ಹಿಂದೂ ಧರ್ಮದ ಉಗ್ರ ಆರಾಧಕ ಎಂಬ ವಿಚಾರ ನನಗೆ ಗೊತ್ತಿದೆ. ಈ ಧರ್ಮದ ಉಳಿವಿಗೆ ಈಗ ನಿನ್ನಿಂದ ಮಹತ್ವದ ಕಾರ್ಯವೊಂದು ಆಗಬೇಕಿದೆ. ಆ ಕೆಲಸ ಮಾಡಲು ಧೈರ್ಯವಿದ್ದರೆ ಎಲ್ಲ ರೀತಿಯಲ್ಲೂ ನಿನ್ನನ್ನು ಅಣಿಗೊಳಿಸುತ್ತೇನೆ. ಪ್ರತಿ ಹಂತದಲ್ಲೂ ನಿನ್ನ ಬೆನ್ನಿಗೆ ನಿಂತು ಕಾಪಾಡುತ್ತೇನೆ ಎಂದು ಹೇಳಿದ್ದ.

ಈಗ ಬಂಧಿತರಾಗಿರುವ ಆರೋಪಿಗಳ ಪೈಕಿ ಶಿಕಾರಿಪುರದ ಕಪ್ಪನಹಳ್ಳಿಯ ಸುಜಿತ್‌ ಅಲಿಯಾಸ್‌ ಪ್ರವೀಣ್‌ ಹೊರತು ಬೇರೆ ಯಾರೂ ನನಗೆ ಪರಿಚಯಸ್ಥರಿಲ್ಲ. ನನ್ನನ್ನು ಭೇಟಿಯಾದಾತನ ಹೆಸರು ಹೇಳಿಕೊಂಡೇ ಒಬ್ಬಾತ ನನ್ನ ಬಳಿ ಬಂದಿದ್ದ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದ ಆ ವ್ಯಕ್ತಿ, ಹಿಂದುತ್ವದ ವಿರುದ್ಧ ಮಾತನಾಡುತ್ತಿರುವ ಗೌರಿ ಲಂಕೇಶ್‌ ಅವರನ್ನು ಹೊಡೆಯಬೇಕು. ನಿನ್ನಿಂದ ಆಗುವುದಾದರೆ ಯೋಚಿಸಿ ಎರಡು ದಿನಗಳಲ್ಲಿ ಹೇಳು. ಇಲ್ಲವಾದರೆ ಬೇರೆಯವರನ್ನು ಹುಡುಕಿಕೊಳ್ಳುತ್ತೇವೆ ಎಂದಿದ್ದ. ಮೊದಲಿನಿಂದಲೂ ಹಿಂದೂ ಪರ ಸಂಘಟನೆಗಳಲ್ಲಿ ತೊಡಗಿದ್ದ ನನಗೆ ಬಲಪಂಥೀಯ ಸಿದ್ಧಾಂತದ ವಿರೋಧಿಗಳ ಬಗ್ಗೆ ಅಸಹನೆ ಇತ್ತು. ಹಾಗಾಗಿ ಎರಡು ದಿನಗಳ ಬಳಿಕ ಅಪರಿಚಿತನಿಗೆ ನಾನು ಸಿದ್ಧ ಎಂದೆ.

ಆವರೆಗೆ ನನಗೆ ಗೌರಿ ಲಂಕೇಶ್‌ ಯಾರು ಎಂಬುದೇ ಗೊತ್ತಿರಲಿಲ್ಲ. ಅವರ ಪತ್ರಿಕೆ ಸಹ ಓದಿದವನಲ್ಲ. ಇದರಿಂದ ಗೌರಿ ಅವರು ಹಿಂದುತ್ವದ ಕುರಿತು ಏನು ಹೇಳಿದ್ದಾರೆ ಎಂದು ತಿಳಿದಿರಲಿಲ್ಲ. ಆ ಎರಡು ದಿನಗಳಲ್ಲಿ ಯ್ಯೂಟ್ಯೂಬ್‌, ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌ ಮೂಲಕ ಗೌರಿ ಅವರ ಸೈದ್ಧಾಂತಿಕ ನಿಲುವುಗಳ ಬಗ್ಗೆ ಮಾಹಿತಿ ಪಡೆದುಕೊಂಡೆ. ಆಗ ಹಿಂದೂಗಳ ಕುರಿತ ಅವರ ಕೆಲವು ಭಾಷಣಗಳು ನನಗೆ ಕೋಪ ಉಂಟುಮಾಡಿದ್ದವು. ಆ ಕ್ಷಣದಿಂದ ಅವರ ಹೆಸರು ಹೇಳಿದರೆ ನನ್ನ ರಕ್ತ ಕುದಿಯತೊಡಗಿತು.

ಪೂರ್ವನಿಗದಿಯಂತೆ ಎರಡು ದಿನಗಳ ಬಳಿಕ ಆ ವ್ಯಕ್ತಿ ಭೇಟಿಯಾದಾಗ ಧರ್ಮ ರಕ್ಷಣೆಗಾಗಿ ಈ ಕೆಲಸ ಮಾಡುತ್ತೇನೆ ಎಂದ ನಿನ್ನ ಮಾತು ಧರ್ಮದ ಬಗ್ಗೆ ನಿನಗಿರುವ ಅಭಿಮಾನ ತೋರಿಸುತ್ತದೆ. ಹೆದರಬೇಡ, ನಿನಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ವಾಗ್ದಾನ ಮಾಡಿದ್ದರು. ಈಗ ಬಂಧಿತರಾಗಿರುವವರಲ್ಲಿ ಆ ವ್ಯಕ್ತಿ ಇಲ್ಲ. ಆತನನ್ನು ನೋಡಿದರೆ ಪತ್ತೆ ಹಚ್ಚುತ್ತೇನೆ ಎಂದು ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

ಏರ್‌ಗನ್‌ನಲ್ಲಿ 500 ಸುತ್ತು ಗುಂಡು:  ನಾನು ಧರ್ಮ ರಕ್ಷಣೆ ಕೆಲಸಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಆ ವ್ಯಕ್ತಿ ಸಿಂದಗಿಗೆ ಬಂದು ಕೆಲಸವಿದೆ ಎಂದು ಹೇಳಿ ನನ್ನನ್ನು ಬೆಳಗಾವಿಗೆ ಕರೆದೊಯ್ದರು. ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ 15 ದಿನಗಳ ಕಾಲ ತರಬೇತಿ ನೀಡಿದ್ದರು ಎಂದು ಪರಶುರಾಮ್‌ ಹೇಳಿರುವುದಾಗಿ ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಲ್ಲಿ ಏರ್‌ಗನ್‌ನಲ್ಲೇ ಸುಮಾರು 500 ಸುತ್ತು ಹಾರಿಸಿ 7.65 ಎಂ.ಎಂ. ಪಿಸ್ತೂಲ್‌ ಬಳಸುವುದನ್ನು ಕಲಿತುಕೊಂಡೆ. ಅಲ್ಲದೆ ಈ ವೇಳೆ ಆ ಅಪರಿಚಿತ ವ್ಯಕ್ತಿ ಕೊಟ್ಟಿದ್ದ ದೂರವಾಣಿ ಸಂಖ್ಯೆಗೆ (ಬೆಂಗಳೂರಿನ ಸೀಗೇಹಳ್ಳಿಯ ಅಂಗಡಿಯೊಂದರ ಕಾಯಿನ್‌ ಬೂತ್‌) ನಿತ್ಯ ಕರೆ ಮಾಡಿ ಚರ್ಚೆ ನಡೆಸುತ್ತಿದ್ದೆ. ಆತನ ಸೂಚನೆಯಂತೆ ಸೆ.3ರಂದು ಬೆಂಗಳೂರಿಗೆ ಬಂದಿದ್ದೆ ಎಂದು ಹೇಳಿದ್ದಾನೆ.

ಸೆ.4ರಂದೇ ಗೌರಿಯನ್ನು ಹತ್ಯೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಪೂರ್ವನಿಯೋಜಿತ ಸಂಚಿನಂತೆ ಅಂದು ರಾತ್ರಿ 7 ಗಂಟೆಗೆ ಒಬ್ಬಾತ (ಹೆಸರು ಗೊತ್ತಿಲ್ಲ) ನನ್ನನ್ನು ಬೈಕ್‌ನಲ್ಲಿ ಅವರ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ. ಆದರೆ ಆ ವೇಳೆಗಾಗಲೇ ಗೌರಿ ಅವರು ಕಚೇರಿಯಿಂದ ಮನೆಗೆ ಮರಳಿದ್ದರು. ಮನೆಯ ಲೈಟ್‌ ಹಾಗೂ ಟೀವಿ ಚಾಲೂ ಆಗಿದ್ದರಿಂದ ಅವರು ಮನೆಯೊಳಗಿರುವುದು ನಮಗೆ ಖಚಿತವಾಯಿತು. ಹೀಗಾಗಿ ಆ ದಿನ ಕೃತ್ಯ ಎಸಗದೆ ನಾವು ವಾಪಸಾಗಿದ್ದೆವು ಎಂದು ಪರಶುರಾಮ್‌ ವಿವರಿಸಿದ್ದಾನೆ.

ಮರುದಿನ ಸ್ವಲ್ಪ ಬೇಗನೆ ಹೋಗಿ, ಗೌರಿ ಅವರ ಮನೆ ಹತ್ತಿರದ ಉದ್ಯಾನದಲ್ಲಿ ಅಡಗಿ ಕುಳಿತಿದ್ದೆವು. ಅವರ ಕಾರು ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಗುಂಡು ಹಾರಿಸಿದೆ. ಏರ್‌ಗನ್‌ನಲ್ಲಿ ತರಬೇತಿ ಪಡೆದಿದ್ದರಿಂದ ನನಗೆ ಆವರೆಗೆ ಪಿಸ್ತೂಲ್‌ ಬಳಸಿದ ಅನುಭವವಿರಲಿಲ್ಲ. ಇದರಿಂದ ಗುಂಡು ಹಾರಿಸುವಾಗ ಕೈ ನಡುಕ ಬರುತ್ತಿತ್ತು. ಎರಡು ಅಡಿ ಹತ್ತಿರದಿಂದ ಹೊಡೆದಿದ್ದರಿಂದ ಮೂರು ಗುಂಡುಗಳು ಅವರ ದೇಹವನ್ನು ಹೊಕ್ಕಿದವು. ಗೇಟ್‌ ಬಳಿ ಬಂದು ಹಾರಿಸಿದ ನಾಲ್ಕನೇ ಗುಂಡು ಗುರಿ ತಪ್ಪಿ ಗೋಡೆಗೆ ಬಿದ್ದಿತ್ತು. ಐದಾರು ಸೆಕೆಂಡ್‌ಗಳಲ್ಲಿ ಎಲ್ಲವೂ ಮುಗಿದುಹೋಯಿತು ಎಂದು ಆರೋಪಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್‌ ಜಾಬ್‌ ಎಂದು ಹೇಳಿ ಹೋದ್ರು:  ಈ ಕೃತ್ಯದ ಬಳಿಕ ನನ್ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟ ಸವಾರ, ಮಾರ್ಗ ಮಧ್ಯೆ ಪಿಸ್ತೂಲ್‌ ವಾಪಸ್‌ ಪಡೆದುಕೊಂಡ. ಹಾಗೆಯೇ, ನಾನು ತೊಟ್ಟಿದ್ದ ಜರ್ಕಿನ್‌ ಬಿಚ್ಚಿಸಿಕೊಂಡ ಆತ, ‘ಗುಡ್‌ ಜಾಬ್‌. ಸ್ಪಲ್ಪ ದಿನ ನಮ್ಮನ್ನು ಸಂಪರ್ಕಿಸಬೇಡ’ ಎಂದು ಹೇಳಿ ಹೊರಟುಹೋದ.

ಆ ಅಪರಿಚಿತ ವ್ಯಕ್ತಿ ಮೊದಲೇ ಸೂಚಿಸಿದಂತೆ ನಾನು ಮರು ಮಾತನಾಡದೆ ಸಿಂದಗಿಗೆ ಬೆಂಗಳೂರಿನಿಂದ ಹೊರಟು ಬಂದೆ. ಕೆಲ ದಿನಗಳ ಹಿಂದೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಗಳ ಬಂಧನ ವಿಚಾರ ತಿಳಿದು ನನ್ನಲ್ಲಿ ಭಯವಾಯಿತು. ಯಾರದ್ದೋ ಮಾತಿಗೆ ನನ್ನ ಭವಿಷ್ಯ ನಾಶವಾಯಿತು. ನಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ನಾನು ತಂದೆ-ತಾಯಿಗೆ ನೋವು ನೀಡಿದೆ. ನಾನು ಗೌರಿ ಅವರನ್ನು ಕೊಲ್ಲಬಾರದಿತ್ತು. ಈಗ ಪಶ್ಚಾತ್ತಾಪವಾಗುತ್ತಿದೆ ಎಂದು ಪರಶುರಾಮ್‌ ವ್ಯಾಕುಲತೆಯಿಂದ ನುಡಿದಿದ್ದಾಗಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios