Asianet Suvarna News Asianet Suvarna News

ಪಿಒಪಿ ಗಣೇಶ ತಯಾರಿಕೆ ಎಲ್ಲಿ ನಡೆಯುತ್ತೆ ?

ನಗರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪೂರೈಕೆಯಾಗುವ ಪಿಒಪಿ ಗಣೇಶನ ಮೂರ್ತಿಗಳು ಹೊರಗಿನಿಂದ ಸರಬರಾಜಾಗುತ್ತವೆ ಎನ್ನಲಾಗಿತ್ತು. ಆದರೆ ವಾಸ್ತವ ಸಂಗತಿ ಏನೆಂದು ಇಲ್ಲಿದೆ ಮಾಹಿತಿ. 

POP Ganesh Idols Made in Bengaluru
Author
Bengaluru, First Published Aug 21, 2019, 8:40 AM IST

ಎನ್‌.ಎಲ್‌.ಶಿವಮಾದು

ಬೆಂಗಳೂರು [ಆ.21]:  ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ರಾಜ್ಯದಲ್ಲಿ ನಿಷೇಧವಿದ್ದರೂ, ಹಬ್ಬದ ಸಮಯಕ್ಕೆ ಸರಿಯಾಗಿ ಲಕ್ಷಾಂತರ ಪಿಒಪಿ ಗಣಪಗಳು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳುವುದು ಹೇಗೆ?

ಈ ಪ್ರಶ್ನೆಯನ್ನು ಸಂಬಂಧಿಸಿದ ಅಧಿಕಾರಿಗಳ ಮುಂದಿಟ್ಟರೆ ಅವರು ನೀಡುವ ಉತ್ತರ- ರಾಜ್ಯದಲ್ಲಿ ಪಿಒಪಿ ಗಣಪ ನಿರ್ಮಾಣವಾಗುತ್ತಿಲ್ಲ. ಹೊರ ರಾಜ್ಯಗಳಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಈ ಅಕ್ರಮ ತಡೆಯುವ ವ್ಯವಸ್ಥೆ ರಾಜ್ಯದಲ್ಲಿ ಸಮರ್ಪಕವಾಗಿಲ್ಲ ಎಂಬುದು.

ಆದರೆ, ವಾಸ್ತವ ಸಂಗತಿ- ಪಿಒಪಿ ಗಣಪ ಹೊರ ರಾಜ್ಯದಿಂದ ಬರುವುದಕ್ಕಿಂತ ನಗರದ ಹೊರ ವಲಯಗಳಲ್ಲಿ ನಿರ್ಮಾಣವಾಗಿ ನಗರಕ್ಕೆ ಅನಾಯಾಸವಾಗಿ ಪೂರೈಕೆಯಾಗಿ ಮಾರಾಟಕ್ಕೆ ಲಭ್ಯವಾಗುತ್ತಿವೆ. ಬೆಂಗಳೂರು ಹೊರವಲಯದಲ್ಲೇ ಹತ್ತಾರು ಘಟಕಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ರಾಜಾರೋಷವಾಗಿ ತಯಾರಿಸುತ್ತಿರುವುದಕ್ಕೆ ಇತ್ತೀಚೆಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಡಾ.ಸುಧಾಕರ್‌ ನೇತೃತ್ವದಲ್ಲಿ ಮಂಡಳಿಯ ಅಧಿಕಾರಿಗಳ ತಂಡ ದಾಳಿ ನಡೆಸಿ ಒಂದಷ್ಟುಮೂರ್ತಿಗಳ ಜಪ್ತಿ ಮಾಡಿ, ಘಟಕಗಳಿಗೆ ಬೀಗ ಜಡಿದಿದ್ದೇ ಸಾಕ್ಷಿ.

ಮಂಡ್ಯ: ಪಿಒಪಿ, ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆ ನಿಷೇಧ

ಆದರೆ, ಜಪ್ತಿ ಹೆಸರಲ್ಲಿ ಪಿಒಪಿ ಮೂರ್ತಿಗಳನ್ನು ಆಯಾ ಘಟಕಗಳಲ್ಲೇ ಬಿಡಲಾಗಿದೆ. ಅಧ್ಯಕ್ಷರು ಈ ಮೂರ್ತಿಗಳ ವಿಲೇವಾರಿ ಮಾಡುವಂತೆ ಸೂಚಿಸಿದರೂ ಅದನ್ನು ಅನುಸರಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಬ್ಬದ ಬಳಿಕ ಅವುಗಳನ್ನು ಕ್ವಾರಿಗಳಿಗೆ ವಿಲೇವಾರಿ ಮಾಡುತ್ತೇವೆ ಎನ್ನುತ್ತಾರೆ. ಅಧಿಕಾರಿಗಳ ದಾಳಿ ನಂತರವೂ ಪಿಒಪಿ ಮಾಫಿಯಾ ಪರಿಸರಕ್ಕೆ ಮಾರಕವಾದ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡು, ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಸುತ್ತಲಿನ ಪ್ರದೇಶ ಹಾಗೂ ಯಲಹಂಕ, ಕೋಗಿಲು ಕ್ರಾಸ್‌, ಹೊಸೂರು ರಸ್ತೆ ಸೇರಿದಂತೆ ನಗರದ ವಿವಿಧೆಡೆ ಬೃಹತ್‌ ಪ್ರಮಾಣದಲ್ಲಿ ಪಿಇಒ ಮೂರ್ತಿಗಳನ್ನು ತಯಾರಾಗುತ್ತಿವೆ. ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಶೆಡ್‌ಗಳನ್ನು ಮಾಡಿಕೊಂಡು ಸಾವಿರಾರು ಸಂಖ್ಯೆಯಲ್ಲಿ ರಾಜಾರೋಷವಾಗಿ ಪಿಇಒ ಪ್ರತಿಮೆಗಳನ್ನು ಸಿದ್ಧಪಡಿಲಾಗುತ್ತಿದೆ ಎಂಬ ಆರೋಪಗಳಿವೆ. ಅಲ್ಲದೆ, ಈ ಘಟಕಗಳ ಮೇಲೆ ಅಧಿಕಾರಿಗಳ ದಾಳಿ ಒಂದು ದಿನಕ್ಕೆ ಮಾತ್ರ ಸೀಮಿತವೇ ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.

ಹೊರ ವಲಯದಲ್ಲಿಯೇ ಏಕೆ ನಿರ್ಮಾಣ:

ನಗರದ ಹೊರ ವಲಯದಲ್ಲಿ ಪಿಒಪಿ ಮೂರ್ತಿಗಳನ್ನು ತಯಾರು ಮಾಡುವುದರಿಂದ ಸಂಬಂಧಪಟ್ಟಪ್ರಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ವ್ಯವಹಾರ ಮಾಡಲು ಸಹಾಯವಾಗಲಿದೆ. ಇದರಿಂದ ಅಧಿಕಾರಿಗಳು ಹಾಗೂ ಗೋದಾಮು ಮಾಲಿಕರ ನಡುವಿನ ಒಪ್ಪಂದದಿಂದ ಎಂದಿನಂತೆಯೇ ವಹಿವಾಟು ನಡೆಯಲಿದೆ. ಹಬ್ಬ ಬಂದಾಗ ಮಾತ್ರ ಮಾಧ್ಯಮಗಳ ಕಣ್ಣಿಗೆ ಬೀಳಲಿ ಎಂಬ ಉದ್ದೇಶದಿಂದ ಮೂರ್ತಿಗಳನ್ನು ವಶಪಡಿಸಿಕೊಳ್ಳುವ ನಾಟಕವಾಡುತ್ತಾರೆ ಎಂದು ಗೋದಾಮು ಮಾಲಿಕರೊಬ್ಬರು ತಿಳಿಸಿದ್ದಾರೆ.

ನಗರ ವ್ಯಾಪ್ತಿಯ ಪಾಲಿಕೆ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ, ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹೊರ ವಲಯವಾಗಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಹೊಂದಾಣಿಕೆ ಕೊರತೆ ವಹಿವಾಟಿಗೆ ವರದಾನವಾಗಿದೆ.

ಪಿಒಪಿ ಬಿಡುತ್ತಿಲ್ಲ!

ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸುವುದು ದುಬಾರಿ. ಅದರಲ್ಲೂ ಲೋಡುಗಟ್ಟಲೆ ಜೇಡಿ ಮಣ್ಣು ಸಿಗುವುದೂ ಕಷ್ಟ. ಅದಕ್ಕಿಂತ ಮುಖ್ಯವಾಗಿ ಮಣ್ಣಿಮ ಮೂರ್ತಿಗಳ ಬಾಲಿಕೆ ಆಯಾ ವರ್ಷಕ್ಕೆ ಸೀಮಿತ. ಕೆಲ ತಿಂಗಳ ಬಳಿಕ ಅವು ಬಿರುಕು ಬಂದು ಮೂರ್ತಿ ಹಾಳಾಗುತ್ತವೆ. ಪ್ರತೀ ವರ್ಷ ಹೊಸದಾಗಿಯೇ ತಯಾರಿಸಬೇಕು. ಆದರೆ, ಪಿಒಪಿ ಮೂರ್ತಿಗಳಾದರೆ ಮಾರಾಟವಾಗದಿದ್ದರೂ ಕನಿಷ್ಠ ಎರಡು ಮೂರು ವರ್ಷ ಹಾಗೇ ಇಟ್ಟುಕೊಳ್ಳಬಹುದು, ಹಬ್ಬದ ಸಂದರ್ಭದಲ್ಲಿ ಬಣ್ಣ ಬಳಿದು ಮಾರಾಟ ಮಾಡಬಹುದು. ಒಂದು ವೇಳೆ ಹಾಳಾದರೂ ಅವನ್ನೇ ಮತ್ತೆ ಕರಗಿಸಿ ಹೊಸ ಮೂರ್ತಿ ತಯಾರಿಸಬಹುದು. ಹಾಗಾಗಿಯೇ ಗಣೇಶ ಮೂರ್ತಿ ತಯಾರಿಕಾ ವ್ಯಾಪಾರ ಜಾಲ ‘ಪಿಒಪಿ’ ನಿಷೇಧಿಸಿದರೂ ಬಿಡದೆ ಗಂಟುಬಿದ್ದಿದೆ.

ಹಬ್ಬದ ಬಳಿಕ ತೆರವು ಮಾಡ್ತಾರಂತೆ!

ಇತ್ತೀಚೆಗೆ ಮೈಸೂರು ರಸ್ತೆಯಲ್ಲಿ 2,450 ಹಾಗೂ ಯಲಹಂಕದಲ್ಲಿ 186 ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂರ್ತಿಗಳನ್ನು ಹಬ್ಬದ ಬಳಿಕ ತೆರವುಗೊಳಿಸುವುದಾಗಿ ಬಿಬಿಎಂಪಿ ತಿಳಿಸಿದೆ. ಸದ್ಯಕ್ಕೆ ಗೋದಾಮುಗಳಿಗೆ ಬೀಗ ಹಾಕಲಾಗಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ. ಹಬ್ಬದ ಬಳಿಕ ಕ್ವಾರಿಗಳಿಗೆ ವಿಲೇವಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ತಿಳಿಸಿದ್ದಾರೆ.

ನಿಯಮಗಳ ಪ್ರಕಾರ ವಶಪಡಿಸಿಕೊಂಡ ಮೂರ್ತಿಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಗಳು ಅಥವಾ ಕಲ್ಲು ಕ್ವಾರಿಗಳಿಗೆ ಕೂಡಲೇ ವಿಲೇವಾರಿ ಮಾಡಬೇಕು. ಆದರೆ, ಅಧಿಕಾರಿಗಳ ವಿಳಂಬ ನೀತಿ ಅನುಸರಿಸಿದರೆ ಗೋದಾಮು ಮಾಲಿಕರು, ಹಿಂಬಾಗಿಲಿನಿಂದ ಮಾರಾಟ ದಾರಿ ಹಿಡಿಯುವ ಸಾಧ್ಯತೆಗಳೇ ಹೆಚ್ಚು. ಹಬ್ಬದ ಆಚರಣೆಗೆ ಇನ್ನೂ 12 ದಿನವಿದೆ. ವಿಲೇವಾರಿ ಮಾಡುವುದಕ್ಕೆ ಇಷ್ಟುಅವಧಿ ಏಕೆ ಬೇಕು? ಈಗಲೇ ಏಕೆ ಅಧಿಕಾರಿಗಳು ವಿಲೇವಾರಿ ಮಾಡಲು ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿವೆ.

  ನಗರದ ಆರು ಗೋದಾಮುಗಳ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಲೇವಾರಿ ಮಾಡುವುದಕ್ಕೆ ಸಂಬಂಧಪಟ್ಟಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

-ಡಾ. ಕೆ. ಸುಧಾಕರ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ.

  ಇತ್ತೀಚೆಗೆ ಮೈಸೂರು ರಸ್ತೆಯಲ್ಲಿ 2,450 ಹಾಗೂ ಯಲಹಂಕದಲ್ಲಿ 186 ಮೂರ್ತಿಗಳನ್ನು ಜಪ್ತಿ ಮಾಡಿ ಸದ್ಯಕ್ಕೆ ಆ ಗೋದಾಮುಗಳಿಗೆ ಬೀಗ ಹಾಕಲಾಗಿದೆ. ಈ ಮೂರ್ತಿಗಳು ಗೋದಾಮುಗಳಲ್ಲೇ ಇದ್ದು, ಹೊರ ತೆಗೆಯಲಾಗುವುದಿಲ್ಲ. ಹಬ್ಬದ ಬಳಿಕ ಅವುಗಳನ್ನು ಕ್ವಾರಿಗಳಿಗೆ ವಿಲೇವಾರಿ ಮಾಡಲಾಗುತ್ತದೆ

-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ, ಬಿಬಿಎಂಪಿ 

Follow Us:
Download App:
  • android
  • ios