Asianet Suvarna News Asianet Suvarna News

ಗಣೇಶ ಮಾರಾಟಕ್ಕೆ ಟ್ರೇಡ್‌ ಲೈಸೆನ್ಸೇ ಇಲ್ಲ!

ಬೆಂಗಳೂರಿನಲ್ಲಿ ಚೌತಿಯ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಯಾವು ಲೈಸೆನ್ಸ್ ಕೂಡ ಇಲ್ಲ. 

No License To Sale POP Ganesh Idols
Author
Bengaluru, First Published Aug 22, 2019, 8:41 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಆ.22]:  ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಏಳು ವರ್ಷದಿಂದ ರಸಾಯನಿಕ ಬಣ್ಣ ಲೇಪಿತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣಪ ತಯಾರಿ, ಮಾರಾಟವನ್ನು 2016ರಿಂದಲೇ ಕಡ್ಡಾಯವಾಗಿ ನಿಷೇಧವಿದೆ. ನಿಷೇಧ ಆರಂಭವಾದ ನಂತರ ಇದುವರೆಗೂ ತಾನೇ ನಿರ್ಮಿಸಿದ ಕಲ್ಯಾಣಿಗಳಲ್ಲಿ 30 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಿದ್ದಾಗಿ ಬಿಬಿಎಂಪಿ ಅಧಿಕೃತವಾಗಿ ಹೇಳುತ್ತದೆ. ಆದರೆ, ಪಿಒಪಿ ವಿರುದ್ಧ ಜಾಗೃತಿ ಮೂಡಿಸುವ ಸಂಘ ಸಂಸ್ಥೆಗಳ ಪ್ರಕಾರ ಈ ಅವಧಿಯಲ್ಲಿ ನಗರದ ಜಲಮೂಲಗಳಲ್ಲಿ ವಿಸರ್ಜನೆಯಾಗಿರುವ ಪಿಒಪಿ ಗಣಪಗಳ ಸಂಖ್ಯೆ ಬರೋಬ್ಬರಿ 2.20 ಲಕ್ಷ!

ಇಷ್ಟಾದರೂ, ಈವರೆಗೆ ಒಬ್ಬ ಗಣೇಶಮೂರ್ತಿ ಮಾರಾಟಗಾರ ಉದ್ದಿಮೆ ಪರವಾನಗಿಯನ್ನೂ ಬಿಬಿಎಂಪಿ ರದ್ದುಪಡಿಸಿಲ್ಲ. ಏಕೆಂದರೆ, ಬೆಂಗಳೂರು ನಗರದಲ್ಲಿರುವ ಯಾವೊಬ್ಬ ಗಣೇಶಮೂರ್ತಿ ಮಾರಾಟಗಾರನಿಗೂ ಉದ್ದಿಮೆ ಪರವಾನಗಿಯೇ (ಟ್ರೇಡ್‌ ಲೈಸನ್ಸ್‌) ಇಲ್ಲ!

ಪಿಒಪಿ ಗಣೇಶ ತಯಾರಿಕೆ ಎಲ್ಲಿ ನಡೆಯುತ್ತೆ ?

ಹೌದು, ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ 2016ರಲ್ಲಿ ಸಂಪೂರ್ಣ ಪಿಒಪಿ ಪರಿಸರಕ್ಕೆ ಮಾರಕ ಎಂಬ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 2017ರಿಂದ ಕಟ್ಟುನಿಟ್ಟಾಗಿ ನಿಷೇಧ ನಿಯಮ ಅನುಷ್ಠಾನಗೊಳಿಸಲಾಗುತ್ತಿದೆ. 2017ರಲ್ಲಿ ಬರೋಬ್ಬರಿ 3.48 ಲಕ್ಷದಷ್ಟುಮೂರ್ತಿಗಳು ವಿಸರ್ಜನೆ ಮಾಡಲಾಗಿದೆ. ಇದಲ್ಲದೆ ಪಿಒಪಿ ಮೂರ್ತಿಗಳನ್ನು ಪ್ರತ್ಯೇಕವಾಗಿ 16,353 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. 2018ರಲ್ಲಿ 2.5 ಲಕ್ಷದಷ್ಟುಮೂರ್ತಿಗಳನ್ನು ವಿಸರ್ಜನೆ ಮಾಡಿದ್ದು, 15,800 ಪಿಒಪಿ ಮೂರ್ತಿಗಳನ್ನು ಬಿಬಿಎಂಪಿ ವ್ಯವಸ್ಥೆ ಮಾಡಿರುವ ಕೆರೆ, ಪ್ರತ್ಯೇಕ ಕಲ್ಯಾಣಿ ಹಾಗೂ ಸಂಚಾರಿ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡಿಸಿದ್ದಾರೆ. ಆದರೆ, ವಿಸರ್ಜಿಸಿದ ಪಿಒಪಿ ಗಣೇಶಗಳ ಸಂಖ್ಯೆ ಸಂಘ ಸಂಸ್ಥೆಗಳ ಪ್ರಕಾರ ಬಿಬಿಎಂಪಿ ನೀಡಿರುವ ಲೆಕ್ಕದಲ್ಲಿ 2017ರಲ್ಲಿ ಶೇ.49 ಹಾಗೂ 2018ರಲ್ಲಿ ಶೇ.35ರಷ್ಟಿದೆ. ತನ್ನ ಅದಕ್ಷತೆಯನ್ನು ಮರೆಮಾಚಲು ಸುಳ್ಳು ಅಂಕಿ-ಅಂಶ ನೀಡಿದೆ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನು ಗಮನಿಸಿದರೆ ನಿಷೇಧಿತ ಅವಧಿಯಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 2.20 ಲಕ್ಷ ಪಿಒಪಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಲೈಸೆನ್ಸೇ ಇಲ್ಲ, ರದ್ದುಪಡಿಸುವ ಮಾತೆಲ್ಲಿ:

ಸಾಮಾನ್ಯವಾಗಿ ಬಿಬಿಎಂಪಿಯಿಂದ ಪಟಾಕಿ ಮಾರಾಟದ ಪೆಂಡಾಲ್‌, ಗಣೇಶಮೂರ್ತಿಗಳ ಮಾರಾಟದ ಪೆಂಡಾಲ್‌ ಮತ್ತಿರರ ಸೀಮಿತ ಅವಧಿಯ ಮಾರಾಟ ಮಳಿಗೆಗಳಿಗೆ ತಾತ್ಕಾಲಿಕ ಉದ್ದಿಮೆ ಪರವಾನಗಿ ನೀಡಲಾಗುತ್ತದೆ. ಈ ಪರವಾನಗಿ ಆಧಾರದ ಮೇಲೆ ವ್ಯಾಪಾರಿಗಳು ವ್ಯಾಪಾರ ಮಾಡಿಕೊಳ್ಳಬಹುದು. ಆದರೆ, ಈವರೆಗೆ ಗಣೇಶಮೂರ್ತಿ ಮಾರಾಟಗಾರರು ಅಥವಾ ತಯಾರಕರು ಬಿಬಿಎಂಪಿಯಿಂದ ಒಂದೂ ಉದ್ದಿಮೆ ಪರವಾನಗಿ ಪಡೆದಿಲ್ಲ. ಹೀಗಾಗಿ, ಬಿಬಿಎಂಪಿ ಪ್ರತಿ ಬಾರಿ ಉದ್ದಿಮೆ ಪರವಾನಗಿ ರದ್ದುಪಡಿಸುತ್ತೇವೆ ಎಂದು ಅಬ್ಬರಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಘನ ತ್ಯಾಜ್ಯ ವಿಲೇವಾರಿ ತಜ್ಞ ಎನ್‌.ಎಸ್‌.ರಮಾಕಾಂತ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಿಬಿಎಂಪಿ ವ್ಯವಸ್ಥೆ ಮಾಡುವ ಕೆರೆಗಳು, ಕಲ್ಯಾಣಿಗಳು, ಸಂಚಾರಿ ಟ್ಯಾಂಕರ್‌ ಮಾತ್ರವಲ್ಲದೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಟ್ಯಾಂಕರ್‌ಗಳ ವ್ಯವಸ್ಥೆ ಮಾಡುತ್ತದೆ. ಅಲ್ಲದೆ, ಬಹುತೇಕರು ಮನೆಗಳಲ್ಲಿರುವ ಸಂಪ್‌, ತೊಟ್ಟಿಗಳಲ್ಲಿ ಹಾಗೂ ಅಕ್ಕಪಕ್ಕದ ನೀರಿನ ಮೂಲಗಳಲ್ಲೂ ಗಣೇಶಮೂರ್ತಿ ವಿಸರ್ಜನೆ ಮಾಡುತ್ತಾರೆ. ಇವೆಲ್ಲಾ ಮೂರ್ತಿಗಳನ್ನು ಪರಿಗಣಿಸಿದರೆ ವರ್ಷಕ್ಕೆ ಸುಮಾರು 12 ಲಕ್ಷದಷ್ಟುಮೂರ್ತಿಗಳು ಪ್ರತಿಷ್ಠಾಪಿಸಿ ವಿಸರ್ಜನೆ ಆಗುತ್ತದೆ. ಇವುಗಳಲ್ಲಿ ಶೇ.35ರಿಂದ 40 ರಷ್ಟುಮೂರ್ತಿಗಳು ಪ್ಲಾಸ್ಟರ್‌ ಆಫ್‌ ಮೂರ್ತಿಗಳೇ ಕೂಡಿರುತ್ತವೆ. ಇನ್ನು ಗೌರಿ ಮೂರ್ತಿಗಳು ಹೆಚ್ಚುವರಿ.

ಇಷ್ಟರ ಮಟ್ಟಿಗೆ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಯಾವುದೇ ಪಿಒಪಿ ಮೂರ್ತಿಗಳ ಮಾರಾಟಗಾರ ಹಾಗೂ ತಯಾರಕರ ಮೇಲೆ ಕ್ರಮ ಕೈಗೊಂಡಿಲ್ಲ.
 
‘ಪಿಒಪಿ’ ಪ್ರಬಲ ಮಾಫಿಯಾ

ನಗರದಲ್ಲಿ ಮೊದಲ ಬಾರಿಗೆ 2013ರಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ ಆದೇಶ ಮಾಡಲಾಯಿತು. ಬಳಿಕ ಸತತ ಮೂರು ವರ್ಷಗಳ ಕಾಲ ನಿಷೇಧ ಆದೇಶ ಅನುಷ್ಠಾನಗೊಳ್ಳದಂತೆ ಪಿಒಪಿ ಮಾಫಿಯಾ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದರಲ್ಲಿ ಯಶಸ್ವಿಯೂ ಆಗಿತ್ತು. ಬಳಿಕ ನ್ಯಾಯಾಲಯ ಸತತವಾಗಿ ಚಾಟಿ ಬೀಸಿದ ಪರಿಣಾಮ ಸರ್ಕಾರವು ವಿಧಿ ಇಲ್ಲದೆ 2016ರಲ್ಲಿ ನಿಷೇಧವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಮುಂದಾಯಿತು. ಬಳಿಕವೂ ಅರಿವು, ಜಾಗೃತಿ ಕಾರ್ಯಕ್ರಮಗಳಲ್ಲೇ ಕಾಲ ಹಾಗೂ ಹಣ ಎರಡನ್ನೂ ಕಳೆಯುತ್ತಿದೆ. ಈವರೆಗೆ ಒಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ.

ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮರಳು, ಗಣಿ, ಕಸದ ಮಾಫಿಯಾ ರೀತಿಯಲ್ಲೇ ನಗರದಲ್ಲಿ ಪಿಒಪಿ ಮಾಫಿಯಾ ಪ್ರಬಲವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ, ಪಿಒಪಿ ಮಾರಾಟ ಮತ್ತು ತಯಾರಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 500 ಹೆಚ್ಚು ಮಂದಿಯ ವ್ಯವಸ್ಥಿತ ಜಾಲ

ಕುಂಬಳಗೂಡು, ಕೋಗಿಲು ಕ್ರಾಸ್‌, ಹೊಸೂರು ಸೇರಿದಂತೆ ನಗರದ ಹೊರ ವಲಯಗಳಲ್ಲಿ ತಯಾರಾಗುವ ಪಿಒಪಿ ಮೂರ್ತಿಗಳನ್ನು ನಗರದ ವಿವಿಧ ಬಡಾವಣೆ, ಮಾರುಕಟ್ಟೆಪ್ರದೇಶಗಳಿಗೆ ಸಾಗಿಸುವ 500ರಿಂದ 800 ಮಂದಿ ಸಗಟು ವ್ಯಾಪಾರಿಗಳ ಜಾಲವಿದೆ. ಈ ವ್ಯಾಪಾರಿಗಳು ಗಣೇಶ ಉತ್ಸವದ ಸಂದರ್ಭದಲ್ಲಿ ಮಾತ್ರ ಉದ್ಯಮ ನಡೆಸಲಿದ್ದಾರೆ. ಉತ್ಸವ ಆರಂಭವಾಗುವ 15ರಿಂದ 20 ದಿನ ಮುನ್ನ ಕಡಿಮೆ ಬೆಲೆಗೆ ನಗರದ ಅಂಗಡಿ, ಬೀದಿ ವ್ಯಾಪಾರಿಗಳಿಗೆ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡಿ ಹೋಗುತ್ತಾರೆ. ಹೆಚ್ಚಿನ ಲಾಭದ ಆಸೆಗೆ ಸಣ್ಣ ಪುಟ್ಟವ್ಯಾಪಾರಿಗಳು ಪಿಒಪಿ ಮಾರಾಟ ಮಾಡುತ್ತಿದ್ದಾರೆ. ಇಷ್ಟೂವ್ಯಾಪಾರಿಗಳು ಪರಸ್ಪರ ಸಂಪರ್ಕದಲ್ಲಿದ್ದು, ವ್ಯವಸ್ಥಿತವಾಗಿ ವ್ಯವಹಾರ ನಡೆಸುತ್ತಾರೆ ಎಂದು ಪರಿಸರ ಸ್ನೇಹಿ ಮಣ್ಣಿ ಗಣೇಶ ಮೂರ್ತಿ ಶಿಲ್ಪಿ ಗುರುಮೂರ್ತಿಚಾರ್‌ ಹೇಳಿದ್ದಾರೆ.

 ಪರಿಸರಕ್ಕೆ ಮಾರಕವಾಗುವ ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಗಣೇಶ ಮೂರ್ತಿ ಮಾರಾಟಗಾರರಿಗೆ ಕಡ್ಡಾಯವಾಗಿ ಪಾಲಿಕೆಯಿಂದ ಉದ್ಯಮ ಪರವಾನಿಗೆ ಪಡೆಯುವ ಬಗ್ಗೆ ಶೀಘ್ರದಲ್ಲಿ ಆದೇಶ ಹೊರಡಿಸಲಾಗುತ್ತದೆ.

-ಮಂಜುನಾಥ್‌ ಪ್ರಸಾದ್‌, ಆಯುಕ್ತರು ಬಿಬಿಎಂಪಿ.

Follow Us:
Download App:
  • android
  • ios