ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ! ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಾಜಪೇಯಿ! ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ! ಏಮ್ಸ್ ವೈದ್ಯರ ಅಧಿಕೃತ ಘೋಷಣೆ! ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದ ದೇಶ
ನವದೆಹಲಿ(ಆ.16): ಮಾಜಿ ಪ್ರಧಾನಿ, ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಾಜಪೇಯಿ ಕಳೆದ ಎರಡು ತಿಂಗಳಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ರಾತ್ರಿಯಿಂದ ಚಿಕಿತ್ಸೆಗೆ ಸ್ಪಂದಿಸದ ವಾಜಪೇಯಿ ಇಂದು ಸಂಜೆ 5 ಗಂಟೆ 5 ನಿಮಿಷಕ್ಕೆ ನಿಧನರಾದರು ಎಂದು ಏಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಏಮ್ಸ್ ವೈದ್ಯರು ಸತತ ಪ್ರಯತ್ನಗಳ ಹೊರತಾಗಿಯೂ ವಾಜಪೇಯಿ ನಮ್ಮನ್ನು ಅಗಲಿದ್ದಾರೆ ಎಂದು ತಿಳಿಸಿದ್ದಾರೆ.
ಜನನ:
1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ ಅಟಲ್ ಬಿಹಾರಿ ವಾಜಪೇಯಿ, ವಿದ್ಯಾರ್ಥಿ ದೆಸೆಯಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಕೃಷ್ಣಾ ದೇವಿ ಮತ್ತು ಕೃಷ್ಣಾ ಬಿಹಾರಿ ವಾಜಪೇಯಿ ಅವರೇ ಅಟಲ್ ತಂದೆ ತಾಯಿಗಳು. ಗ್ವಾಲಿಯರ್ ನ ಸರಸ್ವತಿ ಶಿಶು ಮಂದಿರ್ ನಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದ ವಾಜಪೇಯಿ ನಂತರ ಗ್ವಾಲಿಯರ್ ವಿಕ್ಟೋರಿಯಾ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಕಾನ್ಪುರದಲ್ಲಿ ಎಂ.ಎ ಪದವಿ ಗಳಿಸಿದರು.
ಆರ್ಯ ಸಮಾಜದ ಆರ್ಯ ಕುಮಾರ ಸಭಾ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ವಾಜಪೇಯಿ, 1929 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅಲ್ಲದೇ ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯದಲ್ಲೂ ವಾಜಪೇಯಿ ಕೆಲಸ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ:
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾದ ಕಾರಣಕ್ಕೆ ವಾಜಪೇಯಿ ಮತ್ತು ಅವರ ಸಹೋದರ ಪ್ರೇಮ್ ಅವರನ್ನು ಬ್ರಿಟಿಷರು ಬಂಧಿಸಿದ್ದರು. ಬಿಡುಗಡೆಯಾದ ಬಳಿಕವೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವಾಜಪೇಯಿ, ಸ್ವಾತಂತ್ರ್ಯದ ಬಳಿಕ ಭಾರತೀಯ ಜನ ಸಂಘ ಪಕ್ಷವನ್ನು ಸೇರಿದರು.
ಇದೇ ವೇಳೆ ಕಾಶ್ಮೀರಕ್ಕೆ ಹೊರಗಿನವರ ಪ್ರವೇಶ ನಿರ್ಬಂಧವನ್ನು ವಿರೋಧಿಸಿ ವಾಜಪೇಯಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಮನೆಮಾತಾದರು. 1957ರಲ್ಲಿ ಬಲರಾಂಪುರ್ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದರು.
ತುರ್ತು ಪರಿಸ್ಥಿತಿ ವಿರೋಧಿಸಿ ಜೈಲುವಾಸ:
ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಅದನ್ನು ವಿರೋಧಿಸಿ ವಾಜಪೇಯಿ ಜೈಲು ಸೇರಿದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಲ್ಲಿ ಯಶಸ್ವಿಯದ ವಾಜಪೇಯಿ, ಶೀಘ್ರವೇ ಎಲ್.ಕೆ. ಅಡ್ವಾಣಿ ಜೊತೆಗೂಡಿ 1980ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದರು.
ನಂತರ ನಡೆದ ಅಯೋಧ್ಯೆ ಚಳವಳಿ ಮತ್ತು ರಾಮ ಮಂದಿರ ಚಳವಳಿ ಮೂಲಕ ಜನಪ್ರಿಯತೆ ಪಡೆದ ಬಿಜೆಪಿ ಪಕ್ಷ ಗುಜರಾತ್, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿತು. ಅಲ್ಲದೇ ವಾಜಪೇಯಿ ಮತ್ತು ಅಡ್ವಾಣಿ ಅವರ ಜನಪ್ರಿಯತೆ ಕೂಡ ಹೆಚ್ಚಾಗುತ್ತಾ ಬಂದಿತು.

ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆ:
1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಮಾತ್ರ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಲ್ಲದೇ ವಾಜಪೇಯಿ ಪ್ರಧಾನಿ ಕುಡ ಆದರು. ಆದರೆ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ವಾಜಪೇಯಿ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ವಾಜಪೇಯಿ ಕೇವಲ 13 ದಿನಗಳವರೆಗೆ ಮಾತ್ರ ಪ್ರಧಾನಿಯಾಗಿದ್ದರು.
ಎರಡನೇ ಬಾರಿ ಪ್ರಧಾನಿ ಹುದ್ದೆ:
ನಂತರ 1998 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊನಮ್ಮಿತು. ಕೂಡಲೇ ಎನ್ ಡಿಎ ಮೈತ್ರಿಕೂಟ ರಚಿಸಿದ ಬಿಜೆಪಿ ಅಧಿಕಾರಕ್ಕೆ ಬಂದು ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ ಈ ಸರ್ಕಾರವೂ ಬಹಳ ದಿನ ಅಧಿಕಾರದಲ್ಲಿರಲು ಅಂದಿನ ರಾಜಕೀಯ ಪರಿಸ್ಥಿತಿ ಅನುವು ಮಾಡಿಕೊಡಲಿಲ್ಲ. 13 ತಿಂಗಳ ಬಳಿಕ ವಾಜಪೇಯಿ ಮತ್ತೆ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಲೋಕಸಭೆಯಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಕೇವಲ ಒಂದು ಮತಗಳ ಅಂತರದಿಂದ ಎನ್ ಡಿಎ ಸರ್ಕಾರ ಬಿದ್ದು ಹೋಗಿತ್ತು.
ಈ ವೇಳೆಯೇ ವಾಜಪೇಯಿ ರಾಜಸ್ಥಾನದ ಪೋಕ್ರಾನ್ ನಲ್ಲಿ ಅಣುಬಾಂಬ್ ಯಶಸ್ವಿ ಪರೀಕ್ಷೆ ನಡೆಸಿ ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದ್ದರು. ಭಾರತ ಅಣುಬಾಂಬ್ ಪರೀಕ್ಷೆ ನಡೆಸಿರುವುದು ಅಮೆರಿಕ ಸೇರಿದಂತೆ ವಿಶ್ವದ ಬಲಾಡ್ಯ ರಾಷ್ಟ್ರಗಳ ಕಣ್ಣು ಕೆಂಪಾಗಿಸಿತ್ತು.
ನಂತರ ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಮುನ್ನಡಿ ಬರೆದ ವಾಜಪೇಯಿ ಐತಿಹಾಸಿಕ ಲಾಹೋರ್ ಒಪ್ಪಂದ ಜಾರಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ 1999ರಲ್ಲಿ ಪಾಕಿಸ್ತಾನ ತನ್ನ ವಾಗ್ದಾನವನ್ನು ಮರೆತು ಭಾರತದ ಮೇಲೆ ದಂಡೆತ್ತಿ ಬಂದಿದ್ದರಿಂದ ಅನಿವಾಯರ್ಯವಾಗಿ ಕಾರ್ಗಿಲ್ ಯುದ್ಧಕ್ಕೆ ಭಾರತ ಸಜ್ಜಾಗಬೇಕಾಯಿತು.
ಮೂರನೇ ಬಾರಿ ಒಲಿದು ಬಂದ ಪ್ರಧಾನಿ ಖುರ್ಚಿ:
ನಂತರ ನಡೆದ 1999 ರ ಲೋಕಸಭೆ ಚುನಾವಣೆಯಲ್ಲೂ ಎನ್ ಡಿಎ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಬಂದಿತು. ಮೂರನೇ ಬಾರಿ ವಾಜಪೇಯಿ ಪ್ರಧಾನಿಯಾಗಿ ಆಯ್ಕೆಯಾದರು. ಈ ಬಾರಿ ವಾಜಪೇಯಿ ಪೂರ್ಣಾವಧಿ ಅಧಿಕಾರ ಪೂರೈಸಿದರು.
ಈ ಅವಧಿಯಲ್ಲಿ ಉಗ್ರರಿಂದ ಭಾರತೀಯ ವಿಮಾನ ಅಪಹರಣ, 2001ರಲ್ಲಿ ಸಂಸತ್ತಿನ ಮೇಲೆ ಉಗ್ರರ ದಾಳಿಯಂತ ಅಹಿತಕರ ಘಟನಾವಳಿಗಳು ನಡೆದು ಸರ್ಕಾರಕ್ಕೆ ಕಪ್ಪು ಚುಕ್ಕಿಯಾಯಿತು. 2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸೋಲನ್ನು ಅನುಭವಿಸಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು.
ತೆರೆಗೆ ಸರಿದ ಅಜಾತಶತ್ರು:
ದಾದ ಬಳಿಕ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ದೆಹಲಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಮರೆವಿನ ಕಾಯಿಲೆಗೆ ತುತ್ತಾದ ವಾಜಪೇಯಿ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರ ಸರಿದರು. ಬಹ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಾಜಪೇಯಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಎರಡು ತಿಂಗಳಿನಿಂದ ಏಮ್ಸ್ ಆಸ್ಪತ್ರೆಯಲ್ಲೇ ಇದ್ದ ಮಾಜಿ ಪ್ರಧಾನಿ, ನಿನ್ನೆ ರಾತ್ರಿಯಿಂದ ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ರಾಜಕೀಯ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರುಗಳಿಸಿದ ವಾಜಪೇಯಿ ತಮ್ಮ ವ್ಯಕ್ತಿತ್ವದಿಂದಲೇ ರಾಜಕೀಯ ವಿರೋಧಿಗಳ ಮನಸ್ಸನ್ನು ಗೆದ್ದವರು. ಇಂತಹ ಅಸಾಮಾನ್ಯ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲದಿರುವುದು ದೇಶದ ರಾಜಕೀಯ ರಂಗಕ್ಕೆ ಅಪಾರ ನಷ್ಟ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.
ಈ ಸುದ್ದಿಗಳನ್ನೂ ಓದಿ-ವಾಜಪೇಯಿಯವರ ಕನ್ನಡ ಭಾಷಣ ಕೇಳಿದ್ದೀರಾ? ಇಲ್ಲಿದೆ ಕೇಳಿ
