‘ಹ್ಯೂಮನ್ಸ್‌ ಆಫ್‌ ಬಾಂಬೆ’ಗೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ ಕುತೂಹಲಕಾರಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಪ್ರಧಾನಿಯಾದಾಗ ನನ್ನ ತಯಿ ಹೆಚ್ಚು ಖುಷಿಪಟ್ಟಿರಲಿಲ್ಲ ಎನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಹಾಗಾದ್ರೆ ಮೋದಿ ತಾಯಿ ಹೀರಾಬೆನ್ ಯವಾಗ ಹೆಚ್ಚು ಖುಷಿಪಟ್ಟಿದ್ದರು? ಇಲ್ಲಿದೆ ವಿವರ

ನವದೆಹಲಿ[ಫೆ.05]: ತಾವು ಪ್ರಧಾನಿಯಾಗಿದ್ದಕ್ಕಿಂತ ಹೆಚ್ಚಾಗಿ ತಾವು ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೊದಲ ಬಾರಿ ನೇಮಕವಾದಾಗ ತಮ್ಮ ತಾಯಿ ಹೀರಾಬೆನ್‌ ಹೆಚ್ಚು ಖುಷಿಪಟ್ಟಿದ್ದರು ಎಂಬ ಕುತೂಹಲಕರ ಸಂಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ.

‘ಬಹಳ ಜನರು ನೀವು ಪ್ರಧಾನಿಯಾದಾಗ ನಿಮ್ಮ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂದು ನನ್ನಲ್ಲಿ ಕೇಳುತ್ತಾರೆ. ಆದರೆ, ನಾನು ಪ್ರಧಾನಿಯಾದಾಗ ಪ್ರಸಿದ್ಧನಾಗಿಬಿಟ್ಟಿದ್ದೆ. ಎಲ್ಲೆಡೆ ನನ್ನ ಫೋಟೋ ಪ್ರಿಂಟ್‌ ಆಗುತ್ತಿತ್ತು. ಹೀಗಾಗಿ ನನ್ನ ತಾಯಿಯ ಪಾಲಿಗೆ ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೊದಲ ಬಾರಿ ನೇಮಕಗೊಂಡಿದ್ದು ದೊಡ್ಡ ಮೈಲುಗಲ್ಲು’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಫೇಸ್‌ಬುಕ್‌ನ ಜನಪ್ರಿಯ ಪೇಜ್‌ ‘ಹ್ಯೂಮನ್ಸ್‌ ಆಫ್‌ ಬಾಂಬೆ’ಗೆ ಸಂದರ್ಶನ ನೀಡಿ ತಾವು ಹಿಮಾಲಯಕ್ಕೆ ಹೋಗಿದ್ದು, ವರ್ಷಕ್ಕೆ 5 ದಿನ ಕಾಡಿಗೆ ಹೋಗುತ್ತಿದ್ದುದನ್ನು ಬಹಿರಂಗಪಡಿಸಿದ್ದ ಮೋದಿ, ಈಗ ಅದೇ ಸಂದರ್ಶನದ ಐದನೇ ಭಾಗದಲ್ಲಿ ಇನ್ನಷ್ಟುಕುತೂಹಲಕರ ಸಂಗತಿಗಳನ್ನು ಹೇಳಿದ್ದಾರೆ.

- ನಾನು ಗುಜರಾತ್‌ನ ಮುಖ್ಯಮಂತ್ರಿಯಾಗುತ್ತೇನೆ ಎಂದು ತಿಳಿದಾಗ ದೆಹಲಿಯಲ್ಲಿದ್ದೆ. ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲು ಅಹಮದಾಬಾದ್‌ನಲ್ಲಿ ನನ್ನ ಸೋದರರ ಜೊತೆಗಿರುವ ತಾಯಿಯ ಆಶೀರ್ವಾದ ಪಡೆಯಲು ಹೋದೆ. ಅಷ್ಟರಲ್ಲಾಗಲೇ ಅಹಮದಾಬಾದ್‌ನಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು. ನನ್ನ ತಾಯಿಗೆ ತನ್ನ ಮಗ ಗುಜರಾತ್‌ನ ಮುಖ್ಯಮಂತ್ರಿಯಾಗುವುದು ತಿಳಿದಿತ್ತು. ನನ್ನನ್ನು ತಬ್ಬಿಕೊಂಡ ಆಕೆ ಮೊದಲಿಗೆ ಹೇಳಿದ್ದೇನು ಗೊತ್ತಾ? ‘ನೀನಿನ್ನು ಗುಜರಾತ್‌ನಲ್ಲಿ ಇರುತ್ತೀಯಾ ಎಂಬುದೇ ನನಗೆ ಎಲ್ಲಕ್ಕಿಂತ ಖುಷಿಯ ಸಂಗತಿ.’ ತಾಯಿಯ ಗುಣವೇ ಅದು. ಆಕೆಗೆ ತನ್ನ ಸುತ್ತ ಏನಾದರೂ ನಡೆಯುತ್ತಿರಲಿ, ಮಕ್ಕಳು ಮಾತ್ರ ತನಗೆ ಹತ್ತಿರವಿರಬೇಕು.

- ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಲು ಆಶೀರ್ವಾದ ಕೇಳಿದಾಗ ಅಮ್ಮ ಹೇಳಿದ್ದು ಒಂದೇ ಮಾತು. ‘ನೋಡು ಮಗನೇ, ನೀನು ಏನು ಮಾಡುತ್ತೀಯೋ ನನಗದೆಲ್ಲ ಅರ್ಥವಾಗುವುದಿಲ್ಲ. ಆದರೆ ಯಾವತ್ತೂ ಲಂಚ ತೆಗೆದುಕೊಳ್ಳುವುದಿಲ್ಲ ಎಂದು ಮಾತ್ರ ನನಗೆ ಭಾಷೆ ಕೊಡು. ಯಾವತ್ತೂ ಅದೊಂದು ಪಾಪ ಮಾಡಬೇಡ.’ ಆ ಶಬ್ದಗಳು ನನ್ನ ಮೇಲೆ ದೊಡ್ಡ ಪರಿಣಾಮ ಬೀರಿದವು. ಏಕೆಂದರೆ ಜೀವನಪೂರ್ತಿ ಬಡತನದಲ್ಲೇ ಕಳೆದ, ಸುಖವೆಂದರೇನು ಎಂಬುದನ್ನು ನೋಡದ ಮಹಿಳೆಯೊಬ್ಬಳು ಸಂಭ್ರಮಾಚರಣೆಯ ಸಮಯದಲ್ಲಿ ತನ್ನ ಮಗನಿಗೆ ಲಂಚ ತೆಗೆದುಕೊಳ್ಳಬೇಡ ಎಂದು ಹೇಳಿದ್ದು ನನ್ನನ್ನು ತಟ್ಟಿತು. ಪ್ರಧಾನಿಯಾದ ಮೇಲೂ ನನ್ನ ಬೇರುಗಳು ಗಟ್ಟಿಯಾಗಿರಲು ಅದೇ ಕಾರಣ.

- ಆ ದಿನಗಳಲ್ಲಿ ತನ್ನ ಮಗನಿಗೊಂದು ಸಾಧಾರಣ ಕೆಲಸ ಸಿಕ್ಕಿದೆ ಎಂದು ಗೊತ್ತಾದರೂ ಸಾಕು ನನ್ನ ತಾಯಿ ಊರಿಗೆಲ್ಲ ಸಿಹಿ ಹಂಚಿಬಿಡುತ್ತಿದ್ದಳು. ಹಾಗಾಗಿ ಸಿಎಂ-ಗಿಎಂ ಎಲ್ಲ ಅವಳಿಗೆ ಏನೂ ಅಲ್ಲ, ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಮನುಷ್ಯನಾಗಿ ಪ್ರಾಮಾಣಿಕವಾಗಿ ನಡೆದುಕೊಳ್ಳುವುದಷ್ಟೇ ಆಕೆಗೆ ಮುಖ್ಯವಾಗಿತ್ತು.

2014ರಲ್ಲಿ ಪ್ರಧಾನಿಯಾಗುವುದಕ್ಕಿಂತ ಮೊದಲು 13 ವರ್ಷಗಳ ಕಾಲ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಅಹಮದಾಬಾದ್‌ನಲ್ಲಿ ನೆಲೆಸಿರುವ 90 ವರ್ಷ ದಾಟಿದ ತಮ್ಮ ತಾಯಿಯನ್ನು ಗುಜರಾತ್‌ಗೆ ತೆರಳಿದಾಗ, ಹುಟ್ಟುಹಬ್ಬದಂದು ಹಾಗೂ ವಿಶೇಷ ಸಂದರ್ಭಗಳಲ್ಲಿ ಅವರು ಭೇಟಿಯಾಗುತ್ತಾರೆ.