ನಾಳೆಯಿಂದ ಸಸ್ಯಕಾಶಿಯಲ್ಲಿ ಫಲಪುಷ್ಪ ಪ್ರದರ್ಶನ

news | Thursday, January 18th, 2018
Suvarna Web Desk
Highlights

ಬಾಹುಬಲಿ ಮತ್ತು ಭರತ ನಡುವಿನ ಸಂಘರ್ಷಕ್ಕೆ ಕುರಿತಂತೆ ಐತಿಹಾಸಿಕ ಕುರುಹುಗಳನ್ನು ಯುವಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ದೃಷ್ಠಿಯುದ್ಧ, ಜಲಯುದ್ಧ, ಮಲ್ಲ ಯುದ್ಧ ಹಾಗೂ ಚಕ್ರರತ್ನ ಪ್ರಯೋಗಗಳನ್ನು ಇಲ್ಲಿ ಕಾಣಬಹುದಾಗಿದೆ.

ಶ್ರವಣಬೆಳಗೊಳದ ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಅಂಗವಾಗಿ ಭಗವಾನ್ ಬಾಹುಬಲಿಯ ಜೀವನ ಚರಿತ್ರೆ ಬಿಂಬಿಸುವ ಪ್ರತಿಕೃತಿಗಳನ್ನು ಗಣರಾಜ್ಯೊತ್ಸವ ಫಲಪುಷ್ಪ ಪ್ರದರ್ಶನ ಅಂಗವಾಗಿ ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅನಾವರಣಗೊಳಿಸಲಾಗುತ್ತಿದೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘವು ಲಾಲ್ ಬಾಗ್‌ನ ಗಾಜಿನಮನೆಯಲ್ಲಿ ಜ.19ರಿಂದ 28ರವರೆಗೆ ಆಯೋಜಿಸಿರುವ 207ನೇ ಫಲ ಪುಷ್ಪಪ್ರದರ್ಶನದಲ್ಲಿ ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟ ಹಾಗೂ ಶಾಂತಿದೂತ ಗೊಮ್ಮಟಮೂರ್ತಿ ಕಾಣಬಹುದು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್ ಚಂದ್ರ ರೇ, ಗಾಜಿನಮನೆಯ ಮಧ್ಯಭಾಗದ ಗಿರಿಯಲ್ಲಿ 15 ಅಡಿ ಎತ್ತರದ ಬಾಹುಬಲಿ ಪ್ರಧಾನ ಪುತ್ಥಳಿ, ಗೊಮ್ಮಟವನ್ನು ಸುತ್ತುವರಿದ ರಕ್ಷಣಾ ಕೋಟೆ, ಕಲ್ಲು ಬಂಡೆ,ಗಿಡ ಮರಗಳಿಂದ ಕಂಗೊಳಿಸುವ ಇಂದ್ರಗಿರಿ ಯ ಬೆಟ್ಟವನ್ನು ನಿರ್ಮಾಣ ಮಾಡಲಾಗುತ್ತಿದೆ. ಗಾಜಿನ ಮನೆಯ ಎಡಭಾಗದಲ್ಲಿ ಬಾಹುಬಲಿಯ ಪಾದಗಳ ಯಥಾವತ್ ಪ್ರತಿರೂಪ ನಿರ್ಮಿಸಿ ಹಣತೆಯನ್ನು ಹಚ್ಚಿ ಪುಷ್ಪನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ, ಮೂರು ಅಡಿ ಪೀಠದ ಮೇಲೆ ನಿಂತ 11 ಅಡಿಯ ಎತ್ತರದ ಬಾಹುಬಲಿಯ ಪ್ರತಿರೂಪವನ್ನು ನಿರ್ಮಿಸುತ್ತಿದ್ದು, ಮೂರ್ತಿ ಯ ಹಿಂದೆ ಮಹಾಮಸ್ತಕಾಭಿಷೇಕಕ್ಕೆ ಅಣಿಗೊಳಿಸುವ ಅಟ್ಟಣಿಗೆ ರೂಪ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಬಾಹುಬಲಿ ಮತ್ತು ಭರತ ನಡುವಿನ ಸಂಘರ್ಷಕ್ಕೆ ಕುರಿತಂತೆ ಐತಿಹಾಸಿಕ ಕುರುಹುಗಳನ್ನು ಯುವಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ದೃಷ್ಠಿಯುದ್ಧ, ಜಲಯುದ್ಧ, ಮಲ್ಲ ಯುದ್ಧ ಹಾಗೂ ಚಕ್ರರತ್ನ ಪ್ರಯೋಗಗಳನ್ನು ಇಲ್ಲಿ ಕಾಣಬಹುದಾಗಿದೆ. ಮಹಾಮಸ್ತಕಾಭಿಷೇಕದ ಲಾಂಛನದ ಪ್ರತಿರೂಪ ಲಾಲ್ ಬಾಗ್‌ನಲ್ಲಿ ಅನಾವರಣಗೊಳ್ಳುತ್ತಿದೆ. ಶ್ರವಣ ಬೆಳಗೊಳ ಮಹಾಮಸ್ತಕಾಭಿಷೇಕ ಸಮಿತಿ, ಹಂಪಾ ನಾಗರಾಜಯ್ಯ ಹಾಗೂ ಚಾರು ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರ ಮಾರ್ಗ ದರ್ಶನದಲ್ಲಿ ಕಲಾವಿದ ರಂಜನ್ ನೇತೃತ್ವದ ತಂಡ ಮೂರ್ತಿಗೆ ರೂಪ ನೀಡಲು 15 ದಿನಗಳಿಂದ ಶ್ರಮಿಸುತ್ತಿದೆ. ಸಿಕ್ಕಿಂ ಹಾಗೂ ಡಾರ್ಜಿಲಿಂಗ್‌ನಿಂದ ಅಪರೂಪದ ಸುಮಾರು 500ಕ್ಕೂ ಹೆಚ್ಚು ಬಗೆಯ ಶೀತವಲಯಕ್ಕೆ ಹೊಂದಿಕೊಳ್ಳುವ ಹೂಗಳನ್ನು ತಂದು ಸಿಂಗರಿಸಲಾಗುತ್ತಿದೆ ಎಂದು ಹೇಳಿದರು.

ಸಿರಿಧಾನ್ಯ ಕಲಾಕೃತಿ:

ನವಣೆ, ಸಜ್ಜೆ, ರಾಗಿ,ಬರಗು ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಬಳಸಿ ಬಾಹುಬಲಿಯ ಮುಖದ ಕಲಾಕೃತಿ ರೂಪಿಸಲಾಗುತ್ತಿದೆ. ಇದು ಅತ್ಯಂತ ಸುಂದರವಾಗಿ ಮೂಡಿ ಬರುತ್ತಿದ್ದು, ಆಕರ್ಷಣೆ ಗಳಲ್ಲಿ ಒಂದಾಗಲಿದೆ. ಅಲ್ಲದೆ, ಬಣ್ಣ ಬಣ್ಣದ ಕೃತಕ ಪ್ಲಾಸ್ಟಿಕ್ ಹಣ್ಣಗಳಿಂದ ಬಾಹುಬಲಿಯ ಮುಖವನ್ನು ಚಿತ್ರಿಸಲಾಗುತ್ತಿದೆ. ಅಲ್ಲದೆ. ಫಲಪುಷ್ಪ ಪ್ರದಶನದಲ್ಲಿ ಲಾಲ್‌ಬಾಗ್‌ನ ಎಲ್ಲಾ ಭಾಗಗಳಲ್ಲಿ ತ್ಯಾಗ ಮತ್ತು ಶಾಂತಿ ಸಂದೇಶ ಸಾರುವ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಉದ್ಘಾಟನೆ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾಹಿತಿ ಹಂಪಾ ನಾಗರಾಜಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.

Comments 0
Add Comment

  Related Posts

  Shira Constituency at Doddavara Akada

  video | Sunday, April 8th, 2018

  Tamilians Protest at Karnataka Border

  video | Sunday, April 8th, 2018

  Fire Coming from inside Earth

  video | Saturday, April 7th, 2018

  Karnataka Mps Protest at NewDelhi

  video | Friday, April 6th, 2018

  Shira Constituency at Doddavara Akada

  video | Sunday, April 8th, 2018
  Suvarna Web Desk