ಮಾಸ್ಕೋ[ಅ.06]: ಸೈಬೀರಿಯಾದ ವಜ್ರಗಣಿಯೊಂದರಲ್ಲಿ ಅಪರೂಪದ ವಜ್ರ ಪತ್ತೆಯಾಗಿದೆ. ಇದರ ವೈಶಿಷ್ಟ್ಯವೆಂದರೆ ‘ದೊಡ್ಡ ವಜ್ರದಲ್ಲಿ ಚಿಕ್ಕ ವಜ್ರ’ ಇರುವುದು!

ಇಂತಹ ವಜ್ರ ಸಿಕ್ಕಿದ್ದು ವಿಶ್ವದಲ್ಲೇ ಮೊದಲು ಎಂದು ಹೇಳಲಾಗಿದೆ. ಇದು ಬೆಲೆಕಟ್ಟಕಾಗದ ವಜ್ರ. ಇದರ ಮೌಲ್ಯ ಎಷ್ಟುಎಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಅದನ್ನು ಹೊರತೆಗೆದ ಅಲ್ರೋಸಾ ಗಣಿ ಕಂಪನಿ ಹೇಳಿದೆ.

ರಷ್ಯಾದ ‘ಮಾತ್ರ್ಯೋಷ್ಕಾ’ ಗೊಂಬೆಯನ್ನು ಹೋಲುವಂತಹ ವಜ್ರ ಇದಾಗಿದೆ. ಹೀಗಾಗಿ ವಜ್ರಕ್ಕೆ ‘ಮಾತ್ರ್ಯೋಷ್ಕಾ’ ಎಂದು ನಾಮಕರಣ ಮಾಡಲಾಗಿದೆ. ಸೈಬೀರಿಯಾದ ನ್ಯೂರ್ಬಾ ವಜ್ರ ಗಣಿಯಲ್ಲಿ ಸಿಕ್ಕ ಇದು 800 ದಶಲಕ್ಷ ವರ್ಷದಷ್ಟುಹಳೆಯದಾದದ್ದು ಎಂದು ಅಂದಾಜಿಸಲಾಗಿದೆ.

ದೊಡ್ಡ ವಜ್ರ 62 ಕ್ಯಾರೆಟ್‌ ತೂಕದ್ದಾಗಿದ್ದು 4.8*4.9*2.8ಎಂಎಂ ಸುತ್ತಳತೆ ಹೊಂದಿದೆ. ಇನ್ನು ಅದರೊಳಗೆ ಇರುವ ಚಿಕ್ಕ ವಜ್ರ 0.2 ಕ್ಯಾರೆಟ್‌ ತೂಕ ಹೊಂದಿದ್ದು 1.9*2.1*0.6ಸುತ್ತಳತೆ ಹೊಂದಿದೆ.

‘ಇದು ನಿಸರ್ಗದ ವಿಶಿಷ್ಟಸೃಷ್ಟಿ. ಇಂತಹ ವಜ್ರ ಹಿಂದೆಂದೂ ಪತ್ತೆಯಾಗಿರಲಿಲ್ಲ’ ಎಂದು ಅಲ್ರೋಸಾ ಗಣಿ ಕಂಪನಿ ಹೇಳಿದೆ.

ಈ ವಜ್ರವನ್ನು ಮತ್ತಷ್ಟುಅಧ್ಯಯನಕ್ಕೆ ಒಳಪಡಿಸುವ ಉದ್ದೇಶದಿಂದ ಅಮೆರಿಕದ ರತ್ನಶಾಸ್ತ್ರೀಯ ಸಂಸ್ಥೆಗೆ ಕಳಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.