ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಇದೀಗ ಸಂಕಷ್ಟ ಎದುರಾಗಿದೆ. ಹರ್ಯಾಣದಲ್ಲಿ ನಡೆದಿದೆ ಎನ್ನಲಾದ ಭೂಹಗರಣ ಪ್ರಕರಣವೊಂದರ ಸಂಬಂಧ ಗುರುಗ್ರಾಮ ಪೊಲೀಸರು, ರಾಬರ್ಟ್ ವಾದ್ರಾ, ಹರ್ಯಾಣದ ಮಾಜಿ ಸಿಎಂ ಭೂಪಿಂದರ್ ಹೂಡಾ ಸೇರಿದಂತೆ ಹಲವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಚಂಡೀಗಢ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ಭೂ ಸಂಕಷ್ಟಎದುರಾಗಿದೆ. ಹರ್ಯಾಣದಲ್ಲಿ ನಡೆದಿದೆ ಎನ್ನಲಾದ ಭೂಹಗರಣ ಪ್ರಕರಣವೊಂದರ ಸಂಬಂಧ ಗುರುಗ್ರಾಮ ಪೊಲೀಸರು, ರಾಬರ್ಟ್ ವಾದ್ರಾ, ಹರ್ಯಾಣದ ಮಾಜಿ ಸಿಎಂ ಭೂಪಿಂದರ್ ಹೂಡಾ ಸೇರಿದಂತೆ ಹಲವರ ವಿರುದ್ಧ ಕೇಸು ಎಫ್ ಐ ಆರ್ ದಾಖಲಿಸಿದ್ದಾರೆ. ವಾದ್ರಾ ಮತ್ತು ಹೂಡಾ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ, ಮೋಸದ ಉದ್ದೇಶದಿಂದ ಸುಳ್ಳು ದಾಖಲಾತಿ ಸೃಷ್ಟಿಸಿದ ಆರೋಪಗಳನ್ನು ಖೇಡ್ಕಿ ದೌಲಾ ಠಾಣೆಯಲ್ಲಿ ದಾಖಲಿಸಲಾಗಿದೆ.
ಏನಿದು ಪ್ರಕರಣ?: 2007ರಲ್ಲಿ ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆ ಕೇವಲ 1 ಲಕ್ಷ ರು.ಬಂಡವಾಳದೊಂದಿಗೆ ನೋಂದಣಿಯಾಗಿತ್ತು. ಈ ಕಂಪನಿ ಹರ್ಯಾಣದ ಎರಡು ಪ್ರದೇಶಗಳಲ್ಲಿ 3.5 ಎಕರೆ ಜಾಗವನ್ನು ಓಂಕಾರೇಶ್ವರ ಪ್ರಾಪರ್ಟಿಸ್ ಸಂಸ್ಥೆಯಿಂದ 7.5 ಕೋಟಿ ರು.ಗೆ ಖರೀದಿಸಿತ್ತು. 2008ರಲ್ಲಿ ಈ ಜಾಗದಲ್ಲಿ ವಾಣಿಜ್ಯ ಸಮುಚ್ಛಯ ನಿರ್ಮಿಸಲು ಸಿಎಂ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತ್ತು. ಆದರೆ ಈ ಹಂತದಲ್ಲಿ ಸ್ಕೈಲೈಟ್ ಕಂಪನಿ ಕಟ್ಟಡ ನಿರ್ಮಾಣ ಮಾಡುವ ಬದಲು ಭರ್ಜರಿ 58 ಕೋಟಿ ರು.ಗೆ ಜಾಗವನ್ನು ಡಿಎಲ್‌ಎಫ್ ಕಂಪನಿಗೆ ಮಾರಿತ್ತು.
ವಿಶೇಷವೆಂದರೆ ಸ್ಕೈಲೈಟ್‌ಗೆ ಈ ಮೊದಲು ಜಾಗ ನೀಡಿದ್ದ ಓಂಕಾರೇಶ್ವರ ಕಂಪನಿಯು, ಸ್ಕೈಲೈಟ್ ನೀಡಿದ್ದ 7.5 ಕೋಟಿ ರು.ಮೊತ್ತದ ಚೆಕ್ ಅನ್ನು ನಗದೀಕರಣ ಮಾಡಿರಲೇ ಇಲ್ಲ. ಮತ್ತೊಂದೆಡೆ ಇದ್ದಕ್ಕಿದ್ದಂತೆ ಭರ್ಜರಿ ಮೊತ್ತಕ್ಕೆ 3.5 ಎಕರೆ ಜಾಗವನ್ನು 58 ಕೋಟಿ ರು.ಗೆ ಸ್ಕೈಲೈಟ್ ಕಂಪನಿ ಮಾರಿತ್ತು. ಇದರ ಹಿಂದೆ ಭಾರೀ ಆಕ್ರಮ ಇದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಂತರ ಅಧಿಕಾರಕ್ಕೆ ಬಂದ ಸಿಎಂ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ತನಿಖೆಗೆ ಆದೇಶಿಸಿತ್ತು. ಮತ್ತೊಂದೆಡೆ ಪೊಲೀಸರೂ ಕೇಸು ದಾಖಲಿಸಿಕೊಂಡಿದ್ದರು.
