- 20 ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ ನಿಂಗರಾಜು, ಮಕ್ಕಳನ್ನು ಬಿಟ್ಟು ದೂರವಾಗಿದ್ದರು.- ಬಂಧುಗಳಿಂದ ಫೋನ್ ನಂಬರ್ ಪಡೆದು, ಮಕ್ಕಳನ್ನು ನೋಡಲು ಬೆಂಗಳೂರಿಗೆ ಆಗಮನ.- ರಸ್ತೆ ದಾಟುವಾಗ ಅಪರಿಚಿತ ವಾಹನಕ್ಕೆ ಬಲಿ.
ಬೆಂಗಳೂರು: ಆತನಿಗೆ ತನ್ನ ಕುಟುಂಬವೆಂದರೆ ತುಂಬಾನೇ ಇಷ್ಟ. ಖುಷಿಯಾಗಿಯೇ ಇದ್ದ ಸಂಸಾರದಲ್ಲಿ ಹೆಂಡತಿ ಸಾವು ಆತನನ್ನು ಖಿನ್ನತೆಗೊಳಗಾಗುವಂತೆ ಮಾಡಿತ್ತು. ಆಗ ತನ್ನಿಬ್ಬರು ಮಕ್ಕಳನ್ನು ಬಿಟ್ಟು, ಎಲ್ಲಿಯೋ ಮರಳಿದವನು ಅಜ್ಞಾತ ಸ್ಥಳದಲ್ಲಿದ್ದ.
ಇತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು, ತಂದೆಯೂ ಮೃತಪಟ್ಟಿದ್ದಾರೆಂದುಕೊಂಡೇ ಬದುಕಿದ್ದರು. ಆದರೆ, ಬರೋಬ್ಬರಿ 20 ವರ್ಷಗಳ ನಂತರ ಮಕ್ಕಳನ್ನು ನೋಡಲು ಬಂದ ತಂದೆ ನಿಂಗರಾಜು ವಿಧಿಯಾಟಕ್ಕೆ ಬಲಿಯಾಗಿದ್ದು ಮಾತ್ರ ದುರಂತ.
ರಸ್ತೆ ದಾಟುವಾಗ ಅಪರಿಚಿತ ವಾಹನವೊಂದಿ ಡಿಕ್ಕಿಯಾಗಿ ನಿಂಗರಾಜು (50) ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಹಳೆಯ ನೆನಪುಗಳು ನಿಂಗರಾಜುವಿಗೆ ಮರುಕಳಿಸಿತ್ತು. ಸಂಬಂಧಿಕರಿಂದ ಫೋನ್ ನಂಬರ್ ಪಡೆದು, ಮಕ್ಕಳನ್ನು ನೋಡಲು ಬೆಂಗಳೂರಿಗೆ ಆಗಮಿಸಿದ್ದರು. ಮುಂಜಾನೆ 3 ಗಂಟೆಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದರು. ಮಕ್ಕಳನ್ನು ನೋಡುವ ಮುನ್ನವೇ ಯಮಸ್ವರೂಪಿಯಂತೆ ಬಂದ ಕಾರಿಗೆ ಬಲಿಯಾಗಿದ್ದಾರೆ.
ಅವರ ಬ್ಯಾಗ್‌ನಲ್ಲಿದ್ದ ಮಗಳ ಫೋನ್ ನಂಬರ್ ಬೆನ್ನತ್ತಿದ ಪೊಲೀಸರಿಗೆ ಇವರ ಹಿನ್ನೆಲೆ ಅರಿವಿಗೆ ಬಂದಿದೆ. ಮಗಳಿಗೆ ಫೋನ್ ಮಾಡಿ ತಂದೆ ಮೃತಪಟ್ಟಿದ್ದಾರೆ, ನೋಡಲು ಬನ್ನಿ ಎಂದರೂ ಮಗಳು ನಂಬಲಿಲ್ಲ. ಮತ್ತೆ ಮತ್ತೆ ಫೋನ್ ಮಾಡಿದಾಗ, ವಿಕ್ಟೋರಿಯಾ ಶವಾಗಾರಕ್ಕೆ ಬಂದು ನೋಡಿದಾಗ ತಂದೆಯ ಶವ. 20 ವರ್ಷಗಳ ನಂತರ ತಂದೆಯ ದರ್ಶನ ಭಾಗ್ಯ ಸಿಕ್ಕಿದ್ದಕ್ಕೆ ಖುಷಿಪಡಬೇಕಾದವರು, ಮೃತ ದೇಹ ನೋಡಬೇಕಾಗಿ ಬಂದಿದ್ದು ಮಾತ್ರ ನಿಜವಾಗಲೂ ದುರಂತ.
ಸಂತೋಷದಿಂದ ಮಕ್ಕಳನ್ನು ನೋಡೋಕೆ ಬಂದವರು, ಕೊನೆಗೂ ತನ್ನ ಮಕ್ಕಳನ್ನು ನೋಡದೇ ಇಹಲೋಕ ತ್ಯಜಿಸಿದ್ದಾನರೆ ಲಿಂಗರಾಜು. ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಸಂಚಾರ ಪೊಲೀಸರು ಡಿಕ್ಕಿ ಹೊಡೆದ ಕಾರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇತ್ತ ಪ್ರಕರಣ ದಾಖಲು ಮಾಡಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಅಪಘಾತ ಮಾಡಿದ ಕಾರು ಚಾಲಕನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ...
