ಅತಿಯಾದ ಎಡಪಂಥೀಯ ಚಿಂತನೆಗಳೇ ನನ್ನ ಅಕ್ಕನ ಸಾವಿಗೆ ಕಾರಣ ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದ್ದಾರೆ.

ಬೆಂಗಳೂರು (ಸೆ.07): ಅತಿಯಾದ ಎಡಪಂಥೀಯ ಚಿಂತನೆಗಳೇ ನನ್ನ ಅಕ್ಕನ ಸಾವಿಗೆ ಕಾರಣ ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದ್ದಾರೆ.

ಗೌರಿ ಲಂಕೇಶ್ ಸಾವಿನ ಹಿಂದೆ ನಕ್ಸಲರ ಕೈವಾಡವಿರಬಹುದೇ ಎನ್ನುವ ಅನುಮಾನವನ್ನು ಕವಿತಾ ಲಂಕೇಶ್ ತಳ್ಳಿ ಹಾಕಿದ್ದು, ನನ್ನ ಅಕ್ಕ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದರು. ಆಕೆಗೆ ನಕ್ಸಲಿಸಂ ಬಗ್ಗೆ ದ್ವೇಷ ರಲಿಲ್ಲ. ನಿಮ್ಮ ಗನ್ ಅನ್ನು ಕೆಳಗಿಟ್ಟು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಹೇಳುತ್ತಿದ್ದರು. ನಕ್ಸಲರಿಂದ ಬೆದರಿಕೆ ಎಂದು ನಾನು ಯೋಚಿಸುವುದಿಲ್ಲ. ಅವರು ಇದೇ ರೀತಿ ಸಾಕಷ್ಟು ಹೋರಾಟವನ್ನು ಮಾಡಿದ್ದರು ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

ಗೌರಿ ಲಂಕೇಶ್ ತನಗೆ ಬೆದರಿಕೆ ಎನ್ನುವುದನ್ನು ಯಾವತ್ತೂ ಹೇಳಿರಲಿಲ್ಲ. ಆಕೆಗೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಅಪಾರವಾದ ನಂಬಿಕೆಯಿತ್ತು. ಹಂತಕರು ಕೇವಲ ಗೌರಿಯನ್ನು ಮಾತ್ರ ಸಾಯಿಸಿಲ್ಲ. ಜೊತೆಗೆ ಅವರ ವೈಚಾರಿಕ ಸಿದ್ಧಾಂತಗಳು, ಅವರ ಧ್ವನಿಯನ್ನು ಸಾಯಿಸಿದ್ದಾರೆ. ಅಕ್ಕನ ಎಡಪಂಥೀಯ ಸಿದ್ಧಾಂತಗಳೇ ಅವರ ಸಾವಿಗೆ ಕಾರಣವಾಯಿತು. ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.